ಚಿಕ್ಕಬಳ್ಳಾಪುರ: ಕೆರೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಯುವಕನ ಶವ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕ ಹೆಜ್ಜಾಜಿ ಗ್ರಾಮದ ಬಳಿ ನಡೆದಿದೆ. ಶ್ಯಾಕುಲದೇವನಪುರದ ನಂದೀಶ್(18) ಮೃತ ಯುವಕ. ಅಂದಹಾಗೇ ಅಜ್ಜಿ ಮನೆಯಲ್ಲಿ ವಾಸವಿದ್ದ ಯುವಕ ನಂದೀಶ್ ಗ್ಯಾರೇಜ್ ಒಂದರಲ್ಲಿ ಕೆಲಸ ಮಾಡುತ್ತಿದ್ದನು. ಚಿಕ್ಕ ಹೆಜ್ಜಾಜಿ ಗ್ರಾಮದ ಬಳಿಯ ಏರಿಯದಲ್ಲಿ ಯುವಕನ ಬೈಕ್ ಪತ್ತೆಯಾಗಿದ್ದು, ಕೆರೆಯ ನೀರಿನಲ್ಲಿ ಅರ್ಧಂಬರ್ಧ ಮುಳುಗಿರುವ ರೀತಿಯಲ್ಲಿ ಯುವಕ ನಂದೀಶ್ ಶವ ಪತ್ತೆಯಾಗಿದೆ.
ಮುಂಜಾನೆ ದಾರಿಯಲ್ಲಿ ಹೋಗುವ ವಾಹನ ಸವಾರರು ಬೈಕನ್ನು ಕಂಡು ಕೆರೆ ಬಳಿ ನೋಡಿದಾಗ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ದೊಡ್ಡ ಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಅರ್ಧಂಬರ್ಧ ನೀರಿನಲ್ಲಿ ಮುಳುಗಿರುವ ರೀತಿಯಲ್ಲಿ ಯುವಕ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಯುವಕನ ಸಂಬಂಧಿಕರು ಕೊಲೆ ಆರೋಪ ಮಾಡಿದ್ದಾರೆ. ಯಾರೋ ಕೊಲೆ ಮಾಡಿ ನಂದೀಶ್ ದೇಹವನ್ನ ಕೆರೆಯಲ್ಲಿ ಬಿಸಾಡಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.