ಉಡುಪಿ: ಅವನು ಕುಂದಾಪುರದ ಹಳ್ಳಿಯೊಂದರ ಆಸೆಗಣ್ಣಿನ ಹುಡುಗ. ಏನಾದ್ರೂ ಸಾಧಿಸಬೇಕು ಅಂತ ಹೊರಟಿದ್ದ. ಗೆಳೆಯನ ಜೊತೆಗೂಡಿ ಡ್ರೀಮ್ಸ್ ಹೆಸರಲ್ಲೇ ಫೈನಾನ್ಸ್ ನಡೆಸುತ್ತಿದ್ದವ ಇದ್ದಕ್ಕಿದ್ದಂತೆ ನಿನ್ನೆ ರಾತ್ರಿ ಕೊಲೆಯಾಗಿದ್ದಾನೆ. ಫೈನಾನ್ಸ್ ಗೆ ಪಾರ್ಟ್ನರ್ ಆಗಿ ಸಾಥ್ ಕೊಡುತ್ತೇನೆ ಎಂದು ಬಂದಿದ್ದ ಜೊತೆಗಾರನೇ ಕೊಲೆಗಾರ ಅಂತಿದ್ದಾರೆ ಜನ.
ಹೌದು ಲಾಕ್ ಡೌನ್ ಮುಗಿಯುತ್ತಿದ್ದ ಹಾಗೆ ಉಡುಪಿ ಜಿಲ್ಲೆಯ ಕ್ರೈಂ ರೇಟ್ ಒಂದೇ ಸಮನೆ ಏರುತ್ತಿದೆ ಒಂದರ ಹಿಂದೆ ಇನ್ನೊಂದು ಕೊಲೆ ನಡೆಯುತ್ತಿದೆ. ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಫೈನಾನ್ಸ್ ಮಾಲಕನೊಬ್ಬ ಭೀಕರ ರೀತಿಯಲ್ಲಿ ಕೊಲೆಯಾಗಿದ್ದಾನೆ ತನ್ನದೇ ಫೈನಾನ್ಸ್ ನಲ್ಲಿ ಸೋಫಾಮೇಲೆ ಕುಳಿತವನು ಕತ್ತುಸೀಳಿ ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮೃತ ಅಜೇಂದ್ರ ಶೆಟ್ಟಿ, ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಕಾಳಾವರ ಎಂಬಲ್ಲಿ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ. ಯಡಾಡಿ ಮತ್ಯಾಡಿ ಕೂಡಲ್ ನಿವಾಸಯಾದ ಈತ, ಫೈನಾನ್ಸ್ ವ್ಯವಹಾರದಲ್ಲಿ ಉತ್ತಮ ಪ್ರಗತಿ ಕಂಡಿದ್ದ. ಡ್ರೀಮ್ ಫೈನಾನ್ಸ್ ಎನ್ನುವ ಆರ್ಥಿಕ ವ್ಯವಹಾರದ ಸಂಸ್ಥೆಯನ್ನು ಅಜೇಂದ್ರ ಶೆಟ್ಟಿ ಹಾಗೂ ಮೊಳಹಳ್ಳಿ ಮೂಲದ ಅನುಪ್ ಶೆಟ್ಟಿ ಪಾಲುದಾರಿಕೆಯೊಂದಿಗೆ ಕಳೆದ ಐದು ವರ್ಷಗಳಿಂದ ನಡೆಸುತ್ತಿದ್ದರು.
ಸಾಮಾನ್ಯವಾಗಿ ರಾತ್ರಿ 9 ಗಂಟೆಗೆ ಮನೆ ಸೇರುತ್ತಿದ್ದ ಅಜೇಂದ್ರ ನಿನ್ನೆ ಮಾತ್ರ ತಡರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಹೆದರಿದ ಮನೆಯವರು, ಸ್ನೇಹಿತರು ಹುಡುಕಾಟ ನಡೆಸಿದ್ದಾರೆ. ಅಜೇಂದ್ರ ಸಹೋದರ ಮಹೇಂದ್ರ ಶೆಟ್ಟಿ, ಸ್ನೇಹಿತರಾದ ರಕ್ಷಿತ್, ಜಯಕರ ಹಾಗೂ ಪ್ರಥ್ವೀಷ್ ಹುಡುಕಾಡುತ್ತಾ ಕಾಳಾವರದ ಫೈನಾನ್ಸ್’ಗೆ ಬಂದಾಗ ಎದುರಿನ ಶೆಟರ್ ಮುಚ್ಚಿದ್ದು ಬೀಗ ಹಾಕಿರಲಿಲ್ಲ. ಅನುಮಾನಗೊಂಡು ಶಟರ್ ತೆರೆದು ಒಳಪ್ರವೇಶಿಸಿದಾಗ ಅಜೇಂದ್ರ ಶೆಟ್ಟಿ ಕುಳಿತ ಭಂಗಿಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ತಕ್ಷಣ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಕರೆದೊಯ್ದರಾದರೂ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಅಜೇಂದ್ರ ಅವರ ಕೆನ್ನೆ, ಕತ್ತು, ಕಾಲಿನ ಭಾಗದಲ್ಲಿ ಇರಿದ ಗಾಯಗಳಾಗಿದೆ. ಹರಿತವಾದ ಆಯುಧದಿಂದ ಕತ್ತು ಸೀಳಲಾಗಿದೆ.
ಕೊಲೆಯಾಗಿರುವ ಅಜೇಂದ್ರ ಶೆಟ್ಟಿ ಹಾಗೂ ಅನುಪ್ ಶೆಟ್ಟಿ ಶುಕ್ರವಾರ ರಾತ್ರಿ ಕಚೇರಿಯಲ್ಲಿ ಒಟ್ಟಿಗೆ ಇದ್ದರು. ಹಣಕಾಸು ವಿಚಾರದಲ್ಲಿ ಮನಸ್ತಾಪ ನಡೆದು ಅನುಪ್ ಕೊಲೆ ಮಾಡಿರಬಹುದೆಂದು ಅಂದಾಜಿಸಲಾಗಿದೆ. ಕೊಲೆ ಪೂರ್ವನಿಯೋಜಿತವಾಗಿತ್ತು ಎನ್ನುವುದಕ್ಕೆ ಹರಿತವಾದ ಆಯುಧ ಬಳಸಿರುವುದು ಪುಷ್ಟಿ ನೀಡುತ್ತಿದೆ. ಹಣಕಾಸಿನ ವಿಚಾರದ ಬಗ್ಗೆ ಹೇಳಿದ್ದ ಆದರೆ ಮನಸ್ತಾಪದ ಬಗ್ಗೆ ಹೇಳಿಕೊಂಡಿರಲಿಲ್ಲ. ಈಗ ಆತನ ಪಾರ್ಟನರ್ ನನ್ನ ತಮ್ಮನನ್ನು ಕೊಲೆ ಮಾಡಿದ್ದಾನೆ. ಕೊಲೆಗೆ ಸಂಬಂಧಿಸಿದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಅಜೇಂದ್ರ ಸಹೋದರ ಮಾಧ್ಯಮದ ಮುಂದೆ ಕಣ್ಣೀರು ಹಾಕಿದ್ದಾರೆ.
ಅನುಪ್ ಶೆಟ್ಟಿ ಬುಲ್ಲೆಟ್ ಬೈಕ್ ಫೈನಾನ್ಸ್ ಎದುರಗಡೆ ಇದ್ದು ಅಜೇಂದ್ರ ಶೆಟ್ಟಿ ತಿಂಗಳ ಹಿಂದಷ್ಟೆ ಖರೀದಿಸಿದ್ದ ಕಾರಿನಲ್ಲಿ ಅನುಪ್ ಎಸ್ಕೇಪ್ ಆಗಿರುವುದು ಆತನೇ ಕೊಲೆಗಾರ ಎನ್ನುವ ಅನುಮಾನ ಬಲಪಡಿಸಿದೆ. ಮಾತ್ರವಲ್ಲ ಅನುಪ್ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಇದೆ. ಮೂಲಗಳ ಪ್ರಕಾರ ಉತ್ತರಕನ್ನಡ ಮಾರ್ಗವಾಗಿ ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ತಡರಾತ್ರಿಯೇ ಘಟನಾ ಸ್ಥಳಕ್ಕೆ ಉಡುಪಿ ಎಸ್ಪಿ ವಿಷ್ಣುವರ್ಧನ್, ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ಫೋರೆನ್ಸಿಕ್ ತಜ್ಞರ ತಂಡ ಕೃತ್ಯ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿದೆ. ಕೊಲೆಗಾರನ ಪತ್ತೆಗೆ ಪೊಲೀಸರು ತಂಡ ರಚಿಸಿ ಬಲೆಬೀಸಿದ್ದಾರೆ.