ಕಲಬುರಗಿ: ನಗರದ ವಿವಿಧೆಡೆ ಚಿನ್ನಾಭರಣ ಸುಲಿಗೆ ಮಾಡಿ ಪರಾರಿಯಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಶೋಕ್ ನಗರ ಠಾಣೆಯ ಪೋಲಿಸರು ಬಾಲಕನೊಬ್ಬನೂ ಸೇರಿದಂತೆ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಸುಮಾರು 7.24,000 ರು.ಗಳ ಮೌಲ್ಯದ ಮಾಲು ಜಪ್ತಿ ಮಾಡಿಕೊಂಡಿದ್ದಾರೆ. ಬಂಧಿತರನ್ನು ಎಂಎಸ್ಕೆ ಮಿಲ್ ಪ್ರದೇಶದ ಶಹಾ ಜಿಲಾನಿ ದರ್ಗಾ ಹತ್ತಿರದ ನೂರಾನಿ ಚೌಕ್ ಪ್ರದೇಶದ ನಿವಾಸಿ ಮೊಹ್ಮದ್ ವಾಸೀಮ್ ತಂದೆ ಮೊಹ್ಮದ್ ತಾಜೋದ್ದೀನ್ ಸುಲ್ತಾನಪೂರರ್ಕ (27), ಅಡಿಗೆ ಕೆಲಸಗಾರ ಶೇಖ್ ಆಸೀಫ್ ತಂದೆ ಶೇಖ್ ಆರೀಫ್(24) ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಎಂದು ಗುರುತಿಸಲಾಗಿದೆ.
ಪಿಐ ರಾಮಪ್ಪ ವಿ. ಸಾವಳಗಿ ನೇತೃತ್ವದಲ್ಲಿ ಪಿಎಸ್‌ಐ ಶಿವಪ್ಪ, ಸಿಬ್ಬಂದಿಯರಾದ ಗುರುಮೂರ್ತಿ, ಸಂಜುಕುರ್ಮಾ, ಶಿವಲಿಂಗ್, ನೀಲಕಂಠರಾಯ್ ಪಾಟೀಲ್ ಅವರು ಕಾರ್ಯಾಚರಣೆ ಕೈಗೊಂಡು ನಗರದ ವಿವಿಧೆಡೆ ಅಳವಡಿಸಲಾದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಮೂವರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದರು.
ಬಂಧಿತರಿಂದ 2,40,000 ರು. ಮೌಲ್ಯದ 40 ಗ್ರಾ. ತೂಕದ ತಾಳಿ ಚೈನ್ 97 ಗ್ರಾಂ. ಬಂಗಾರದ ವಸ್ತು, ಹಾಗೂ 6000 ರು. ನಗದು, ಕಳ್ಳತನ ಮಾಡಲು ಉಪಯೋಗಿಸಿದ ಒಂದು ಲಕ್ಷ ರು. ಮೌಲ್ಯದ ಕಪ್ಪು ಬಣ್ಣದ ಪಲ್ಸರ್ ಸೇರಿ ಒಟ್ಟು 7.24 ಲಕ್ಷ ರು.ಗಳ ಮಾಲನ್ನು ವಶಪಡಿಸಿಕೊಂಡರು. ಪೋಲಿಸರ ಕಾರ್ಯಾಚರಣೆಯನ್ನು ನಗರ ಪೋಲಿಸ್ ಆಯುಕ್ತ ಚೇತನ್ ಆರ್., ಶ್ಲಾಘಿಸಿದ್ದಾರೆ.