ಕೂಗು ನಿಮ್ಮದು ಧ್ವನಿ ನಮ್ಮದು

22 ವರ್ಷ ಬಳಿಕ ಇವತ್ತು ಕಾಂಗ್ರೆಸ್ ಎಲೆಕ್ಷನ್!

ಬೆಂಗಳೂರು: ದೇಶದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆ ಸೋಮವಾರ ನಡೆಯಲಿದ್ದು, ರಾಜ್ಯದಲ್ಲಿ ಬೆಂಗಳೂರಿನ ಕೆಪಿಸಿಸಿ ಪ್ರಧಾನ ಕಚೇರಿಯಲ್ಲಿ ನಡೆಯಲಿರುವ ಮತದಾನ ಪ್ರಕ್ರಿಯೆಗೆ ಎಲ್ಲಾ ರೀತಿಯ ಸಿದ್ಧತೆ ನಡೆಸಲಾಗಿದೆ. ದೇಶಾದ್ಯಂತ ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆಗೆ 9,100 ಮಂದಿ ಮತದಾನ ನಡೆಸಲು ಅರ್ಹರಾಗಿದ್ದು, ರಾಜ್ಯದಿಂದ 503 ಮಂದಿ ಮತದಾನ ಮಾಡಲಿದ್ದಾರೆ. 479 ಮಂದಿ ಪಿಸಿಸಿ ಪ್ರತಿನಿಧಿಗಳು ಸೇರಿದಂತೆ ಒಟ್ಟು 503 ಮಂದಿ ಮತದಾನ ಹಕ್ಕು ಚಲಾಯಿಸಲಿದ್ದಾರೆ.

ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದ್ದು, ರಾಜ್ಯದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಮಾತ್ರ ಮತಗಟ್ಟೆವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ರಾಜ್ಯದ ಎಲ್ಲಾ ಮತದಾರರೂ ಬೆಂಗಳೂರಿಗೆ ಆಗಮಿಸುವಂತೆ ಶಾಸಕಾಂಗ ಪಕ್ಷದ ನಾಯಕರು ನೋಟಿಸ್‌ ನೀಡಿದ್ದಾರೆ.

ಎಐಸಿಸಿ ಅಧ್ಯಕ್ಷ ಸ್ಥಾನದ ಸ್ಪರ್ಧಿ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಕೆಪಿಸಿಸಿ ಕಚೇರಿಯಲ್ಲೇ ಮತದಾನ ಮಾಡಲಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸಿದ್ಧತೆ:

ಬೆಂಗಳೂರಿನ ಕ್ವೀನ್‌ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮತದಾನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೆಪಿಸಿಸಿ ಕಚೇರಿ ಮಾತ್ರವೇ ಏಕೈಕ ಮತಗಟ್ಟೆಯಾಗಲಿದೆ. ರಾಹುಲ್‌ಗಾಂಧಿ ಹಾಗೂ ಯಾತ್ರಿಗಳ ಹೊರತಾಗಿ ಯಾರಿಗೂ ಬಳ್ಳಾರಿಯ ವಿಶೇಷ ಮತಗಟ್ಟೆಯಲ್ಲಿ ಅವಕಾಶವಿಲ್ಲ. ಹೀಗಾಗಿ ಪಾದಯಾತ್ರೆಯಲ್ಲಿರುವ ಎಲ್ಲರಿಗೂ ಬೆಂಗಳೂರಿಗೆ ಆಗಮಿಸುವಂತೆ ಸೂಚಿಸಲಾಗಿದೆ. ಬೆಂಗಳೂರಿನಲ್ಲಿ ಮತದಾನ ಮುಗಿದ ಬಳಿಕ ಬ್ಯಾಲೆಟ್‌ ಪೆಟ್ಟಿಗೆಯನ್ನು ದೆಹಲಿಗೆ ರವಾನಿಸಲಾಗುವುದು. ಅ.19 ರಂದು ದೆಹಲಿಯ ಎಐಸಿಸಿ ಕಚೇರಿಯಲ್ಲಿ ಮತ ಎಣಿಕೆ ನಡೆದು ಅಂದೇ ಅಂತಿಮ ಫಲಿತಾಂಶ ಪ್ರಕಟಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಚುನಾವಣೆಯಲ್ಲಿ ಶಶಿ ತರೂರ್‌ ಹಾಗೂ ಖರ್ಗೆ ನಡುವೆ ಹಣಾಹಣಿ ಏರ್ಪಟ್ಟಿದ್ದು, ಸಹಜವಾಗಿಯೇ ರಾಜ್ಯದಿಂದ ಖರ್ಗೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರ ಬೆಂಬಲವೂ ಮಲ್ಲಿಕಾರ್ಜುನ ಖರ್ಗೆ ಅವರಿಗಿದೆ.

ಬಳ್ಳಾರಿಯ ಸಂಗನಕಲ್ಲಿನಲ್ಲಿ ರಾಹುಲ್‌ ಮತದಾನ

ಬಳ್ಳಾರಿ ಜಿಲ್ಲೆಯ ಸಂಗನಕಲ್ಲು ಭಾರತ ಐಕ್ಯತಾ ಯಾತ್ರೆಯ ಕ್ಯಾಂಪ್‌ನಲ್ಲಿ ವ್ಯವಸ್ಥೆ ಮಾಡಿರುವ ವಿಶೇಷ ಮತಗಟ್ಟೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ಮತದಾನ ಮಾಡಲಿದ್ದಾರೆ.

ಅವರೊಂದಿಗೆ 40 ಜನ ಇತರೆ ಭಾರತ ಯಾತ್ರಿಗಳು ಹಾಗೂ ಪಿಸಿಸಿ ಸದಸ್ಯರು ಮತದಾನ ಮಾಡಲಿದ್ದಾರೆ. ಜತೆಗೆ ಸ್ಥಳೀಯ ಶಾಸಕ ನಾಗೇಂದ್ರ, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್‌, ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಅವರಿಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ.

ರಾಹುಲ್‌ಗಾಂಧಿ ಎಲ್ಲಿ ಮತದಾನ ಮಾಡಲಿದ್ದಾರೆ ಎಂಬ ಬಗ್ಗೆ ಊಹಾಪೋಹ ಸೃಷ್ಟಿಯಾಗಿದ್ದರಿಂದ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಟ್ವೀಟ್‌ ಮಾಡಿ ಸ್ಪಷ್ಟನೆ ನೀಡಿದ್ದು, ರಾಹುಲ್‌ ಬಳ್ಳಾರಿಯಿಂದ ಪಕ್ಷದ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲು ಮತ ಚಲಾಯಿಸಲಿದ್ದಾರೆ ಎಂದಿದ್ದಾರೆ.

22 ವರ್ಷ ಬಳಿಕ ಚುನಾವಣೆ:

ಸೋಮವಾರ ನಡೆಯಲಿರುವ ಚುನಾವಣೆಗೆ ಪಕ್ಷದ ಉನ್ನತ ಸ್ಥಾನಕ್ಕೆ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್‌ ನಡುವೆ ನೇರ ಹಣಾಹಳಿ ಏರ್ಪಟ್ಟಿದೆ. 22 ವರ್ಷಗಳ ಬಳಿಕ ಗಾಂಧಿ ಕುಟುಂಬೇತರ ವ್ಯಕ್ತಿಗಳ ನಡುವೆ ಪಕ್ಷದ ಅಧ್ಯಕ್ಷ ಗಾದಿಗೆ ಪೈಪೋಟಿ ನಡೆದಿದೆ. 2000ನೇ ಸಾಲಿನ ನವೆಂಬರ್‌ ತಿಂಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆದಿದ್ದ ಕೊನೆಯ ಚುನಾವಣೆಯಲ್ಲಿ ಜಿತೇಂದ್ರ ಪ್ರಸಾದ್‌ ಅವರು ಸೋನಿಯಾಗಾಂಧಿ ವಿರುದ್ಧ ಸೋತಿದ್ದರು. 2017ರಿಂದ 19ರವರೆಗೆ ಎರಡು ವರ್ಷ ರಾಹುಲ್‌ಗಾಂಧಿ ಅಧ್ಯಕ್ಷ ಸ್ಥಾನದಲ್ಲಿ ಇದ್ದದ್ದು ಬಿಟ್ಟರೆ ಉಳಿದಂತೆ 1998ರಿಂದಲೂ ಸೋನಿಯಾಗಾಂಧಿ ಅವರೇ ಪಕ್ಷದ ಅಧ್ಯಕ್ಷರಾಗಿದ್ದಾರೆ. ಇದೀಗ 22 ವರ್ಷಗಳ ಬಳಿಕ ಚುನಾವಣೆ ನಡೆಯುತ್ತಿದೆ.

error: Content is protected !!