ನವದೆಹಲಿ: ಅಶ್ವಥ್ ನಾರಾಯಣ್ ಒಬ್ಬ ಕಚಡ, ಮಾರ್ಕ್ಸ್ಕಾರ್ಡ್ ಮಾರಿಕೊಂಡು ಬದುಕಿದವನು. ಕಾರ್ಪೊರೇಷನ್ಗೆ ಬೆಂಕಿಯಿಟ್ಟವನು ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್, ಸಿ.ಎನ್.ಅಶ್ವಥ್ ನಾರಾಯಣ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಸುರೇಶ್, ಅಶ್ವಥ್ ನಾರಾಯಣನ ಬಗ್ಗೆ ನಾನೇನು ಮಾತನಾಡಲಿ. ಸಮಯ ಬಂದಾಗ ಎಲ್ಲವನ್ನೂ ಮಾತನಾಡುತ್ತೇನೆ ಎಂದು ಕುಟುಕಿದ್ದಾರೆ. ನಾವು ಕರಾಳ ದಿನಗಳನ್ನು ನೋಡುತ್ತಿದ್ದೇವೆ. ಸಂಸದರ ಮೇಲೆ ದೌರ್ಜನ್ಯ ನಡೆಯುತ್ತಿದೆ.
ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಆತ್ಮಸ್ಥೈರ್ಯ ಕುಗ್ಗಿಸಲು ಗಾಂಧಿ ಕುಟುಂಬವನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಪ್ರತಿಭಟನೆ ನಡೆಸುವ ಹಕ್ಕನ್ನೇ ಕಸಿದುಕೊಳ್ಳಲಾಗುತ್ತಿದೆ ಎಂದು ಬಿಜೆಪಿ ಸರ್ಕಾರದ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ರಾಮನಗರದಲ್ಲಿ ನಡೆದ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಎದುರೇ ಕಿತ್ತಾಡಿಕೊಂಡಿದ್ದ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹಾಗೂ ಬಿಜೆಪಿ ಸಚಿವ ಅಶ್ವಥ್ ನಾರಾಯಣ ಮತ್ತೇ ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಿದ್ದರು. ರಾಮನಗರದಲ್ಲಿ ನಡೆದಿದ್ದ ಸಿಎಂ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರನ್ನು ಕಡೆಗಣಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಡಿ.ಕೆ.ಸುರೇಶ್ ವೇದಿಕೆಯಲ್ಲೇ ಗಲಾಟೆ ಮಾಡಿದ್ದರು.
ಸ್ಥಳೀಯ ಜನಪ್ರತಿನಿಧಿಗಳು ಬರುವ ಮೊದಲೇ ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸಿದ ಸಿಎಂ ನಡೆಯನ್ನು ಸಂಸದ ಡಿ.ಕೆ.ಸುರೇಶ್ ತೀವ್ರವಾಗಿ ವಿರೋಧಿಸಿದ್ದರು. ಸಚಿವ ಅಶ್ವಥ್ ನಾರಾಯಣ ಅವರು ಮಾತನಾಡುತ್ತಿದ್ದಂತೆ ಮೈಕ್ ಕಸಿದುಕೊಂಡು ಗದ್ದಲ ಸೃಷ್ಟಿಸಿದ್ದರು. ಮರ್ನಾಲ್ಕು ದಿನಗಳ ಹಿಂದೆಯಷ್ಟೇ ಇಬ್ಬರೂ ಒಂದೇ ವೇದಿಕೆ ಹಂಚಿಕೊಂಡಿದ್ದರು. ಇದೀಗ ಮತ್ತೆ ಡಿ.ಕೆ.ಸುರೇಶ್, ಅಶ್ವಥ್ ನಾರಾಯಣ ವಿರುದ್ಧ ಕಿಡಿಕಾರಿದ್ದಾರೆ.