ಬೆಳಗಾವಿ: ದಿಕ್ಕು ತೋಚದ ಸ್ಥಿತಿಯಲ್ಲಿ ಕುಳಿತ ಈ ತಾಯಿಯ ಪರಿಸ್ಥಿತಿ ಯಾರಿಗೂ ಬಾರದಿರಲಿ. ಒಂದು ಕಡೆ ಗಂಡ ಜೈಲು ಸೇರಿದ್ದರೆ ಇನ್ನೊಂದು ಕಡೆ ಮಗ ಮಸಣ ಸೇರಿದ್ದಾನೆ. ಎನೂ ಮಾಡಲಿ ಅನ್ನೋದು ಕೂಡ ಗೊತ್ತಾಗದೇ ಮನದಲ್ಲಿ ಎಲ್ಲವನ್ನೂ ನುಂಗಿಕೊಂಡು ಕುಳಿತಿದ್ದಾರೆ. ಈ ತಾಯಿಯ ಹೆಸರು ಶೋಭಾ, ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಬಿ.ಕೆ ಗ್ರಾಮದ ನಿವಾಸಿ. ಅರವತ್ತರ ವಯಸ್ಸಿನಲ್ಲೂ ದುಡಿದೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಈ ಕುಟುಂಬ ಇದೀಗ ಬೀದಿಗೆ ಬಂದಿದೆ. ಅಷ್ಟಕ್ಕೂ ಈ ಶೋಭಾರ ಗಂಡ ಜೀನ್ನಪ್ಪ ಕಾಂಜಿ ಮಗನನ್ನೇ ಕೊಲೆ ಮಾಡಿ ಜೈಲು ಸೇರಿದ್ದಾನೆ.
ನಿನ್ನೆ ಸಂಜೆ 30ವರ್ಷದ ಮಗ ಭರತೇಶ್ ಕಂಠಪೂರ್ತಿ ಕುಡಿದುಕೊಂಡು ಮನೆಗೆ ಬಂದಿದ್ದಾನೆ. ಹೀಗೆ ಕುಡಿದುಕೊಂಡು ಬಂದರೂ, ಇನ್ನೂ ಕುಡಿಯಲು ಹಣ ಕೊಡು ಅಂತಾ ತಂದೆಯನ್ನ ಪೀಡಿಸಿದ್ದಾನೆ. ಹಣ ಇಲ್ಲ ಎಂದು ತಂದೆ ಜೀನ್ನಪ್ಪ ಹೇಳಿದ್ರೂ ಕೇಳದ ಮಗ ಜಗಳ ತೆಗೆದಿದ್ದಾನೆ. ಈ ವೇಳೆ ಪಿತ್ತ ನೆತ್ತಿಗೇರಿಸಿಕೊಂಡ ತಂದೆ ಜೀನ್ನಪ್ಪ ಮನೆಯಲ್ಲಿದ್ದ ಕೊಡಲಿಯಿಂದ ಮಗನ ಕತ್ತಿಗೆ ಹೊಡೆದು ಸಾಯಿಸಿದ್ದಾನೆ. ನಂತರ ಕಾಗವಾಡ ಪೊಲೀಸ್ ಠಾಣೆಗೆ ಹೋಗಿ ಮಗನನ್ನ ಕೊಂದಿದ್ದೇನೆ ಎಂದು ಪೊಲೀಸರಿಗೆ ಶರಣಾಗಿದ್ದಾನೆ.
ಅಷ್ಟಕ್ಕೂ ಇಲ್ಲಿ ಕೊಲೆ ಮಾಡಿದ ಜೀನ್ನಪ್ಪ 64ವರ್ಷದವನಾಗಿದ್ದು, ಈ ವಯಸ್ಸಿನಲ್ಲೂ ಕೂಲಿ ಕೆಲಸ ಮಾಡಿಕೊಂಡಿದ್ದ. ಮಗ ಮದುವೆ ವಯಸ್ಸಿಗೆ ಬಂದರೂ ಕೆಲಸ ಮಾಡದೇ ಊರಲ್ಲಿ ಉಂಡಾಡಿ ಗುಂಡನಂತೆ ಓಡಾಡಿಕೊಂಡಿದ್ದ. ದುಡಿದು ವಯಸ್ಸಾದ ತಂದೆ ತಾಯಿಯನ್ನ ಸಾಕಬೇಕಿದ್ದ ಮಗನೇ ತಂದೆ ತಾಯಿ ಮೇಲೆ ಹಲ್ಲೆ ಮಾಡಿ ಅವರು ದುಡಿಮೆಯ ಹಣವನ್ನೇ ಕಿತ್ತುಕೊಂಡು ಕುಡಿತದ ನಶೆ ಮಾಡಿಕೊಂಡು ಓಡಾಡುತ್ತಿದ್ದ.
ಕೆಲ ವರ್ಷಗಳಿಂದ ಆಗಾಗ ತಂದೆ ಜೊತೆಗೆ ಕುಡಿಯಲು ಹಣ ಕೊಡುವ ವಿಚಾರದಲ್ಲಿ ಗಲಾಟೆ ಮಾಡಿಕೊಳ್ಳುತ್ತಿದ್ದ ಈ ಪಾಪಿ ಭರತೇಶ್ ಹಣ ಕೊಟ್ಟ ಬಳಿಕ ಸುಮ್ಮನಾಗುತ್ತಿದ್ದ. ಇನ್ನೂ ಮದುವೆ ಕೂಡ ಆಗದ ಈತನಿಗೆ ತಮ್ಮನಿದ್ದು ಆತ ಇನ್ನೂ ಓದುತ್ತಿದ್ದಾನೆ ಈ ಕಾರಣಕ್ಕಾಗಿ ಕೂಲಿ ಕೆಲಸ ಮಾಡುತ್ತಿದ್ದ ತಂದೆ ತಾಯಿ ಮಗ ಜಗಳ ತೆಗೆದಾಗ ಹಣಕೊಟ್ಟು ಸುಮ್ಮನಾಗಿಸುತ್ತಿದ್ದರು. ಆದರೆ ಒಂದು ವಾರದಿಂದ ತಂದೆ ಎಲ್ಲಿಯೂ ಕೆಲಸಕ್ಕೆ ಹೋಗಿರಲಿಲ್ಲ ಆತನ ಬಳಿ ಹಣವೂ ಇರಲಿಲ್ಲ. ಈ ಕಾರಣಕ್ಕಾಗಿ ಭರತೇಶ್ ದುಡ್ಡು ಕೇಳಿದಾಗ ಕೊಟ್ಟಿರಲಿಲ್ಲ ಇದೇ ಕಾರಣಕ್ಕೆ ಅವರ ಮೇಲೆ ಹಲ್ಲೆ ಮಾಡಿ ಜಗಳ ಮಾಡಿದ್ದಾನೆ.
ನಿನ್ನೆಯೂ ಕೂಡ ಇದೇ ವಿಚಾರಕ್ಕೆ ಜಗಳವಾಗಿ ಮಗನ ಕಾಟ ತಾಳಲಾರದೇ ಭರತೇಶ್ನನ್ನ ಕೊಲೆ ಮಾಡಿದ್ದಾನೆ. ಇನ್ನೂ ಈ ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಕಾಗವಾಡ ಪೊಲೀಸರು ಪರಿಶೀಲನೆ ನಡೆಸಿ ಶವವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಇಂದು(ಮಾ.2) ಸಂಜೆ ವೇಳೆ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಶವ ಹಸ್ತಾಂತರ ಮಾಡಲಿದ್ದಾರೆ. ಇತ್ತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ತಂದೆ ಜೀನ್ನಪ್ಪನನ್ನ ಜೈಲಿಗೆ ಕಳುಹಿಸಿದ್ದಾರೆ.
ಒಟ್ಟಾರೆ ಮಕ್ಕಳು ದೊಡ್ಡವರಾದ ಬಳಿಕ ತಂದೆ ತಾಯಿಯನ್ನ ದುಡಿದು ಸಾಕುತ್ತಾರೆ ಅಂದುಕೊಂಡಿದ್ದ ದಂಪತಿಗೆ ಇಳಿ ವಯಸ್ಸಿನಲ್ಲೂ ಪಾಪಿ ಮಗ ಕಾಡಲು ಶುರು ಮಾಡಿದ್ದ. ಆತನ ಕಾಟ ತಾಳಲಾರದೇ ತಂದೆ ಕೊಲೆ ಮಾಡಿ ಜೈಲುಪಾಲಾದ್ರೇ, ಮಗ ಮಸಣ ಸೇರಿದ್ದಾನೆ. ಆದರೆ ಇಬ್ಬರನ್ನೂ ಕಳೆದುಕೊಂಡ ಆ ತಾಯಿ ಮಾತ್ರ ಇದೀಗ ಅನಾಥವಾಗಿದ್ದು ಮುಂದೇನೂ ಅನ್ನೋ ಚಿಂತೆಯಲ್ಲಿದ್ದಾರೆ. ಅದೇನೆ ಇರಲಿ ಮಗನ ಚಟ ತಂದೆಯ ಹಠದಿಂದ ಇದೀಗ ಇಡೀ ಕುಟುಂಬವೇ ಬೀದಿಗೆ ಬಂದಿದ್ದು ವಿಪರ್ಯಾಸ.