ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಇಡಿ ಚಾರ್ಜ್ ಶೀಟ್ ಸಲ್ಲಿಸಿದೆ. ಐಟಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಇಡಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. 2017ರಲ್ಲಿ ಐಟಿ ಅಧಿಕಾರಿಗಳು ಅಕ್ರಮ ಆಸ್ತಿ ಮತ್ತು ತೆರಿಗೆ ವಂಚನೆ ಆರೋಪದಡಿ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿದ್ದರು. 48 ದಿನಗಳ ಕಾಲ ಜೈಲಿನಲ್ಲಿದ್ದ ಡಿಕೆಶಿ ಅವರನ್ನು ನಂತರ ಜಾಮೀನಿನ ಆಧಾರದ ಮೇಲೆ ಬಿಡುಗಡೆಗೊಳಿಸಲಾಗಿತ್ತು. ಇತ್ತೀಚೆಗಷ್ಟೇ ಈ ಕುರಿತಂತೆ ಮಾದ್ಯಮ ಒಂದರ ಜೊತೆಗೆ ಮಾತನಾಡಿದ್ದ ಡಿ.ಕೆ.ಶಿವಕುಮಾರ್ ಅವರು, ಆಗಸ್ಟ್ ತಿಂಗಳಿನಲ್ಲಿ ನನ್ನನ್ನ ಟಾರ್ಗೆಟ್ ಮಾಡಿ ಮತ್ತಷ್ಟು ಬೆಳವಣಿಗೆಗಳು ನಡೆಯುತ್ತದೆ ಎಂದು ಹೇಳಿಕೆ ನೀಡಿದ್ದರು.
ಡಿ.ಕೆ.ಶಿವಕುಮಾರ್ ಅವರು ಹೇಳಿಕೆ ಕೊಟ್ಟ 14 ದಿನಗಳ ಅಂತರದಲ್ಲಿಯೇ ಇಡಿ ಚಾರ್ಜ್ಶೀಟ್ ಸಲ್ಲಿಸಿದೆ. ಇದೀಗ ಆಗಸ್ಟ್ನಲ್ಲಿ ಆಗಬಹುದು ಎಂದುಕೊಂಡಿದ್ದ ಗಂಡಾಂತರ ಮೇ ತಿಂಗಳಲ್ಲೇ ಎದುರಾಯ್ತಾ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡಿದೆ. ಡಿ.ಕೆ.ಶಿವಕುಮಾರ್ 800 ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ. ಕುಟುಂಬಸ್ಥರ ಹೆಸರಿನಲ್ಲಿ 200 ಕೋಟಿ ಠೇವಣಿ ಇದೆ. 20ಕ್ಕೂ ಅಧಿಕ ಬ್ಯಾಂಕ್, 317ಕ್ಕೂ ಹೆಚ್ಚು ಬ್ಯಾಂಕ್ ಅಕೌಂಟ್ ಮೂಲಕ ಅಕ್ರಮ ಹಣ ವರ್ಗಾವಣೆಯಾಗಿದೆ. ಮಗಳ ಹೆಸರಿನಲ್ಲಿ 108ಕೋಟಿ ಅಕ್ರಮ ವ್ಯವಹಾರ ನಡೆದಿದೆ. ಪುತ್ರಿಗೆ ೪೮ ಕೋಟಿ ಸಾಲ ಇದೆ, ಸಾಲದ ಮೂಲ ಇಲ್ಲ.