ಧಾರವಾಡ: ಧಾರವಾಡದ ಯೋಗಿಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿಯನ್ನು ಬೆಳ್ಳಂಬೆಳಿಗ್ಗೆ ಬಂಧಿಸಿ ತಂದಿದ್ದ ಸಿಬಿಐ ಅಧಿಕಾರಿಗಳು, ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ಸುಧೀರ್ಘ ವಿಚಾರಣೆ ನಡೆಸಿದರು. ನಂತರ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ವೈದ್ಯಕೀಯ ಪರೀಕ್ಷೆಯ ನಂತರ ವಿನಯ್ ಕುಲಕರ್ಣಿ ಯನ್ನು ಧಾರವಾಡದ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಜಿಲ್ಲಾ ನ್ಯಾಯಾಲಯ ವಿನಯ್ ಕುಲಕರ್ಣಿಗೆ ಒಂದು ದಿನದ ನ್ಯಾಯಾಂಗ ಬಂಧನ ವಿಧಿಸಿದೆ. ನ್ಯಾ.ಎಚ್.ಪಂಚಾಕ್ಷರಿ ಈ ಆದೇಶ ನೀಡಿದ್ದು, ನಾಳೆ ಸಂಜೆ ವರೆಗೂ ವಿನಯ್ ಕುಲಕರ್ಣಿ ಜೈಲಿನಲ್ಲಿರೋದು ಅನಿವಾರ್ಯವಾಗಿದೆ. ಹೀಗಾಗಿ ಧಾರವಾಡದ ಉಪನಗರ ಪೊಲೀಸರು ವಿನಯ್ ಕುಲಕರ್ಣಿ ಅವರನ್ನು ಬೆಳಗಾವಿಯ ಹಿಂಡಲಗಾ ಜೇಲಿಗೆ ಶಿಫ್ಟ್ ಮಾಡಲಾಗಿದ್ದು, ಕೊನೆಗೂ ವಿನಯ್ ಕುಲಕರ್ಣಿ ಜೈಲು ಪಾಲಾಗಿದ್ದಾರೆ.