ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ನಾಳೆ (ಮೇ.10) ರಂದು ನಡೆಯಲಿದ್ದು, ರಾಜ್ಯಾದ್ಯಂತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ 58,282 ಮತಗಟ್ಟೆಗಳಿದ್ದು, ಭದ್ರತೆಗಾಗಿ 1.56 ಲಕ್ಷ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ರಾಜ್ಯದ 84,119 ಪೊಲೀಸರ ಜೊತೆಗೆ ನೆರೆ ರಾಜ್ಯದ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ. ಹೊರರಾಜ್ಯದಿಂದ 8,500 ಪೊಲೀಸರು, 650 ಸಿಆರ್ಪಿಎಫ್ ತುಕಡಿಯನ್ನು ಕರೆಸಿಕೊಳ್ಳಲಾಗಿದೆ. 304 ಡಿವೈಎಸ್ಪಿ, 991 ಇನ್ಸ್ಪೆಕ್ಟರ್ಸ್, 2,610 ಪಿಎಸ್ಐ, 108 ಬಿಎಸ್ಎಫ್, 75 ಸಿಐಎಸ್ಎಫ್, 70 ಐಟಿಬಿಪಿ, 35 ಆರ್ಫಿಎಫ್ ಬಂದೋಬಸ್ತಗೆ ನಿಯೋಜಿಸಲಾಗಿದೆ.
ವಿಶೇಷವಾಗಿ 2,930 ಪೊಲೀಸ್ ಮೊಬೈಲ್ ಸೆಕ್ಟರ್ಗಳ ಕಾರ್ಯಾಚರಣೆ, ಮೊಬೈಲ್ ಸೆಕ್ಟರ್ ಮೇಲ್ವಿಚಾರಣೆಗೆ 749 ಸೂಪರ್ವೈಸರ್, ರಾಜ್ಯದ ಗಡಿ ಭಾಗದಲ್ಲಿ ವಾಹನಗಳ ತಪಾಸಣೆ ಮಾಡಿ ಬಿಡಲು ಸೂಚನೆ ನೀಡಲಾಗಿದೆ.
ಕರ್ನಾಟಕ ವಿಧಾನಸಭೆ ಚುನಾವೆಣೆಯ ಮತದಾನದ ದಿನಕ್ಕೆ ಒಂದೇ ದಿನ ಬಾಕಿ ಇದೆ. ಬುಧವಾರ (ಮೇ.10) ಮತದಾನ ನಡೆಯಲಿದೆ. ಇದು ನೀವು ನಿಮ್ಮ ಜನಪ್ರತಿನಿಧಿಯನ್ನು ಆರಿಸುವ ದಿನವಾಗಿದೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ನಿಮ್ಮ ಒಂದು ಮತ ಬಹಳ ಮುಖ್ಯವಾಗಿದೆ. ನಿಮ್ಮ ಒಂದು ಮತ ರಾಜ್ಯಕ್ಕೆ ಹಿತ ತರಲಿ. ಹೀಗಾಗಿ ತಪ್ಪದೇ ಮತ ಚಲಾಯಿಸಿ. ರಾಜಕೀಯ ಪಕ್ಷಗಳ ಅಬ್ಬರದ ಪ್ರಚಾರ ಮುಕ್ತಾಯವಾಗಿದೆ. ನಾಳೆಯ ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬಕ್ಕೆ ಚುನಾವಣಾ ಆಯೋಗ ಸಕಲ ಸಿದ್ದತೆ ಮಾಡಿಕೊಳ್ಳುತ್ತಿದೆ. ರಾಜ್ಯದಲ್ಲಿ 9.17 ಲಕ್ಷ ಜನರು ಮೊದಲ ಬಾರಿಗೆ ಮತದಾನ ಮಾಡುತ್ತಿದ್ದಾರೆ. ಹಾಗೇ ಹಲವು ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದೆ.