ಕೂಗು ನಿಮ್ಮದು ಧ್ವನಿ ನಮ್ಮದು

ಕೋವಿಡ್-19 ರೋಗಿಗಳಿಂದ ಪಡೆದ ಹೆಚ್ಚುವರಿ ಶುಲ್ಕ ಮರು ಪಾವತಿಗೆ ಜಿಲ್ಲಾಧಿಕಾರಿ ಆದೇಶ

ಧಾರವಾಡ: ಕೋವಿಡ್-19 ಸೋಂಕಿತರಾಗಿ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ಕೋಟಾದಲ್ಲಿ ಚಿಕಿತ್ಸೆ ಪಡೆದ ರೋಗಿಗಳಿಂದ ಹೆಚ್ಚುವರಿಯಾಗಿ ಪಡೆದ ಶುಲ್ಕವನ್ನು ಮರುಪಾವತಿಸಲು ಧಾರವಾಡ ಜಿಲ್ಲಾಧಿಕಾರಿ ನಿತೆಶ್ ಪಾಟೀಲ್ ಆಸ್ಪತ್ರೆಗಳಿಗೆ ಆದೇಶಿಸಿದ್ದಾರೆ. ರೋಗಿಗಳಿಂದ ಹೆಚ್ಚುವರಿಯಾಗಿ ಪಡೆದ ಶುಲ್ಕದ ಬಗ್ಗೆ ನಿತೇಶ್ ಪಾಟೀಲ್ ತಮ್ಮ ಕಚೇರಿಯಲ್ಲಿ ಅಧಿಕಾರಿಗಳ ಸಭೆಯಲ್ಲಿ ವಿಚಾರಣೆ ನಡೆಸಿ, ವಿವಿಧ ಪ್ರಕರಣಗಳಲ್ಲಿ ರೋಗಿಗಳಿಂದ ಹೆಚ್ಚುವರಿಯಾಗಿ ಪಡೆದಿದ್ದ ಹತ್ತೊಂಬತ್ತು ಲಕ್ಷ ರೂಪಾಯಿಯನ್ನು ಮರು ಪಾವತಿಸಲು ಖಾಸಗಿ ಆಸ್ಪತ್ರೆಗಳಿಗೆ ಆದೇಶಿಸಿದ್ದಾರೆ.

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಸಹಾಯವಾಣಿ ಕೇಂದ್ರ ಮತ್ತು ಲಿಖಿತ ದೂರುಗಳ ಮೂಲಕ ದಾಖಲಾಗಿದ್ದ ಎಂಬತ್ತು ಪ್ರಕರಣಗಳನ್ನು ದೂರುದಾರರು ಮತ್ತು ಆಸ್ಪತ್ರೆಗಳ ವೈದ್ಯಾಧಿಕಾರಿಗಳು, ಆಡಳಿತಾಧಿಕಾರಿಗಳ ಸಮ್ಮುಖದಲ್ಲಿ ವಿಚಾರಣೆ ನಡೆಸಿ, ಈ ಆದೇಶವನ್ನು ನೀಡಿದ್ರು. ಕೋವಿಡ್ ಮೊದಲ ಮತ್ತು 2ನೇ ಅಲೆಗಳ ಸಂದರ್ಭದಲ್ಲಿ ಚಿಕಿತ್ಸೆಗೆ ಸರ್ಕಾರ ನಿಗದಿ ಪಡಿಸಿದ ಪ್ರಮಾಣದಲ್ಲಿ ಶುಲ್ಕ ವಿಧಿಸಲು ಸೂಚಿಸಲಾಗಿತ್ತು.

ಕೋವಿಡ್ ರೋಗಿ ದಾಖಲಾದ ನಂತರ ಅವರಿಂದ ಯಾವುದೇ ಶುಲ್ಕ ಪಡೆಯಬಾರದೆಂದು ನಿರ್ದೇಶನ ನೀಡಲಾಗಿತ್ತು. ಹಲವು ಆಸ್ಪತ್ರೆಗಳಲ್ಲಿ 2 ಕಡೆಗಳಿಂದಲೂ ಹಣ ಪಡೆಯಲಾಗಿದೆ. ಈ ಪ್ರಕರಣಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಹುಬ್ಬಳ್ಳಿಯ ರೋಗಿಯೊಬ್ಬರಿಗೆ ನಾಲ್ಕು ಲಕ್ಷ ರೂಪಾಯಿ ಸವದತ್ತಿಯ ವ್ಯಕ್ತಿಯೊಬ್ಬರಿಗೆ 92,125 ರೂ. ಹಾಗೂ ಮತ್ತೊಂದು ಪ್ರಕರಣದಲ್ಲಿ ಇಪ್ಪತೈದು ಸಾವಿರ ರೂಪಾಯಿಯನ್ನು ಮರು ಪಾವತಿಸಲು ಸೂಚಿಸಿದ್ರು. ಖಾಸಗಿ ಆಸ್ಪತ್ರೆಯೊಂದು ಸ್ವಯಂಪ್ರೇರಿತವಾಗಿ ನಾಲವತ್ಮೂರು ಪ್ರಕರಣಗಳಲ್ಲಿ ಹದಿನಾಲ್ಕು ಲಕ್ಷ ರೂಪಾಯಿ ಪಾವತಿಸಿರುವುದಾಗಿ ಸಭೆಗೆ ಮಾಹಿತಿ ನೀಡಿದಾಗ ಜಿಲ್ಲಾಧಿಕಾರಿಗಳು ಅವರ ಕಾರ್ಯವನ್ನು ಅಭಿನಂದಿಸಿದರು.

error: Content is protected !!