ಕೂಗು ನಿಮ್ಮದು ಧ್ವನಿ ನಮ್ಮದು

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಲಸಿಕಾ ಹಬ್ಬ: ಪ್ರತಿ ಗ್ರಾಮದಲ್ಲಿ ಅಭಿಯಾನ ಮಾಡಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರಾದ್ಯಂತ ಕೋವಿಡ್ -19 ವ್ಯಾಕ್ಸಿನೇಶನ್ ಫೆಸ್ಟಿವಲ್ – ಲಸಿಕಾ ಅಭಿಯಾನ ನಡೆಯುತ್ತಿದೆ. ಕ್ಷೇತ್ರದ ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕೆನ್ನುವ ಗುರಿ ಹಾಕಿಕೊಂಡಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಇದಕ್ಕಾಗಿ ಒಂದು ತಂಡವನ್ನೇ ರಚಿಸಿ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರತಿ ಗ್ರಾಮದಲ್ಲಿ ಲಸಿಕೆ ಹಾಕಲು ವ್ಯವಸ್ಥೆ ಮಾಡಿದ್ದಲ್ಲದೆ, ಅಭಿಯಾನ ಯಶಸ್ವಿಯಾಗಿ, ಯಾವುದೇ ಅಡಚಣೆಯಿಲ್ಲದೆ ನಡೆಸಬೇಕೆನ್ನುವ ಉದ್ದೇಶದಿಂದ ತಂಡಗಳನ್ನು ರಚಿಸಿದ್ದಾರೆ. ಇದಕ್ಕೆ ತಮ್ಮ ಆಪ್ತ ಸಹಾಯಕರನ್ನೇ ಉಸ್ತುವಾರಿಗಳನ್ನಾಗಿ ನೇಮಕ ಮಾಡಿದ್ದಾರೆ.

ಇನ್ನು ಅನೇಕ ಕಡೆಗಳಿಗೆ ಲಕ್ಷ್ಮಿ ಹೆಬ್ಬಾಳಕರ್ ಸ್ವತಃ ತೆರಳಿ ಅಭಿಯಾನಕ್ಕೆ ಚಾಲನೆ ನೀಡಿದರೆ ಇನ್ನು ಅನೇಕ ಕಡೆಗಳಲ್ಲಿ ಸ್ಥಳೀಯ‌ ಜನಪ್ರತಿನಿಧಿಗಳಿಂದ ಚಾಲನೆ ಕೊಡಿಸುತ್ತಿದ್ದಾರೆ. ಲಕ್ಷ್ಮಿ ಹೆಬ್ಬಾಳಕರ್ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಮತ್ತು ಪುತ್ರ ಮೃಣಾಲ್ ಹೆಬ್ಬಾಳಕರ್ ಕೂಡ ವಿವಿಧ ಭಾಗಗಳಿಗೆ ತೆರಳಿ ಅಭಿಯಾನ ಯಾವುದೇ ತೊಂದರೆ ಇಲ್ಲದೆ ನಡೆಯುತ್ತಿರುವುದನ್ನು ಖಚಿತಪಡಿಸಿ ಕೊಳ್ಳುತ್ತಿದ್ದಾರೆ. ಇಡೀ ಗ್ರಾಮೀಣ ಕ್ಷೇತ್ರ ಹಬ್ಬದ ರೀತಿಯಲ್ಲಿ ಲಸಿಕಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದೆ. ಜನರು ಉತ್ಸಾಹದಿಂದ ಪಾಲ್ಗೊಳ್ಳುವುದಲ್ಲದೆ ಬೇರೆಯವರನ್ನೂ ಕರೆತಂದು ಲಸಿಕೆ ಕೊಡಿಸುತ್ತಿದ್ದಾರೆ. ಬೇರೆಲ್ಲೂ ಕಾಣದ ರೀತಿಯಲ್ಲಿ ದೊಡ್ಡ ಮಟ್ಟದಲ್ಲಿ ಇಲ್ಲಿ ಅಭಿಯಾನ ನಡೆಯುತ್ತಿದೆ. ಬೇರೆ ಕ್ಷೇತ್ರಗಳಿಗೆ ಇದೊಂದು ಮಾದರಿ ಕಾರ್ಯಕ್ರಮವಾಗಿ ಪರಿಣಮಿಸಿದೆ.

error: Content is protected !!