ಶಿವಮೊಗ್ಗ/ಉತ್ತರ: ಚಳಿಗಾಲ ಬಂತೆಂದರೆ ಪ್ರವಾಸ, ಸುತ್ತಾಟ, ಕಾರ್ಯಕ್ರಮಗಳ ಆಯೋಜನೆ ಹಾಗೂ ಚಳಿಗಾಲದ ಮಂಜು ಕವಿದ ವಾತಾವರಣದಿಂದ ವಾಹನಗಳ ಅಪಘಾತ ಸಂಖ್ಯೆಯೂ ಅಧಿಕವಾಗಿರುತ್ತದೆ. ಇಂದು ನಮ್ಮ ರಾಜ್ಯದ ಉತ್ತರ ಕನ್ನಡ, ಶಿವಮೊಗ್ಗ, ಚಾಮರಾಜನಗರದಲ್ಲಿ ನಡೆದ ಪ್ರತ್ಯೇಕ ಅಪಘಾತಗಳಲ್ಲಿ ವಿದ್ಯಾರ್ಥಿನಿ, ಯುವಕರು ಸೇರಿ ಒಟ್ಟು ಮೂವರು ಸಾವನ್ನಪ್ಪಿದ್ದಾರೆ.
ಕಾರು ಗುದ್ದಿ ವಿದ್ಯಾರ್ಥಿನಿ ಕೀರ್ತಿಕಾ (15) ಸಾವು:
ಶಿವಮೊಗ್ಗ: ಸಾಗರ ತಾಲೂಕಿನಲ್ಲಿ ಶಾಲೆಯಿಂದ ಸಂಜೆ ಮನೆಗೆ ಹೋಗುವ ವೇಳೆ ಕಾರೊಂದು ವಿದ್ಯಾರ್ಥಿನಿಗೆ ಗುದ್ದಿದ್ದರಿಂದ ತೀವ್ರ ಗಾಯಗೊಂಡಿದ್ದಳು. ಈ ಅಪಘಾತದಲ್ಲಿ ಗಾಯಗೊಂಡಿದ್ದ ಶಾಲಾ ವಿದ್ಯಾರ್ಥಿನಿಯನ್ನು ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಕಳೆದ ಮೂರು ದಿನಗಳಿಂದ ಚಿಕಿತ್ಸೆ ನೀಡಲಾಗಿದ್ದು, ಕೆಲವು ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗಿತ್ತು. ಆದರೆ, ಬಹು ಅಂಗಾಂಗಗಳಿಗೆ ತೀವ್ರ ತರಹದ ಪೆಟ್ಟು ಬಿದ್ದಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೇ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾಳೆ. ಇನ್ನು ಅಪಘಾತದಿಂದ ಮೃತಪಟ್ಟ ವಿದ್ಯಾರ್ಥಿನಿ ಕರ್ನಾಟಕ ಪಬ್ಲಿಕ್ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಕೀರ್ತಿಕಾ (15) ಆಗಿದ್ದಾಳೆ. ಸಾಗರ ತಾಲೂಕಿನ ಮದ್ದಲೆಸರ ಗ್ರಾಮದವಿದ್ಯಾರ್ಥಿನಿಯರು ಶಾಲೆಯಿಂದ ಮನೆಗೆ ತೆರಳುವಾಗ ಕಾರು ಡಿಕ್ಕಿ ಹೊಡೆದಿತ್ತು. ಈ ವೇಳೆ ಇಬ್ಬರು ವಿದ್ಯಾರ್ಥಿನಿಯರು ಗಂಭೀರ ಗಾಯಗೊಂಡಿದ್ದರು. ಇಂದು ಒಬ್ಬ ವಿದ್ಯರ್ಥಿನಿ ಮೃತಪಟ್ಟಿದ್ದು, ಇನ್ನೊಬ್ಬ ವಿದ್ಯಾರ್ಥಿನಿಗೆ ಚಿಕಿತ್ಸೆ ಮುಂದುವರೆಯುತ್ತಿದೆ.
ಬೈಕ್ ಮತ್ತು ಬೊಲೆರೋ ಡಿಕ್ಕಿ- ಯುವಕ ಸಾವು:
ಉತ್ತರಕನ್ನಡ: ಕರಾವಳಿ ಜಿಲ್ಲೆ ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಮುಂಡಾರ ಗ್ರಾಮದಲ್ಲಿ ಬೈಕ್ ಮತ್ತು ಬೊಲೆರೋ ವಾಹನದ ನಡುವೆ ಇಂದು ಬೆಳಗಿನ ಜಾವ ಭೀಕರ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನು ಅಪಘಾತಕ್ಕೆ ಕಾರಣವಾದ ಬೊಲೆರೋ ವಾಹನ ಚಾಲಕ, ಬೈಕ್ನಿಂದ ಬಿದ್ದ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಪ್ರಾಣ ಉಳಿಸಿದೇ ಘಟನೆ ನಡೆದ ಸ್ಥಳದಿಂದ ಪರಾರಿ ಆಗಿದ್ದಾನೆ. ಈ ಅಪಘಾತದಲ್ಲಿ ಹಳಗೇರಿ ಗ್ರಾಮದ ನಿವಾಸಿ ಸುಬ್ರಹ್ಮಣ್ಯ ರಾಮಗೌಡ ಎಂಬ ಯುವಕ ಮೃತಪಟ್ಟಿದ್ದಾನೆ. ಈ ಕುರಿತು ಹೊನ್ನಾವರದ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೈಲಿಗೆ ತಲೆ ಕೊಟ್ಟು ಸಾವು:
ಚಾಮರಾಜನಗರ: ಗಡಿಜಿಲ್ಲೆ ಚಾಮರಾಜನಗರದ ಬೇಡರಪುರ ಗ್ರಾಮದ ಬಳಿ ಯುವಕನೊಬ್ಬ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇಂದು ಬೆಳಗ್ಗೆ ಮೈಸೂರಿನಿಂದ ಚಾಮರಾಜನಗರಕ್ಕೆ ಬರುತ್ತಿದ್ದ ರೈಲು ಬರುವುದನ್ನು ಕಾಯ್ದುಕೊಂಡು ಇದ್ದು, ತಲೆ ಕೊಟ್ಟಿದ್ದಾನೆ. ಮೃತ ದುರ್ದೈವಿಯನ್ನು ನಂಜನಗೂಡು ತಾಲ್ಲೂಕಿನ ದಾಸನಪುರ ಗ್ರಾಮದ ರವಿ (28) ಎಂದು ಗುರುತಿಸಲಾಗಿದೆ. ಈ ಕುರಿತು ನಂಜನಗೂಡು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆದ್ದಾರಿಯಲ್ಲೇ ಹೊತ್ತಿ ಉರಿದ ಸಿಮೆಂಟ್ ಹೊತ್ತ ಲಾರಿ:
ಉತ್ತರಕನ್ನಡ: ದಟ್ಟ ಅರಣ್ಯವನ್ನು ಹೊಂದಿರುವ ಜಿಲ್ಲೆ ಉತ್ತರ ಕನ್ನಡದ ಯಲ್ಲಾಪುರ ತಾಲೂಕಿನ ಅರಬೈಲ್ ಗ್ರಾಮದ ರಸ್ತೆಯಲ್ಲಿ ಚಲಿಸುತ್ತಿದ್ದ ಸಿಮೆಂಟ್ ಲಾರಿ ಬೆಂಕಿಗಾಹುತಿಯಾಗಿದೆ. ಚಲಿಸುತ್ತಿದ್ದ ಲಾರಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಚಾಲಕ ಲಾರಿಯನ್ನು ನಿಲ್ಲಿಸಿ ಅದರಿಂದ ಇಳಿದು ದೂರ ಓಡಿ ಹೋಗಿದ್ದಾನೆ. ಹೀಗಾಗಿ, ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸಿಮೆಂಟ್ ತುಂಬಿದ್ದ ಲಾರಿ ಹೆದ್ದಾರಿ ಮಧ್ಯೆಯೇ ಹೊತ್ತಿ ಉರಿದು ಸಂಪೂರ್ಣ ಕರಕಲಾಗಿದೆ. ಈ ಲಾರಿ ಮಂಗಳೂರಿನಿಂದ ಬಾಗಲಕೋಟೆಗೆ ಸಿಮೆಂಟ್ ಸಾಗಿಸುತ್ತಿತ್ತು. ಆಕಸ್ಮಿಕ ಬೆಂಕಿಯಿಂದಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಈ ಘಟನೆ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.