ಕೂಗು ನಿಮ್ಮದು ಧ್ವನಿ ನಮ್ಮದು

ಅಕ್ಕನಿಗೆ ಕಪಾಳಮೋಕ್ಷ: ಚಾಕು ಇರಿದು ತಮ್ಮನಿಂದ ಸ್ನೇಹಿತನ ಭೀಕರ ಕೊಲೆ..!

ಬೆಂಗಳೂರು: ಮನೆ ಮುಂದೆ ಮದ್ಯ ಸೇವಿಸುವುದನ್ನು ಆಕ್ಷೇಪಿಸಿದ ತನ್ನ ಅಕ್ಕನ ಕಪಾಳಕ್ಕೆ ಹೊಡೆದಿದ್ದಕ್ಕೆ ಕೋಪಗೊಂಡು ಸ್ನೇಹಿತನಿಗೆ ಚಾಕುವಿನಿಂದ ಇರಿದು ಮೃತನ ಗೆಳೆಯರೇ ಕೊಂದಿರುವ ಘಟನೆ ಪುಲಿಕೇಶಿನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಿಎಸ್‌ಕೆ ಗಾರ್ಡನ್‌ ನಿವಾಸಿ ಪ್ರಭು (24) ಕೊಲೆಯಾದ ದುರ್ದೈವಿ. ಈ ಘಟನೆ ಸಂಬಂಧ ವಿಜಯ್‌ ಪೌಲ್‌ ಹಾಗೂ ಚೌಕಿ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಒಂದೇ ಏರಿಯಾದಲ್ಲಿ ನೆಲೆಸಿದ್ದರಿಂದ ಈ ಮೂವರು ಬಾಲ್ಯ ಸ್ನೇಹಿತರಾಗಿದ್ದು, ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ಚೌಕಿ ಮನೆ ಮುಂದೆ ಕುಳಿತು ಸೋಮವಾರ ರಾತ್ರಿ ಪ್ರಭು ಮದ್ಯ ಸೇವಿಸುತ್ತಿದ್ದ. ಈ ವರ್ತನೆಗೆ ಚೌಕಿ ಸೋದರಿ ಆಕ್ಷೇಪಿಸಿದ್ದಾರೆ. ಇದರಿಂದ ಕೆರಳಿದ ಆತ, ಆಕೆಯ ಕಪಾಳಕ್ಕೆ ಹೊಡೆದಿದ್ದಾನೆ. ಆಗ ಸ್ಥಳೀಯರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಇದಾದ ನಂತರ ಮತ್ತೆ ಪಿಎಸ್‌ಕೆ ಗಾರ್ಡನ್‌ ಪುಟ್ಬಾಲ್‌ ಕ್ರೀಡಾಂಗಣ ಬಳಿ ಈ ಮೂವರು ಸ್ನೇಹಿತರು ಮದ್ಯ ಸೇವನೆಗೆ ತೆರಳಿದ್ದಾರೆ. ಆ ವೇಳೆ ಮದ್ಯದ ಅಮಲಿನಲ್ಲಿ ತನ್ನ ಅಕ್ಕನ ಮೇಲೆ ಹಲ್ಲೆ ನಡೆಸಿದ್ದಕ್ಕೆ ಪ್ರಭುಗೆ ಚೌಕಿ ಬೈದಿದ್ದಾನೆ.

ಈ ಹಂತದಲ್ಲಿ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಆಗ ತನ್ನ ಜೇಬಿನಲ್ಲಿದ್ದ ಚಾಕು ತೆಗೆದು ವಿಜಯ್‌ ಮೇಲೆ ಪ್ರಭು ಹಲ್ಲೆ ನಡೆಸಿದ್ದಾನೆ. ಆಗ ಆತನಿಗೆ ಕೈಗೆ ಗಾಯವಾಗಿದೆ. ಈ ಹಲ್ಲೆಯಿಂದ ಕೆರಳಿದ ಆರೋಪಿಗಳು, ಪ್ರಭು ಕೈಯಿಂದ ಚಾಕು ಕಸಿದುಕೊಂಡು ಆತನಿಗೆ ಇರಿದು ಕೊಂದಿದ್ದಾರೆ. ಘಟನೆ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ

error: Content is protected !!