ಬೆಂಗಳೂರು: ನವದೆಹಲಿಗೆ ತೆರಳಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಅವರು ಕರ್ನಾಟಕದಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಕಾಂಗ್ರೆಸ್ ಪಕ್ಷ ಹೇಗೆ ಸಮರ್ಥವಾಗಿ ಕೆಲಸ ಮಾಡಿದೆ ಎಂಬ ಬಗ್ಗೆ ವಿವರಣೆ ನೀಡಿದರು.
ಕೋವಿಡ್ ಪರಿಸ್ಥಿತಿಗಾಗಿ ಕಾಂಗ್ರೆಸ್ ಪಕ್ಷವು ಆ್ಯಂಬುಲೆನ್ಸ್ ಸೇವೆ ಮತ್ತು ಕೋವಿಡ್ ಕೇರ್ ಗಳನ್ನು ಸ್ಥಾಪಿಸಿದ್ದು, ಕೊರೋನಾ ಪೀಡಿತ ಕುಟುಂಬಗಳಿಗೆ ಸಹಾಯ ಮಾಡಲು ಯೋಜನೆ ರೂಪಿಸಿರುವುದಾಗಿ ತಿಳಿಸಿದ್ದಾರೆ. ಇನ್ನು ಪಕ್ಷವನ್ನು ಪುನ ಶ್ಚೇತನಗೊಳಿಸಲು ಸಜ್ಜಾಗಿದ್ದು, ರಾಜ್ಯ ಪದಾಧಿಕಾರಿಗಳ ಬದಲಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎಂದು ತಿಳಿಸಿದ್ದಾರೆ, ತಾವು ಪಕ್ಷದ ಬಗ್ಗೆ ಸೂಕ್ಷ್ಮವಾಗಿ ಅಧ್ಯಯನ ನಡೆಸಿದ್ದು, ಹೇಗೆ ಕೆಲಸ ನಿರ್ವಹಿಸಬೇಕು ಎಂಬ ಬಗ್ಗೆ ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಜಿ.ಪರಮೇಶ್ವರ್ ಪಕ್ಷದ ಅಧ್ಯಕ್ಷರಾಗಿದ್ದ ವೇಳೆ ಪದಾಧಿಕಾರಿಗಳ ಬದಲಾವಣೆ ನಡೆದಿತ್ತು, ಅದಾದ ನಂತರ ದಶಕ ಕಳೆದಿದ್ದರೂ ಪದಾಧಿಕಾರಿಗಳ ಬದಲಾವಣೆ ನಡೆದಿಲ್ಲ, ಅವರಲ್ಲಿ ಕೆಲವರಿಗೆ ವಯಸ್ಸಾಗಿದೆ. ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗಿದ್ದ ವೇಳೆ ಸಿದ್ದರಾಮಯ್ಯ ಅವರ ಶಿಫಾರಸ್ಸಿನ ಮೇರೆಗೆ ನೇಮಕಗೊಂಡಿದ್ದಾರೆ ಎಂಬ ಗುಮಾನಿಯಿಂದ ಪಕ್ಷದ ಅರ್ಧಕ್ಕೂ ಹೆಚ್ಚು ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ಅಧ್ಯಕ್ಷರು, ಪದಾಧಿಕಾರಿಗಳನ್ನು ತೆಗೆದು, ತಮ್ಮ ಆಪ್ತರಿಗೆ ಪಟ್ಟ ಕಟ್ಟಲು ಡಿ.ಕೆ. ಶಿವಕುಮಾರ್ ವೇದಿಕೆ ಸಿದ್ಧಪಡಿಸಿಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
2023ರ ಏಪ್ರಿಲ್ ನಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅಷ್ಟರಲ್ಲಿ ಪದಾಧಿಕಾರಿಗಳ ಬದಲಾವಣೆ ಮಾಡುವುದು ಸೂಕ್ತ ಎಂದು ಹೇಳಲಾಗುತ್ತಿದೆ. ಕಳೆದ ಕೆಲವು ಸಮಯದಿಂದ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಗೆದ್ದಿದ್ದ 100 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಸಜ್ಜುಗೊಳಿಸುವ ವಿಷಯದ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಶಿವಕುಮಾರ್ ಹೇಳಿದರು. ಈ ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನು ಹೊಂದಿರದ ಕಾಂಗ್ರೆಸ್, ಇಲ್ಲಿ ನಾಯಕರನ್ನು ಗುರುತಿಸುವ ಮತ್ತು ಅವರನ್ನು ಸಿದ್ಧಗೊಳಿಸುವ ಬಗ್ಗೆ ಗಂಭೀರವಾಗಿ ಪರಿಗಣಿಸುತ್ತಿದೆ. ಪಕ್ಷವು ಚುನಾವಣಾ ಸಮೀಕ್ಷೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ, ಅಭ್ಯರ್ಥಿ ಆಯ್ಕೆಯ ಪ್ರಕ್ರಿಯೆಯನ್ನು ಸಾಮೂಹಿಕವಾಗಗಿ ತೆಗೆದುಕೊಳ್ಳಲಾಗುವುದು. ಸದ್ಯಕ್ಕೆ, ಕೋವಿಡ್ ಪರಿಸ್ಥಿತಿ ನಿರ್ವಹಣೆ ನಮ್ಮ ಪ್ರಧಾನ ಆದ್ಯತೆಯಾಗಿದೆ ಡಿ.ಕೆ ಎಂದು ಶಿವಕುಮಾರ್ ತಿಳಿಸಿದ್ದಾರೆ.