ಕೂಗು ನಿಮ್ಮದು ಧ್ವನಿ ನಮ್ಮದು

ಕುಡಿದ ಅಮಲಿನಲ್ಲಿ ಮಲಗಿದ್ದ ಗಂಡನಿಗೆ ಬೆಂಕಿ ಇಟ್ಟು ಪರಾರಿಯಾದ ಆಂಧ್ರ ಹೆಂಡ್ತಿ!

ಗಂಡ ಮಲಗಿದ್ದ ವೇಳೆ ಆತನಿಗೆ ಬೆಂಕಿ ಇಟ್ಟು ಕೊಂದ ಹೆಂಡತಿ ಮನೆ ಬಿಟ್ಟು ಓಡಿ ಹೋದ ಶಾಕಿಂಗ್ ಘಟನೆ ಆಂಧ್ರ ಪ್ರದೇಶ ರಾಜ್ಯದಲ್ಲಿ ನಡೆದಿದೆ. ಇಲ್ಲಿನ ಅನ್ನಮಯ್ಯ ಜಿಲ್ಲೆಯ ಕುರಬಲಕೋಟಾ ಮಂಡಲದ ಪೂಜಾರಿವಂದಲಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಳೆದ ಮಂಗಳವಾರ ರಾತ್ರಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಭಾರತೀಯ ಸೇನೆಯಲ್ಲಿ 15 ವರ್ಷಗಳ ಕಾಲ ಸೈನಿಕನಾಗಿ ಕಾರ್ಯ ನಿರ್ವಹಿಸಿದ್ದ ಮೃತ ಶ್ರೀಧರ್, ಸೈನ್ಯದಿಂದ ನಿವೃತ್ತಿಯಾದ ಬಳಿಕ ಹುಟ್ಟೂರಿಗೆ ಬಂದು ನೆಲೆಸಿದ್ದ. ಆ ಬಳಿಕ ಗಂಡ ಹೆಂಡತಿ ನಡುವೆ ಸಂಬಂಧ ಹದಗೆಟ್ಟಿತ್ತು. ಒಂದು ವರ್ಷದ ಹಿಂದೆ ಶ್ರೀಧರ್ ಹುಟ್ಟೂರಿಗೆ ವಾಪಸ್‌ ಬಂದು ನೆಲೆಸಿದ್ದ. ಈತ ತನ್ನ ಪತ್ನಿ ಮಮತಾ ಜೊತೆ ಪದೇ ಪದೇ ಜಗಳ ಆಡುತ್ತಿದ್ದ. ಇಬ್ಬರ ವೈವಾಹಿಕ ಜೀವನ ಉತ್ತಮವಾಗಿ ಇರಲಿಲ್ಲ ಎಂದು ನೆರೆ ಹೊರೆಯವರು ಮಾಹಿತಿ ನೀಡಿರೋದಾಗಿ ಮದನಪಲ್ಲಿ ಡಿಎಸ್‌ಪಿ ಕೆ. ಕಾಸಪ್ಪ ತಿಳಿಸಿದ್ದಾರೆ.

ಒಂದು ವರ್ಷದ ಹಿಂದೆ ಸೈನ್ಯದಿಂದ ನಿವೃತ್ತಿಯಾಗಿ ಶ್ರೀಧರ್ ಹುಟ್ಟೂರಿಗೆ ಬಂದ ಬಳಿಕ ನಾವು ಕುಟುಂಬದಿಂದ ಬೇರೆಯಾಗಿ ಪ್ರತ್ಯೇಕವಾಗಿ ವಾಸ ಮಾಡೋಣ ಎಂದು ಪತ್ನಿ ಮಮತಾ ಬೇಡಿಕೆ ಇಟ್ಟಿದ್ದಳು. ಆದರೆ ಶ್ರೀಧರ್ ತನ್ನ ತಂದೆ, ತಾಯಿಯಿಂದ ದೂರವಾಗಿ ಬೇರೆ ಕಡೆ ಮನೆ ಮಾಡಿಕೊಂಡು ನೆಲೆಸೋದಕ್ಕೆ ಆಸ್ತಿ ತೋರಿಸುತ್ತಿರಲಿಲ್ಲ. ಕಳೆದ ಮಂಗಳವಾರ ರಾತ್ರಿ ಶ್ರೀಧರ್ ವಿಪರೀತ ಮದ್ಯ ಸೇವಿಸಿ ಅದೇ ಅಮಲಿನಲ್ಲಿ ಮನೆಗೆ ಬಂದಿದ್ದ. ಈ ವೇಳೆ ಪತ್ನಿ ಮಮತಾ ಜೊತೆ ಶ್ರೀಧರ್ ಜಗಳ ಆಡಿದ್ದ. ನಂತರ ಹಾಸಿಗೆಯಲ್ಲಿ ಮಲಗಿ ನಿದ್ರೆ ಮಾಡಿದ್ದ.

ತನ್ನ ಪತಿ ಹಾಸಿಗೆಯಲ್ಲಿ ಮಲಗಿ ನಿದ್ರಿಸಿದ ಬಳಿಕ ಆತನ ಮೇಲೆ ಪೆಟ್ರೋಲ್ ಸುರಿದ ಪತ್ನಿ ಮಮತಾ ಬೆಂಕಿ ಹಚ್ಚಿದಳು ಎಂದು ಆರೋಪಿಸಲಾಗಿದೆ. ಆ ನಂತರ ಭಯಗೊಂಡ ಮಮತಾ ಕೂಡಲೇ ಮನೆ ಬಿಟ್ಟು ಪರಾರಿಯಾಗಿದ್ದಾಳೆ. ತನ್ನ ಮೇಲೆ ಬೆಂಕಿ ಬಿದ್ದದ್ದೇ ತಡ ಕುಡಿದ ಮತ್ತಿನಲ್ಲಿ ಇದ್ದ ಪತಿ ಶ್ರೀಧರ್ ಜೋರಾಗಿ ಕಿರುಚಿಕೊಂಡಿದ್ದಾನೆ. ಆತನ ಕಿರುಚಾಟ ಕೇಳಿದ ನೆರೆ ಹೊರೆಯ ಮನೆಗಳ ಜನರು ಕೂಡಲೇ ಶ್ರೀಧರ್‌ನ ಮನೆಗೆ ಧಾವಿಸಿದ್ದಾರೆ. ಬೆಂಕಿ ಬಿದ್ದಿದ್ದ ಮನೆಯೊಳಗೆ ಕಷ್ಟ ಪಟ್ಟು ಪ್ರವೇಶ ಮಾಡಿ ಹಾಸಿಗೆಯಲ್ಲೇ ಬಿದ್ದು ಒದ್ದಾಡುತ್ತಿದ್ದ ಶ್ರೀಧರ್‌ನನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

ಶ್ರೀಧರ್‌ ದೇಹದಲ್ಲಿ ಭಾರೀ ಪ್ರಮಾಣದ ಸುಟ್ಟ ಗಾಯಗಳು ಇದ್ದ ಕಾರಣ ವೈದ್ಯರು ಆತನನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಬೇಕು ಎಂದು ತಿಳಿಸಿದ್ದರು. ಹೀಗಾಗಿ, ಶ್ರೀಧರ್‌ನನ್ನು ಬೆಂಗಳೂರಿಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲೇ ಆತ ಸಾವನ್ನಪ್ಪಿದ್ದಾನೆ.

ಈ ಪ್ರಕರಣ ಸಂಬಂಧ ಸ್ಥಳೀಯ ಮುದಿವಿಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತನ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ರವಾನೆ ಮಾಡಲಾಗಿದೆ. ಜೊತೆಯಲ್ಲೇ ಘಟನಾ ಸ್ಥಳದಿಂದ ಪರಾರಿಯಾಗಿದ್ದ ಆರೋಪಿ ಪತ್ನಿ ಮಮತಾಳನ್ನು ಪತ್ತೆ ಹಚ್ಚಲು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

error: Content is protected !!