ಬೆಳಗಾವಿ: ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ 12 ವರ್ಷದ ನಂತರ ಗ್ರಾಮ ದೇವತೆಗಳ ಜಾತ್ರೆ ನಡೆದಿತ್ತು. ಮಹಾಲಕ್ಷ್ಮಿ, ದ್ಯಾಮವ್ವ ದೇವಿ ಜಾತ್ರೆಗೆ ದೂರದ ಸಂಬಂಧಿಗಳು ಸೇರಿದಂತೆ ಮದುವೆ ಮಾಡಿಕೊಟ್ಟ ಹೆಣ್ಣು ಮಕ್ಕಳು, ಆಪ್ತರೆಲ್ಲರೂ ಆಗಮಿಸಿದ್ದರು. 9 ದಿನಗಳ ಕಾಲ ನಡೆಯುವ ದೇವಿ ಜಾತ್ರೆ ಆರಂಭವಾದ ಏಳನೇ ದಿನಕ್ಕೆ ಇದೇ ಗ್ರಾಮದಲ್ಲಿ ಹೆಣ ಬಿದಿದ್ದು, ಇಡೀ ಊರಿಗೆ ಊರೇ ಸೂತಕದ ಛಾಯೆಯಲ್ಲಿದೆ.
ಹೌದು ಚಂದ್ರಕಾಂತ್ ಮಾವರ್ಕರ್(42) ಎಂಬುವವರನ್ನ ಆತನ ಪತ್ನಿ ಸತ್ಯೆವ್ವಾ ಹಾಗೂ 17 ವರ್ಷದ ಮಗನೇ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಇನ್ನು ಇತನಿಗೆ ಮೂರು ಹೆಣ್ಣು ಮಕ್ಕಳು, ಒಂದು ಗಂಡು ಮಗನಿದ್ದಾನೆ. ಮೂರು ಹೆಣ್ಣು ಮಕ್ಕಳನ್ನ ಈಗಾಗಲೇ ಮದುವೆ ಮಾಡೊಕೊಟ್ಟಿದ್ದ. ಹೀಗಿದ್ದ ಸಂಸಾರದಲ್ಲಿ ಮೇ. 27ರ ಮಧ್ಯರಾತ್ರಿ ಚಂದ್ರಕಾಂತ್ ಕುಡಿದು ಬಂದು ಹೆಂಡತಿ ಜತೆಗೆ ಕಿರಿಕಿರಿ ಮಾಡಲಾರಂಭಿಸಿದ್ದಾನೆ. ಜಗಳ ಮಾಡಬೇಡಾ ಮಕ್ಕಳು ಅಳಿಯಂದಿರೂ ಬಂದಿದ್ದಾರೆಂದು ಆತನನ್ನ ಸಂಬಾಳಿಸಿದ್ರೂ ಕ್ಯಾರೇ ಅನ್ನದೇ ಜೋರಾಗಿ ಜಗಳ ಮಾಡಿದ್ದಾನೆ. ಇದರಿಂದ ಆಕ್ರೋಶಗೊಂಡ ಸತ್ಯೆವ್ವಾ ಹಾಗೂ ಮಗ ಹತ್ಯೆ ಮಾಡಿದ್ದಾರೆ.
ಬೆಳಗ್ಗೆಯಿಂದ ರಾತ್ರಿಯವರೆಗೆ ನಶೆಯಲ್ಲೇ ಇರುತ್ತಿದ್ದ ಚಂದ್ರಕಾಂತ್ ಕೊಲೆಯಾದ ಚಂದ್ರಕಾಂತ್ ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಕುಡಿದ ನಶೆಯಲ್ಲೇ ತೆಲಾಡುತ್ತಿದ್ದನಂತೆ. ಮಕ್ಕಳು, ಅಳಿಯಂದಿರು ಬಂದಿದ್ದಾರೆ ಈಗಲಾದ್ರೂ ಕುಡಿಯುವುದನ್ನ ಬಿಡಿ ಎಂದು ಹೆಂಡತಿ ಸತ್ಯೆವ್ವಾ ಆಗಾಗ ಗಂಡನಿಗೆ ಬುದ್ದಿವಾದ ಹೇಳಿದ್ದಾಳೆ. ಇಷ್ಟಾದರೂ ಕೇಳದ ಚಂದ್ರಕಾಂತ್ ಜಾತ್ರೆ ಸಂದರ್ಭದಲ್ಲೂ ಕುಡಿದು ಹೆಂಡತಿ ಜತೆಗೆ ಜಗಳ ಮಾಡಿದ್ದಾನೆ. ನಿರಂತರವಾಗಿ ಜಗಳವಾಡಿದ್ದಷ್ಟೇ ಅಲ್ಲದೇ ಅವಾಚ್ಯವಾಗಿ ನಿಂದನೆ ಮಾಡಿದ್ದ, ಇದರಿಂದ ಆಕ್ರೋಶಗೊಂಡು ಹೋಗಿದ್ದ ಸತ್ಯವ್ವಾ, ರಾತ್ರಿ ಚಂದ್ರಕಾಂತ್‌ಗೆ ಕೊನೆಯದಾಗಿ ಬುದ್ದಿ ಹೇಳಿದ್ದಾರೆ.
ಈ ವೇಳೆ ಕೇಳದಿದ್ದಾಗ ಮಗ ಮತ್ತು ಸತ್ಯೆವ್ವಾ ಸೇರಿಕೊಂಡು ರಾಡ್ ನಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ಜಗಳ ವಿಕೋಪಕ್ಕೆ ಹೋಗುತ್ತಿದ್ದನ್ನ ಗಮನಿಸಿದ ಹೆಣ್ಣು ಮಕ್ಕಳು ಕೂಡಲೇ ಒಳಗೆ ಬಂದು ತಂದೆ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನ ಗಮನಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಚಂದ್ರಕಾಂತ್ ಸಾವನ್ನಪ್ಪಿದ್ದಾರೆ. ಇತ್ತ ಕೊಲೆ ಪ್ರಕರಣ ದಾಖಲಿಸಿಕೊಂಡ ಮೂಡಲಗಿ ಪೊಲೀಸರು ಕೊಲೆ ಆರೋಪದಲ್ಲಿ ಹೆಂಡತಿ ಸತ್ಯೆವ್ವಾ ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಮಗನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.
ತಂದೆ ಕರೆದ ಅನ್ನೋ ಕಾರಣಕ್ಕೆ ಹುರುಪಿನಿಂದ ಆಗಮಿಸಿದ ಮಕ್ಕಳು ಇದೀಗ ತಂದೆಯ ಅಂತ್ಯಸಂಸ್ಕಾರ ಮಾಡಿದ್ರೆ, ಇತ್ತ ತಾಯಿ ಮತ್ತು ತಮ್ಮ ಜೈಲಿಗೆ ಹೋಗುವುದನ್ನ ಕಂಡು ದಿಕ್ಕೆ ತೋಚದ ಸ್ಥಿತಿಯಲ್ಲಿದ್ದಾರೆ. ಒಟ್ಟಾರೆ ಜಾತ್ರೆ ಗುಂಗಿನಲ್ಲಿದ್ದ ಗ್ರಾಮದಲ್ಲಿ ಸೂತಕದ ಛಾಯೆ ಇದ್ರೆ, ಇತ್ತ ಕುಡಿದು ಕಿರಿಕಿರಿ ಮಾಡುತ್ತಿದ್ದ ಅನ್ನೋ ಕಾರಣಕ್ಕೆ ಗಂಡನ ಕೊಂದು ಹೆಂಡತಿ ಮಗನ ಜತೆಗೆ ಜೈಲು ಸೇರಿದ್ದಾರೆ