ಕೂಗು ನಿಮ್ಮದು ಧ್ವನಿ ನಮ್ಮದು

ಅಪರಿಚಿತರ ಗುಂಡಿನ ದಾಳಿಗೆ ಬಿಜೆಪಿ ನಾಯಕ ಬಲಿ!

ಕೋಲ್ಕತ್ತಾ: ಕಳೆದ ರಾತ್ರಿ ಪಶ್ಚಿಮ ಬಂಗಾಳದ ಪುರ್ಬಾ ಬರ್ಧಮಾನ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಜೆಪಿ ಮುಖಂಡನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಪುರ್ಬಾ ಬರ್ಧಮಾನ್‍ನಲ್ಲಿ ಶನಿವಾರ ಬಿಜೆಪಿ ನಾಯಕ ರಾಜು ಝಾ ಅವರನ್ನು ಅಪರಿಚಿತರು ಗುಂಡಿಕ್ಕಿ ಕೊಂದಿದ್ದಾರೆ ಎಂದು ವರದಿಯಾಗಿದೆ. ದುರ್ಗಾಪುರ ಮೂಲದ ಉದ್ಯಮಿಯಾಗಿರುವ ರಾಜು ಝಾ ಸಂಜೆ ಕೋಲ್ಕತ್ತಾಗೆ ತೆರಳುತ್ತಿದ್ದ ವೇಳೆ ಶಕ್ತಿಗಢ ಪ್ರದೇಶದ ಮಿಠಾಯಿ ಅಂಗಡಿಯೊಂದರ ಹೊರಗೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆ ಬಗ್ಗೆ ಮಾತನಾಡಿರುವ ಬರ್ಧಮಾನ್ ಪೊಲೀಸ್ ವರಿಷ್ಠಾಧಿಕಾರಿ(SP) ಕಮ್ನಾಸಿಸ್ ಸೇನ್, ‘ಕಾರಿನಲ್ಲಿ ರಾಜು ಝಾ ಸೇರಿದಂತೆ ಮೂವರಿದ್ದರು. ಗುಂಡಿಕ್ಕಿ ಹತ್ಯೆ ಮಾಡಿ ಎಸ್ಕೇಪ್ ಆಗಿರುವ ಆರೋಪಿಗಳ ಉದ್ದೇಶವೇನು ಅನ್ನೋದು ಗೊತ್ತಾಗಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ’ ಎಂದು ಹೇಳಿದ್ದಾರೆ.

ಅಪರಿಚಿತರು ಏಕಾಏಕಿ ಗುಂಡಿನ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಗುಂಡಿನ ದಾಳಿಯಿಂದ ಗಾಯಗೊಂಡ ರಾಜು ಝಾರನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಯೋಜನವಾಗಲಿಲ್ಲ. ವೈದ್ಯರು ಅವರು ಸಾವನ್ನಪ್ಪಿದ್ದಾರೆಂದು ಘೋಷಿಸಿದರು.

ಘಟನೆಯಲ್ಲಿ ರಾಜು ಝಾರ ಜೊತೆಗಿದ್ದ ಇತರ ವ್ಯಕ್ತಿಗಳು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವಾರು ಪ್ರಕರಣಗಳನ್ನು ಎದುರಿಸುತ್ತಿರುವ ಮತ್ತು ಅಕ್ರಮ ಕಲ್ಲಿದ್ದಲು ವ್ಯವಹಾರ ನಡೆಸುತ್ತಿರುವ ಆರೋಪ ಹೊತ್ತಿರುವ ರಾಜು ಝಾ ಅವರು 2021ರ ರಾಜ್ಯ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ್ದರು.

ಪೊಲೀಸ್ ಮೂಲಗಳ ಪ್ರಕಾರ, ಹಂತಕರು ಇದ್ದ ವಾಹನವನ್ನು ಪತ್ತೆಹಚ್ಚಲು ಸ್ಥಳೀಯರನ್ನು ವಿಚಾರಣೆ ನಡೆಸಲಾಗುತ್ತಿದೆ. ಪೊಲೀಸರು ಎಲ್ಲಾ ಕೋನಗಳಲ್ಲಿ ತನಿಖೆ ನಡೆಸುತ್ತಿದ್ದು, ಟೋಲ್ ಪ್ಲಾಜಾ ಸೇರಿದಂತೆ ಹತ್ತಿರದ ಪ್ರದೇಶಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!