ಅಹ್ಮದಾಬಾದ್: ಗುಜರಾತ್‌ನಲ್ಲಿ ದೇಗುಲದ ಜಾತ್ರೆಯ ಮೆರವಣಿಗೆ ವೇಳೆ ವಿದ್ಯುತ್ ಅವಘಡವೊಂದು ಸಂಭವಿಸಿದ್ದು, ದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಘಟನೆಯ ದೃಶ್ಯಾವಳಿಗಳು ಮೆರವಣಿಗೆಯಲ್ಲಿದ್ದ ಜನರ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆನೆ ಮೇಲೆ ತೊಟ್ಟಿಲನ್ನು ಕಟ್ಟಿ ಅದರಲ್ಲಿ ಸ್ವಾಮೀಜಿಯೊಬ್ಬರು, ಮತ್ತಿಬ್ಬರು ವ್ಯಕ್ತಿಗಳು ಹಾಗೂ ತೊಟ್ಟಿಲಿನ ಹೊರಗೆ ಆನೆ ಮೇಲೆ ಮಾವುತ, ಇಷ್ಟೊಂದು ಜನ ಆನೆ ಮೇಲೆ ಕುಳಿತುಕೊಂಡು ರಸ್ತೆಯಲ್ಲಿ ಸಾಗುತ್ತಿದ್ದರೆ ಇನ್ನುಳಿದ ನೂರಾರು ಜನ ಆನೆಯ ಹಿಂದೆ ಮುಂದೆ ಹೆಜ್ಜೆ ಹಾಕಿಕೊಂಡು ಮೆರವಣಿಗೆಯಲ್ಲಿ ಸಾಗುತ್ತಿದ್ದರು. ಆದರೆ ಮೇಲೆ ಕುಳಿತವರು ಮಾಡಿದ ಅವಾಂತರದ ಪರಿಣಾಮ ಆನೆಗೆ ವಿದ್ಯುತ್ ಶಾಕ್ ತಗುಲಿ ಓಡಲು ಶುರು ಮಾಡಿದೆ.
ರಸ್ತೆಯ ಮೇಲೆ ಎತ್ತರದಲ್ಲಿ ನೇತಾಡುತ್ತಿದ್ದ ವಿದ್ಯುತ್ ವೈರ್‌ಗೆ ಮೇಲೆ ಆನೆ ಮೇಲೆ ಕುಳಿತಿದ್ದ ಜನರ ಬಳಿ ಇದ್ದ ಅಲಂಕರಿಸಲ್ಪಟ್ಟ ಛತ್ರಿಯೊಂದು ತಾಗಿದ್ದು, ಇದರಿಂದ ಆನೆಗೆ ಶಾಕ್ ಹೊಡೆದಿದ್ದು, ಗಲಿಬಿಲಿಗೊಂಡ ಆನೆ ಬಿದ್ನೋ ಎದ್ನೋ ಅಂತ ಓಡಾಲು ಶುರು ಮಾಡಿದೆ. ಪರಿಣಾಮ ಆನೆ ಮೇಲೆ ಕುಳಿತ ಸ್ವಾಮೀಜಿ, ಸ್ವಾಮೀಜಿಯ ಸಹಚರರು ಕೊಡೆ ಹಿಡಿದವರು ಎಲ್ಲರೂ ಸೆಕೆಂಡ್‌ಗಳಲ್ಲಿ ರಸ್ತೆಗೆ ಬಿದ್ದಿದ್ದಾರೆ. ಗುಜರಾತ್‌ನ ಮಹೇಶನಾ ಜಿಲ್ಲೆಯ ಕಸ್ವಾ ಗ್ರಾಮದ ವಡ್ವಾಲಾ ದೇಗುಲದ ಮಹಂತ ಕನಿರಾಮ್ ಬಾಪು ಅವರ ಮೆರವಣಿಗೆ ವೇಳೆ ಈ ಅನಾಹುತ ಸಂಭವಿಸಿದೆ.
ಕನಿರಾಮ್ ಬಾಪು ಅವರನ್ನು ದೇಗುಲದಿಂದ ಆನೆ ಮೇಲೆ ಹೊರಗೆ ಕರೆದೊಯ್ಯುವ ವೇಳೆ ಈ ಅವಘಡ ಸಂಭವಿಸಿದೆ. ಮಹಂತ್ ಕನಿರಾಮ್ ಬಾಪು ಜೊತೆಯಲ್ಲಿ, ಮಹಂತ್ ರಾಜಾ ಭುವಾ ಹಾಗೂ ಮತ್ತಿಬ್ಬರು ಆನೆಯ ಮೇಲೆ ಕುಳಿತಿದ್ದರು. ಆನೆ ಮೇಲಿದ್ದವರಿಗೆ ನೆರಳು ಒದಗಿಸಲು ಅಲಂಕರಿಸಿದ್ದ ಛತ್ರಿಯನ್ನು ಹಿಡಿದಿದ್ದಾರೆ. ಈ ವೇಳೆ ಈ ಛತ್ರಿ ಮೇಲಿದ್ದ ವಿದ್ಯುತ್ ವೈರ್‌ಗೆ ಸಿಲುಕಿ ಈ ಅವಘಡ ಸಂಭವಿಸಿದೆ. ವಿದ್ಯುತ್ ಶಾಕ್‌ಗೆ ಒಳಗಾದ ಕೂಡಲೇ ಆನೆ ಓಡಲು ಶುರು ಮಾಡಿದ್ದು, ಆನೆ ಮೇಲಿದ್ದ ಸ್ವಾಮೀಜಿ ಸೇರಿದಂತೆ ಎಲ್ಲರೂ ದೊಪ್ಪೆಂದು ಕೆಳಗೆ ಬಿದ್ದಿದ್ದಾರೆ. ಈ ವೇಳೆ ಮೆರವಣಿಗೆಯಲ್ಲಿ ಹೊರಟಿದ್ದ ಜನರೆಲ್ಲಾ ಬೊಬ್ಬೆ ಹೊಡೆಯಲು ಶುರು ಮಾಡಿದ್ದಾರೆ. ಇತ್ತ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರ ತರಹದ ಕಾಮೆಂಟ್ ಮಾಡಿದ್ದಾರೆ. ಆನೆ ಕ್ಷೇಮವಾಗಿರುವುದಕ್ಕೆ ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಆನೆ ಒಳ್ಳೆ ಕೆಲಸ ಮಾಡಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇಷ್ಟೆಲ್ಲಾ ಸೌಲಭ್ಯಗಳಿದ್ದರೂ ಆನೆ ಮೇಲೆ ಕೂರಬೇಕೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಆದರೆ ಈ ಅವಘಡದಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ ಆನೆ ಮೇಲೆ ಕುಳಿತವರು ಕೆಳಗೆ ಬಿದ್ದ ಪರಿಣಾಮ ಸಣ್ಣಪುಟ್ಟ ಗಾಯಗಳಾಗಿವೆ.