ಕೂಗು ನಿಮ್ಮದು ಧ್ವನಿ ನಮ್ಮದು

ಅಂಬೇಡ್ಕರ್ ಜಯಂತಿ ಆಚರಿಸಿದ್ದಕ್ಕೆ ದಲಿತ ವ್ಯಕ್ತಿ ಕೊಲೆ: ಏಳು ಆರೋಪಿಗಳ ಬಂಧನ

ಮುಂಬಯಿ: ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಡಾ ಬಿಆರ್ ಅಂಬೇಡ್ಕರ್ ಅವರ ಜನ್ಮ ಜಯಂತಿ ಆಚರಿಸಿದ ಕಾರಣಕ್ಕೆ 24 ವರ್ಷದ ದಲಿತ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರು ಏಳು ಮಂದಿಯನ್ನು ಶನಿವಾರ ಬಂಧಿಸಿದ್ದಾರೆ. ಮಹಾರಾಷ್ಟ್ರದ ನಾಂಡೇಡ್ ಜಿಲ್ಲೆಯ ಬೊಂಧಾರ್ ಹವೇಲಿ ಗ್ರಾಮದಲ್ಲಿ ಗುರುವಾರ ದಲಿತ ವ್ಯಕ್ತಿಯ ಕೊಲೆ ನಡೆದಿತ್ತು.

ಹತ್ಯಗೀಡಾದ ವ್ಯಕ್ತಿಯನ್ನು ಅಕ್ಷಯ್ ಭಾಳೆರಾವ್ ಎಂದು ಗುರುತಿಸಲಾಗಿದೆ. ಗುರುವಾರ ಸಂಜೆ ಭಾಳೆರಾವ್ ಅವರು ರಸ್ತೆಯಲ್ಲಿ ಹೋಗುತ್ತಿದ್ದರು. ಅದೇ ವೇಳೆ ಮೇಲ್ವರ್ಗಕ್ಕೆ ಸೇರಿದವರು ಎನ್ನಲಾದ ಮದುವೆ ಸಮಾರಂಭದ ಗುಂಪು ತೆರಳುತ್ತಿತ್ತು. ಅವರಲ್ಲಿ ಕೆಲವರು ಖಡ್ಗಗಳನ್ನು ಹಿಡಿದುಕೊಂಡಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಕ್ಷಯ್ ಮತ್ತು ಆತನ ಸಹೋದರ ಆಕಾಶ್ ಭಾಳೆರಾವ್ ಅವರನ್ನು ಕಂಡ ಆರೋಪಿಗಳಲ್ಲಿ ಒಬ್ಬಾತ, ಈ ಜನರು ಹಳ್ಳಿಯಲ್ಲಿ ಭೀಮ್ ಜಯಂತಿ (ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿ) ಆಚರಿಸಿದ್ದಾರೆ. ಅದಕ್ಕಾಗಿ ಇವರನ್ನು ಕೊಲ್ಲಬೇಕು ಎಂದು ಹೇಳಿದ್ದಾಗಿ ಅವರು ಹೇಳಿದ್ದಾರೆ.

ಇದು ಅವರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ಆಯುಧಗಳನ್ನು ಹಿಡಿದಿದ್ದ ಗುಂಪು ಅಕ್ಷಯ್ ಭಾಳೆರಾವ್ ಮೇಲೆ ಹಲ್ಲೆ ನಡೆಸಿ, ಕತ್ತಿಯಿಂದ ಚುಚ್ಚಿ ಕೊಲೆ ಮಾಡಿದೆ. ಅವರ ಸಹೋದರ ಆಕಾಶ್ ಮೇಲೆ ಕೂಡ ಹಲ್ಲೆ ನಡೆಸಿದೆ.

ಅಕ್ಷಯ್ ಭಾಳೆರಾವ್ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಲ್ಲಿಗೆ ಕರೆತರುವ ಮುನ್ನವೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು.


9 ಮಂದಿ ವಿರುದ್ಧ ಪ್ರಕರಣ
ಆಕಾಶ್ ನೀಡಿದ ದೂರಿನ ಅನ್ವಯ ಪೊಲೀಸರು ಐಪಿಸಿ ಸೆಕ್ಷನ್ ಅಡಿ ಕೊಲೆ, ಕೊಲೆ ಪ್ರಯತ್ನ, ಗಲಭೆ ಮತ್ತು ಹಲ್ಲೆ ಪ್ರಕರಣ ದಾಖಲಿಸಿದ್ದಾರೆ. ಜತೆಗೆ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ 1999ರ ಅಡಿ ಕೂಡ ಶುಕ್ರವಾರ ಒಟ್ಟು 9 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಏಳು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಾಂಡೇಡ್ ಪೊಲೀಸ್ ವರಿಷ್ಠಾಧಿಕಾರಿ ಶ್ರೀಕೃಷ್ಣ ಕೋಕಟೆ ಹೇಳಿದ್ದಾರೆ.

“ಮರಾಠ ಸಮುದಾಯಕ್ಕೆ ಸೇರಿದ ನಾರಾಯಣ್ ತಿಡ್ಕೆ ಎಂಬ ವ್ಯಕ್ತಿಯ ಮದುವೆಯಾಗಿತ್ತು. ಗುರುವಾರ ಸಂಜೆ ಒಂದು ಗುಂಪು ಮದುವೆಯ ಸಂಭ್ರಮಾಚರಣೆಯಲ್ಲಿ ತೊಡಗಿತ್ತು. ಅವರು ಖಡ್ಗ, ಡ್ಯಾಗರ್ಸ್ ಮತ್ತು ಕೋಲುಗಳನ್ನು ಹಿಡಿದು ರಸ್ತೆಯಲ್ಲಿ ನರ್ತಿಸುತ್ತಿದ್ದರು” ಎಂದು ಮೃತ ಅಕ್ಷಯ್ ಅಣ್ಣ ಆಕಾಶ್ ದೂರಿನಲ್ಲಿ ತಿಳಿಸಿದ್ದಾರೆ.

ಗುರುವಾರ ಸಂಜೆ 7.30ರ ಸುಮಾರಿಗೆ ಆಕಾಶ್ ಮತ್ತು ಅಕ್ಷಯ್ ಇಬ್ಬರೂ ದಿನಸಿ ತರಲು ಅಂಗಡಿ ಕಡೆಗೆ ಹೊರಟಿದ್ದರು. ಆಗ ಆ ಗುಂಪು ಅವರಿಬ್ಬರ ಬಗ್ಗೆ ಕೀಳುಮಟ್ಟದ ಹೇಳಿಕೆಗಳ ಮೂಲಕ ಕಿರಿಕುಳ ನೀಡಲು ಆರಂಭಿಸಿತ್ತು ಎಂದು ಆರೋಪಿಸಲಾಗಿದೆ.

“ಆ ಗುಂಪು ನನ್ನ ತಮ್ಮನನ್ನು ಥಳಿಸಲು ಆರಂಭಿಸಿತ್ತು. ನಂತರ ಬಡಿಗೆಗಳಿಂದ ಹಲ್ಲೆ ಮಾಡಿದರು. ಒಂದು ಹಂತದಲ್ಲಿ ನನ್ನ ತಮ್ಮನ ಕೈಗಳು ಮತ್ತು ಕಾಲುಗಳನ್ನು ಅವರು ಗಟ್ಟಿಯಾಗಿ ಹಿಡಿದುಕೊಂಡರು. ಇಬ್ಬರು ಆರೋಪಿಗಳು ಆತನ ಹೊಟ್ಟೆಗೆ ಇರಿದರು” ಎಂದು ಆಕಾಶ್ ವಿವರಿಸಿದ್ದಾರೆ.ಅಮ್ಮನ ಮೇಲೆಯೂ ಕಲ್ಲು ಎಸೆತ ಇದನ್ನು ತಡೆಯಲು ಹೋದಾಗ ಆಕಾಶ್‌ಗೆ ಕೂಡ ಡ್ಯಾಗರ್‌ನಿಂದ ಇರಿದಿದ್ದರು. “ಆಕಾಶ್ ಎಡಗೈಗೆ ಗಾಯಗಳಾಗಿವೆ. ಅವರಿಬ್ಬರನ್ನು ತಡೆಯಲು ಹೋದ ಅಮ್ಮನ ಮೇಲೆ ಕೂಡ ಗುಂಪು ಕಲ್ಲುಗಳನ್ನು ಎಸೆದಿದೆ. ಇದರಿಂದ ಅವರಿಗೆ ಸಹ ಗಾಯಗಳಾಗಿವೆ” ಎಂದು ಅವರ ಹಿರಿಯ ಸಹೋದರ ಸಂದೇಶ್ ತಿಳಿಸಿದ್ದಾರೆ.

“ನಾನು ಆಟೋದಲ್ಲಿ ಅಕ್ಷಯ್‌ನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದೆ. ಆದರೆ ದಾರಿ ಮಧ್ಯದಲ್ಲಿಯೇ ಆತ ಕೊನೆಯುಸಿರೆಳೆದ” ಎಂದು ಆಕಾಶ್ ದೂರಿನಲ್ಲಿ ವಿವರಿಸಿದ್ದಾರೆ.

“ಈ ಏಪ್ರಿಲ್‌ನಲ್ಲಿ ಹಳ್ಳಿಯಲ್ಲಿ ಮೊದಲ ಬಾರಿ ಅಂಬೇಡ್ಕರ್ ಜಯಂತಿ ಆಚರಿಸಲಾಗಿತ್ತು. ಕಾನೂನು ಸುವ್ಯವಸ್ಥೆ ಕಾಪಾಡಲು ಭದ್ರತೆ ಒದಗಿಸಲಾಗಿತ್ತು. ಬೀದಿಗಳಲ್ಲಿ ಹಾಡುಗಳನ್ನು ಹಾಕಲು ಅವರಿಗೆ ಅವಕಾಶ ನೀಡಿರಲಿಲ್ಲ. ಆದರೆ ಗುರುವಾರ ಸಂಜೆ ಬೇರೆ ಸಮುದಾಯದ ಜನರು ಮದುವೆ ಸಮಾರಂಭದ ಆಚರಣೆಯಲ್ಲಿ ಬೀದಿಗಳಲ್ಲಿ ಜೋರಾಗಿ ಹಾಡು ಹಾಕಿಕೊಂಡು ಹೋಗುತ್ತಿದ್ದರು. ಅವರ ನಡುವಿನ ಜಗಳಕ್ಕೆ ಇದು ಕಾರಣ ಇರಬಹುದು” ಎಂದು ನಾಂಡೇಡ್ ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.

error: Content is protected !!