ಬೆಂಗಳೂರು: ಚಾರ್ಲಿ 777 Charlie ಎಂಬ ಕನ್ನಡ ಸಿನಿಮಾ ರಿಲೀಸ್ ಆಗಿದ್ದಾಗ ಶ್ವಾನಗಳ ಮೇಲೆ ಜನರಿಗೆ ಪ್ರೀತಿ ಹೆಚ್ಚಿಸಿತ್ತು. ಈ ಸಿನಿಮಾ ಬಿಡುಗಡೆಯಾದ ಹೊಸದರಲ್ಲಿ ಜನ ಮೂಕ ಪ್ರಾಣಿಯ ವೇದನೆ, ಪ್ರಾಣಿಯನ್ನು ಅರ್ಥ ಮಾಡಿಕೊಳ್ಳಲು ಶುರು ಮಾಡಿದ್ರು, ಹುಟ್ಟುಹಬ್ಬಗಳಿಗೆ ಶ್ವಾನವನ್ನು ಗಿಫ್ಟ್ ಮಾಡುತ್ತಿದ್ರು, ಶ್ವಾನಗಳ ಹೆಸರಲ್ಲಿ ಸಂಘಗಳನ್ನು ಕಟ್ಟಿದ್ರು, ಬೀದಿ ನಾಯಿಗಳಿಗೂ ಎಲ್ಲಿಲ್ಲದ ಪ್ರೀತಿ ತೋರಿಸುತ್ತಿದ್ದರು. ಆದ್ರೆ ಇದು ಕೆಲವು ದಿನ ಅಷ್ಟೇ ನಡೆದದ್ದು, ನಿಜವಾದ ಪ್ರಾಣಿ ಪ್ರಿಯರು ಮಾತ್ರ ಈಗಲೂ ಪ್ರಾಣಿ ರಕ್ಷಣೆಗಾಗಿ ಹೋರಾಡುತ್ತಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಶ್ವಾನಗಳ ಮಾರಣ ಹೋಮ ನಡೆಯುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಮ್ಮನಹಳ್ಳಿ ಚಿತಾಗಾರದಲ್ಲಿ 13 ಶ್ವಾನಗಳನ್ನು ದಹನ ಮಾಡಲು ತರಲಾಗಿತ್ತು ಎಂಬ ಬಗ್ಗೆ ಮಾಹಿತಿ ಸಿಕ್ಕಿದ್ದು ಡಾ.ರಾಧಿಕಾ ತ್ಯಾಗರಾಜನ್ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಡಾ.ರಾಧಿಕಾ ಅವರು ಚಾರ್ಲಿ ಅನಿಮಲ್ ರೆಸ್ಕ್ಯೂ ಸೆಂಟರ್ ವಿರುದ್ದ ದೂರು ದಾಖಲಿಸಿದ್ದಾರೆ. ಪ್ರತಿ 5-7 ದಿನಗಳಿಗೆ 20ರಿಂದ 50 ಶ್ವಾನಗಳನ್ನು ದಹನ ಮಾಡಲಾಗಿದೆ. ಶ್ವಾನಗಳ ಮರಣಕ್ಕೆ ಸಂಬಂಧಿಸಿದಂತೆ ಸರ್ಟಿಫಿಕೇಟ್ಗಳು ಇಲ್ಲ. ಮೇ 26ರಂದು 13 ಶ್ವಾನಗಳನ್ನು ದಹನಕ್ಕೆ ತರಲಾಗಿದೆ. ಇವುಗಳ ಮರಣೋತ್ತರ ಪರೀಕ್ಷೆ ಮಾಡಿಸಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ದೂರಿನಲ್ಲಿ ಡಾ. ರಾಧಿಕಾ ಮನವಿ ಮಾಡಿದ್ದಾರೆ.
ಸುಧಾ ನಾರಾಯಣ್, ಅನಿರುದ್ದ್, ಕೀರ್ತನಾ ಮತ್ತು ಲೋಹಿತ್ ವಿರುದ್ದ ಪ್ರಿವೆಂಷನ್ ಆಫ್ ಕ್ರೂಯೆಲ್ಟಿ ಟು ಅನಿಮಲ್ಸ್ ಆ್ಯಕ್ಟ್ ಅಡಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುತ್ತೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಶ್ವಾನಗಳ ಮಾರಣ ಹೋಮವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು ಇದಕ್ಕೆ ನಿಜವಾದ ಕಾರಣವೇನು ಎಂಬುವುದನ್ನು ಪೊಲೀಸರು ಕೆದಕುತ್ತಿದ್ದಾರೆ. ಮೃತ ಶ್ವಾನಗಳ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ನಿಜ ಬಯಲಾಗಲಿದೆ.