ಬೆಂಗಳೂರು: 2 ದಶಕಗಳ ಹಿಂದೆ ಪ್ರಯಾಣಿಕರ, ಮಕ್ಕಳ ಮನಸ್ಸು ಸೆಳೆಯುತ್ತಿದ್ದ ಡಬಲ್ ಡೆಕ್ಕರ್ ಬಸ್ಗಳ ಸಂಚಾರ ಮತ್ತೆ ಆರಂಭವಾಗಲಿದೆ. ಇದು ಪ್ರಯಾಣಿಕರಲ್ಲಿ ಇನ್ನಷ್ಟು ಖುಷಿ ತರಲಿದೆ. ಬಸ್ಗಳ ಖರೀದಿಗಾಗಿ ಈಗಾಗಲೆ ಬಿಎಂಟಿಸಿ ಆಡಳಿತ ಮಂಡಳಿಯಿಂದ ಹಸಿರು ನಿಶಾನೆ ಸಿಕ್ಕಿದೆ. ಆದರೆ ಬಸ್ ತಯಾರಿಕೆ ಕಂಪನಿಗಳಿಂದ ಪೂರಕ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಬಸ್ ಖರೀದಿ ವಿಳಂಬವಾಗಿದೆ. ಇದೀಗ ಪಾಶ್ಚಿಮಾತ್ಯ ದೇಶದಿಂದ ಬಸ್ ತರಿಸಿ ಪ್ರಾಯೋಗಿಕವಾಗಿ ಬಸ್ ರೋಡಿಗಿಳಿಸಲು ತೀರ್ಮಾನಿಸಲಾಗಿದೆ.
ಹೌದು! ಹಲವು ವರ್ಷಗಳ ಹಿಂದೆ ಬೆಂಗಳೂರಿನ ರಸ್ತೆಗಳಲ್ಲಿ ಡಬಲ್ ಡೆಕ್ಕರ್ ಬಸ್ಗಳು ಅತ್ಯಂತ ಗಮನ ಸೆಳೆಯುತ್ತಿದ್ದವು. ಈ ಬಸ್ಗಳಿಗೆ ಹತ್ತಿ ಮುಂಬದಿ ಸೀಟ್ ಹಿಡಿದು ನಗರದ ಸೌಂದರ್ಯ ಸವಿಯುವುದಕ್ಕೆ ಜನ ಮುಗಿಬೀಳ್ತಿದ್ರು. ಆದರೆ ಕಾಲಕ್ರಮೇಣ ಮರೆಯಾಗಿದ್ದ ಡಬಲ್ ಡೆಕ್ಕರ್ ಬಸ್ಗಳನ್ನು ಮತ್ತೆ ನಗರದಲ್ಲಿ ರಸ್ತೆಗಿಳಿಸಲು ಬಿಎಂಟಿಸಿ ತಯಾರಿ ನಡೆಸಿದೆ. 80 ಮತ್ತು 90ರ ದಶಕದಲ್ಲಿ ಬೆಂಗಳೂರಿನ ಹಲವು ರಸ್ತೆಗಳಲ್ಲಿ ಡಬ್ಬಲ್ ಡೆಕ್ಕರ್ ಬಸ್ಗಳದ್ದೇ ಕಾರುಬಾರು ಆಗಿತ್ತು. ನಗರ ಬೆಳೆಯುತ್ತಾ ಹೋದಂತೆ ಮಹಾನಗರದ ರಸ್ತೆಗಳಿಂದ ಡಬ್ಬಲ್ ಡೆಕ್ಕರ್ ಬಸ್ಗಳು ಕಾಣೆಯಾದವು.
ಇದೀಗ ಮತ್ತೆ ಬೆಂಗಳೂರಿನ ರಸ್ತೆಗಳಲ್ಲಿ ಓಡಾಡಲು ಡಬ್ಬಲ್ ಡೆಕ್ಕರ್ ಬಸ್ಗಳು ಬರ್ತಿವೆ. ಯುವಕರು ಮತ್ತು ಮಕ್ಕಳಿಗೆ ಬೆಂಗಳೂರಿನ ಹಳೆಯ ಐತಿಹಾಸಿಕ ವೈಭವವನ್ನು ಪರಿಚಯ ಮಾಡಿಕೊಡುವ ಉದ್ದೇಶದಿಂದ ಬಸ್ಗಳನ್ನ ರೋಡಿಗಿಳಿಸಲು ಬಿಎಂಟಿಸಿ ತೀರ್ಮಾನಿಸಿದೆ. ಮುಂಬೈನಲ್ಲಿ ಮಾತ್ರ ಡಬ್ಬಲ್ ಡೆಕ್ಕರ್ ಬಸ್ಗಳ ಓಡಾಟವಿದ್ದು, ಪ್ರಾಯೋಗಿಕವಾಗಿ 5 ಬಸ್ ಅನ್ನು ಆರಂಭಿಸಿ, ಸಕ್ಸಸ್ ಆದರೆ ಇನ್ನಷ್ಟು ಡಬ್ಬಲ್ ಡೆಕ್ಕರ್ ಬಸ್ಗಳು ರೋಡಿಗೊಳಿಸಲು ನಿರ್ಧಾರ ಮಾಡಲಾಗಿದೆ.
ಡಬಲ್ ಡೆಕ್ಕರ್ ಬಸ್ ಖರೀದಿಗೆ ವಿರೋಧ: ಬಸ್ಸುಗಳನ್ನ ಜನ ಸಾಮಾನ್ಯರ ಸಂಚಾರಕ್ಕೆ ನೀಡ್ಬೇಕಾ ಅಥವಾ ನಗರ ಪ್ರವಾಸೋದ್ಯಮಕ್ಕೆ ಮೀಸಲಿರಿಸ್ಬೇಕಾ ಎಂಬ ಬಗ್ಗೆ ಬಿಎಂಟಿಸಿ ಇನ್ನೂ ನಿರ್ಧಾರ ಮಾಡಿಲ್ಲ. ಹಿಂದೆ ಬೆಂಗಳೂರು ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಶಿವಾಜಿನಗರ, ಜಯನಗರ, ಬಸವನಗುಡಿ ಹೀಗೆ ಪ್ರಮುಖ ಕೇಂದ್ರಗಳ ನಡುವೆ ಸಂಚರಿಸುತ್ತಿದ್ದ ಡಬಲ್ ಡೆಕ್ಕರ್ ಬಸ್ಗಳು ಬಳಿಕ ಕಣ್ಮರೆಯಾಗಿದ್ದವು. 2014ರಲ್ಲಿ ಒಂದೇ ಒಂದು ಬಸ್ಸನ್ನ ನಗರ ಪ್ರವಾಸಕ್ಕೆ ಮೀಸರಿಸಲಾಗಿತ್ತು. ಆದ್ರೆ ಇದೀಗ ಮತ್ತೆ ಮೊದಲ ಬಾರಿಗೆ 5 ಬಸ್ ಓಡಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಆರ್ಥಿಕ ಸಂಕಷ್ಟದ ನಡುವೆ ತಲಾ ಒಂದು ಬಸ್ಗೆ 2 ಕೋಟಿ ಕೊಟ್ಟು ಬಸ್ ಖರೀದಿ ಮಾಡುತ್ತಿರೋದಕ್ಕೆ ವಿರೋಧ ಕೂಡ ವ್ಯಕ್ತವಾಗ್ತಿದೆ.
ಕಮಿಷನ್ ದರಾಸೆಗೆ ಖರೀದಿ ಮಾಡಲಾಗ್ತಿದೆ ಅಂತ ಸಾರಿಗೆ ನೌಕರರ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು ಡಬಲ್ ಡೆಕ್ಕರ್ ಬಸ್ ಅವಶ್ಯಕತೆ ಸಿಲಿಕಾನ್ ಸಿಟಿಗಿಲ್ಲ ಅಂತಿದ್ದಾರೆ. ಸದ್ಯ ಬಿಎಂಟಿಸಿ ಬಸ್ ತಯಾರಿಕಾ ಕಂಪನಿಯ ಹುಡುಕಾಟದಲ್ಲಿ ತೊಡಗಿದೆ. ಇತ್ತ ಯಾವುದೇ ಕಂಪನಿ ತಯಾರಿಕೆಗೆ ಮುಂದೆ ಬರದೇ ಇರೋದು ಬಿಎಂಟಿಸಿಗೆ ತಲೆ ಬೀಸಿಯಾಗಿದೆ. ಆದ್ರೆ ಡಬಲ್ ಡೆಕ್ಕರ್ ಬಸ್ಗಳು ಎತ್ತರವಾಗಿರುವುದರಿಂದ ಟ್ರಾಫಿಕ್ ಇಲ್ಲದಿರುವ, ಮರ ಗಿಡ ಮುಂತಾದ ಯಾವುದೇ ಅಡೆ ತಡೆಗಳು ಇಲ್ಲದಿರುವ ಮಾರ್ಗದಲ್ಲಿ ಬಸ್ ಓಡಿಸೋಕೆ ನಿಗಮ ಮುಂದಾಗಿದ್ದು ತಯಾರಿ ಮಾಡಿಕೊಳ್ತಿದೆ. ಇದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ ಅನ್ನೋದನ್ನ ಕಾದುನೋಡ್ಬೇಕು.