ಕೂಗು ನಿಮ್ಮದು ಧ್ವನಿ ನಮ್ಮದು

ವಿಜಯಪುರ: ಗಂಡ, ಹೆಂಡತಿ ಜಗಳಕ್ಕೆ ಬಲಿಯಾದವು ನಾಲ್ಕು ಜೀವ

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ವಿಠಲವಾಡಿ ತಾಂಡಾದ ಮಾಧವ ನಗರದಲ್ಲಿ ಶನಿವಾರ ರಾತ್ರಿ ರಾಮು ಮತ್ತು ಗೀತಾ ಚವ್ಹಾಣ ಎಂಬ ದಂಪತಿಯ ನಡುವೆ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ. ಇದರಿಂದ ಮನನೊಂದಿದ್ದ ಆಕೆ ತನ್ನ ಮೂವರು ಮಕ್ಕಳನ್ನು ಮನೆಯ ಮುಂದಿನ ಸಂಪಿನಲ್ಲಿ ಎಸೆದು, ತಾನೂ ಅದೇ ಸಂಪಿಗೆ ಎಗರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶನಿವಾರ ಮಧ್ಯರಾತ್ರಿಯಲ್ಲಿ ಈ ಘಟನೆ ನಡೆದಿದೆ.

*ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ವಿಠಲವಾಡಿ ತಾಂಡಾದ ಮಾಧವ ನಗರದಲ್ಲಿ ಶನಿವಾರ ರಾತ್ರಿ ನಡೆದ ಘಟನೆ.
*ರಾಮು ಮತ್ತು ಗೀತಾ ಚವ್ಹಾಣ ಎಂಬ ದಂಪತಿಯ ನಡುವೆ ಮಾತಿಗೆ ಮಾತು ಬೆಳೆದು ಜಗಳ.
*ತನ್ನ ಮೂವರು ಮಕ್ಕಳನ್ನು ಮನೆಯ ಮುಂದಿನ ಸಂಪಿಗೆ ಎಸೆದು ತಾನೂ ಸಂಪಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿರುವ ಗೀತಾ.

ವಿಜಯಪುರ: ಶನಿವಾರ ರಾತ್ರಿ ಊಟಕ್ಕೂ ಮುನ್ನ ಗಂಡ ಮತ್ತು ಹೆಂಡತಿಯ ಮಧ್ಯೆ ಉಂಟಾದ ಜಗಳ ಅದೇ ಮನೆಯ ಮೂವರು ಮಕ್ಕಳು ಸೇರಿ ನಾಲ್ವರು ಸದಸ್ಯರನ್ನು ಬಲಿ ತಗೆದುಕೊಂಡಿದೆ. ಗಂಡನೊಂದಿಗಿನ ಜಗಳದಿಂದ ಬೇಸತ್ತ ಆಕೆ, ತನ್ನ ಮೂವರು ಮಕ್ಕಳನ್ನು ಸಂಪಿನಲ್ಲಿ (ಮನೆಯ ಮುಂದಿನ ತೊಟ್ಟಿ) ದೂಡಿ ತಾನೂ ಅದೇ ಸಂಪಿಗೆ ನೆಗೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಾನಸಿಕವಾಗಿ ಖಿನ್ನಳಾಗಿದ್ದ ಮಹಿಳೆಯ ಈ ಕೃತ್ಯ ಎಸಗಿದ್ದಾಳೆ ಎಂದು ಪತಿಯ ಮನೆಯವರು ಹೇಳಿದರೆ, ಮಹಿಳೆಯ ತವರು ಮನೆಯವರು ಇದಕ್ಕೆಲ್ಲ ಅವಳ ಗಂಡ ಮತ್ತು ಮನೆಯವರೇ ಕಾರಣ ಎಂದು ಪ್ರತ್ಯಾರೋಪ ಮಾಡಿದ್ದಾರೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ವಿಠಲವಾಡಿ ತಾಂಡಾದ ಮಾಧವ ನಗರದಲ್ಲಿ ಈ ಘಟನೆ ನಡೆದಿದೆ.


ರಾಮು ಮತ್ತು ಗೀತಾ ಚವ್ಹಾಣ ದಂಪತಿಗೆ ಮೂರು ಜನ ಮಕ್ಕಳಿದ್ದವು. ಶನಿವಾರ ರಾತ್ರಿ ಗಂಡ ಮತ್ತು ಹೆಂಡತಿಯ ನಡುವೆ ಜಗಳವಾಗಿದೆ. ಇದೇ ಸಿಟ್ಟಿನಲ್ಲಿ ಗೀತಾ ರಾಮು ಚವ್ಹಾಣ(32) ತನ್ನ ಮೂರು ಮಕ್ಕಳಾದ ಸೃಷ್ಠಿ(6), ಸಮರ್ಥ(4) ಮತ್ತು ಕಿಶನ(3) ಅವರನ್ನು ನಸುಕಿನ ಜಾವ ಸುಮಾರು 2 ಗಂಟೆಯ ಸುಮಾರಿಗೆ ಮನೆಯ ಮುಂದಿನ ಸಂಪಿನಲ್ಲಿ ಮಕ್ಕಳನ್ನು ಹಾಕಿದ್ದಾಗಿ ತಿಳಿದುಬಂದಿದೆ.

ರಾತ್ರಿ ಬೆಡ್ ರೂಮಿನಲ್ಲಿದ್ದ ಪತಿ ರಾಮು ಚವ್ಹಾಣ ಎಚ್ಚರವಾಗಿ ನೋಡಿದಾಗ ಪಕ್ಕದಲ್ಲಿ ಪತ್ನಿ ಇಲ್ಲದಿರುವುದು ಗೊತ್ತಾಗಿದೆ. ಆತ ಬೆಡ್ ರೂಮಿನ ಬಾಗಿಲು ತೆರೆಯಲು ಹೋದಾಗ ಅದನ್ನು ಹೊರಗಡೆಯಿಂದ ಲಾಕ್ ಆಗಿರುವುದು ತಿಳಿದಿದೆ. ಆಗ ಗಾಬರಿಯಾದ ಪತಿ ಚೀರಾಡುತ್ತಿರುವುದನ್ನು ಕೇಳಿ ಅಕ್ಕಪಕ್ಕದ ಮನೆಯಲ್ಲಿದ್ದ ಸಹೋದರರು ಓಡಿ ಬಂದು ಬಾಗಿಲು ತೆರೆದಿದ್ದಾರೆ. ಬಳಿಕ ವಿಷಯ ತಿಳಿದು ಎಲ್ಲರೂ ಗೀತಾ ಮತ್ತು ಮಕ್ಕಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಯಾವಾಗಲೂ ಬೀಗ ಹಾಕಲಾಗಿರುತ್ತಿದ್ದ ನೀರಿನ ಹೌದಿನ ಬೀಗ ತೆಗೆದಿರುವುದನ್ನು ಕಂಡು ಒಳಗೆ ಇಣುಕಿ ನೋಡಿದಾಗ ಅದರಲ್ಲಿ ಗೀತಾ ಚವ್ಹಾಣ, ಮಕ್ಕಳಾದ ಸೃಷ್ಡಿ, ಸಮರ್ಥ ಹಾಗೂ ಕಿಶನ ಶವ ಪತ್ತೆಯಾಗಿವೆ. ಈ ಮಾಹಿತಿ ತಿಳಿದ ವಿಜಯಪುರ ಗ್ರಾಮೀಣ ಡಿವೈಎಸ್ಪಿ ಗಿರಿಮಲ್ಲ ಎಚ್. ತಳಕಟ್ಟಿ, ವಿಜಯಪುರ ಗ್ರಾಮೀಣ ಸಿಪಿಐ ಆನಂದರಾವ, ಪಿ ಎಸ್ ಐ ಶ್ರೀಕಾಂತ ಕಾಂಬಳೆ ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಲ್ಲದೇ, ರಾಮು ಚವ್ಹಾಣ ಕುಟುಂಬದವರನ್ನು ವಿಚಾರಣೆ ನಡೆಸಿದ್ದಾರೆ.


2016ರಲ್ಲಿ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಕೋರವಾರ ಗ್ರಾಮದ ಗೀತಾಳನ್ನು ತಿಕೋಟಾ ತಾಲೂಕಿನ ವಿಠಲವಾಡಿಯ ಮಾಧವ ನಗರದ ರಾಮು ಚವ್ಹಾಣ ಜೊತೆಗೆ ಮದುವೆ ಮಾಡಿಕೊಡಲಾಗಿತ್ತು. ಇವರಿಗೆ ಮೂರು ಜನ ಮಕ್ಕಳಾಗಿದ್ದರು. ರಾಮು ಚವ್ಹಾಣ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ. ಪತ್ನಿ ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದ. ರಾಮು ತಂದೆ, ತಾಯಿ ಹಾಗೂ ಇತರ ಸಹೋದರರ ಅಲ್ಲೇ ಪಕ್ಕದ ಮತ್ತೊಂದು ಮನೆಯಲ್ಲಿ ನೆಲೆಸಿದ್ದರು. ಒಂದೆರಡು ವರ್ಷಗಳಿಂದ ಆಗಾಗ ರಾಮು ಚವ್ಹಾಣ ಮತ್ತು ಗೀತಾ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಈ ಕುರಿತು ಗುರು ಹಿರಿಯರ ಸಮ್ಮುಖದಲ್ಲಿ ನ್ಯಾಯ ಪಂಚಾಯತಿಯೂ ಆಗಿತ್ತಂತೆ. ಇದೆಲ್ಲದರ ನಡುವೆ ಗೀತಾ ರಾಮು ಚವ್ಹಾಣ ಮಾನಸಿಕವಾಗಿ ಸಮತೋಲನ ಕಳೆದುಕೊಂಡು ಖಿನ್ನಳಾಗಿದ್ದಳ ಎಂದು ರಾಮುವಿನ ಹಿರಿಯ ಅಕ್ಕ ಹಾಗೂ ಕುಟುಂಬದವರು ಹೇಳಿದ್ದಾರೆ. ಮಗ ಮತ್ತು ಸೊಸೆ ಚೆನ್ನಾಗಿಯೇ ಸಂಸಾರ ನಡೆಸುತ್ತಿದ್ದರು. ಆದರೆ, ತಮ್ಮ ಸೊಸೆ ಯಾಕೆ ಹೀಗೆ ಮಾಡಿಕೊಂಡಿದ್ದಾಳೆ ಎಂದು ಗೊತ್ತಾಗುತ್ತಿಲ್ಲ ಎಂದು ರಾಮುವಿನ ತಾಯಿ ಕಣ್ಣೀರು ಸುರಿಸುತ್ತಿದ್ದಾರೆ.


ಇದನ್ನು ಒಪ್ಪದ ಗೀತಾ ಚವ್ಹಾಣ ತವರು ಮನೆಯವರು, ಗೀತಾಳ ಆತ್ಮಹತ್ಯೆಗೆ ರಾಮು ಮತ್ತು ಆತನ ಕುಟುಂಬದವರೇ ಕಾರಣ ಎಂದು ಆರೋಪಿಸಿದ್ದಾರೆ. ಗೀತಾ ಹಾಗೂ ರಾಮು ಸಂಸಾರ ಸರಿಯಿರಲಿಲ್ಲ. ಇಬ್ಬರೂ ಜಗಳವಾಡುತ್ತಿದ್ದರು. ರಾಮು ತನ್ನ ಅತ್ತಿಗೆ ಜೊತೆಗೆ ಸಹಮತದ ಸಂಬಂಧ ಹೊಂದಿದ್ದ. ಇದು ಇಬ್ಬರ ಮಧ್ಯೆ ಜಗಳಕ್ಕೆ ಕಾರಣವಾಗಿತ್ತು. ಹಲವಾರು ಸಲ ತಾವೂ ಕೂಡ ಸಮುದಾಯದ ಹಿರಿಯರನ್ನು ಸೇರಿಸಿ ನ್ಯಾಯ ಪಂಚಾಯಿತಿ ಮಾಡಿಸಿದ್ದೆವು.

ಪತ್ನಿಯೊಂದಿಗೆ ಚೆನ್ನಾಗಿರುವುದಾಗಿ ರಾಮು ಚವ್ಹಾಣ ಹೇಳಿದ್ದ. ಈಗ ರಾಮು, ಆತನ ತಂದೆ, ತಾಯಿ, ಅತ್ತಿಗೆ ಹಾಗೂ ಅತ್ತಿಗೆಯ ಮಕ್ಕಳು ಸೇರಿ ಗೀತಾ ಮತ್ತು ಆಕೆಯ ಮೂರು ಜನರನ್ನು ಕೊಲೆ ಮಾಡಿ ನೀರಿನ ಹೌದಿನಲ್ಲಿ ಬೀಸಾಡಿದ್ದಾರೆ. ಈಗ ನೀರಿನ ಸಂಪ್ ನಲ್ಲಿ ಮಕ್ಕಳನ್ನು ಹಾಕಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಘಟನೆಗೆ ಗೀತಾಳ ಗಂಡನ ಮನೆಯವರೇ ಕಾರಣ ಎಂದು ಅವರು ಆರೋಪಿಸಿದ್ದಾರೆ. ಮಾಧವ ನಗರ ನಿವಾಸಿಗಳು ಹೇಳುವಂತೆ ರಾಮು ಚವ್ಹಾಣ ಒಳ್ಳೆಯ ವ್ಯಕ್ತಿ. ಎಲ್ಲರೊಂದಿಗೂ ಚೆನ್ನಾಗಿಯೇ ಇರುತ್ತಿದ್ದ. ಆತ ಇಂಥ ಕೃತ್ಯ ಎಸಗಲು ಸಾಧ್ಯವಿಲ್ಲ. ಆತನ ಪತ್ನಿ ಗೀತಾ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಳು. ಅದೇ ಕಾರಣದಿಂದ ಹೀಗೆ ಮಾಡಿದ್ದಾಳೆ ಎಂದು ಹೇಳಿದ್ದಾರೆ.


ಈ ಘಟನೆಗೆ ರಾಮು ಚವ್ಹಾಣ ಕುಟುಂಬದವರು ಒಂದು ವಾದ ಮಾಡುತ್ತಿದ್ದರೆ, ಗೀತಾ ರಾಮು ಚವ್ಹಾಣ ಕುಟುಂಬದವರು ಬೇರೆಯದೇ ವಾದ ಮಾಡುತ್ತಿದ್ದಾರೆ. ಮಾಧವ ನಗರ ಜನರ ಅನಸಿಕೆಯೂ ರಾಮು ಚವ್ಹಾಣ ಕುಟುಂಬದವರ ಪರವಾಗಿಯೇ ಇದೆ. ಪೊಲೀಸರು ಈ ಕುರಿತು ಸಂಪೂರ್ಣ ತನಿಖೆ ನಡೆಸಿದ ನಂತರ ಘಟನೆಗೆ ನಿಖರ ಕಾರಣ ಸ್ಪಷ್ಟವಾಗಲಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ವಿಜಯಪುರ ಜಿಲ್ಲೆಯ ತಿಕೋಟಾ ಠಾಣೆಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

error: Content is protected !!