ಬೆಳಗಾವಿ: ಸದನದಲ್ಲಿ ಇಂದು ಮತಾಂತರ ಕಾಯ್ದೆ ಬಿಲ್ ಮಂಡನೆ ಮಾಡ್ತೀವಿ ಎಂದು ಬೆಳಗಾವಿಯಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಮತಾಂತರ ಕಾಯ್ದೆ ಜಾರಿ ಅಲ್ಲ, ಮಂಡನೆ ಮಾಡ್ತೀವಿ ಎಂದಿದ್ದಾರೆ.
ರಾಯಣ್ಣ, ಶಿವಾಜಿ ಪುತ್ಥಳಿಗೆ ಅವಮಾನ ಮಾಡಿದ್ದು ಮಾನಸಿಕ ರೋಗಿಗಳ ಕೆಲಸ. ಇಂತಹ ಮಹಾನ ನಾಯಕರನ್ನ ಪೂಜಿಸಬೇಕು, ಆರಾಧಿಸಬೇಕು. ಬೆಳಗಾವಿಯಲ್ಲಿ ಕನ್ನಡಿಗರು ಮರಾಠಿಗರು ಅನ್ಯೋನ್ಯವಾಗಿದ್ದಾರೆ. ಕನ್ನಡ- ಮರಾಠಿಗರ ಮಧ್ಯೆ ಹುಳಿ ಹಿಂಡುವ ಕೆಲಸ ಮಾಡಿದವರನ್ನ ಬಿಡೋದಿಲ್ಲ. ರಾಯಣ್ಣನನ್ನ ಬ್ರಿಟಿಷರಿಗೆ ಹಿಡಿದುಕೊಟ್ಟಂತ ಕುಲದವರು ಈ ಕೃತ್ಯ ಮಾಡಿದ್ದಾರೆ. ಇಂತವರನ್ನ ನಿಗ್ರಹ ಮಾಡಿ, ಮತ್ತೆ ತಲೆ ಎತ್ತದಂತೆ ಮಾಡ್ತೀವಿ ಎಂದು ಗುಡುಗಿದ್ದಾರೆ.
ಬೆಳಗಾವಿ ಪ್ರಕರಣದಲ್ಲಿ 38 ಆರೋಪಿಗಳ ಬಂಧನ, ಖಾನಾಪುರ ಹಲಸಿಯಲ್ಲಿ ಕನ್ನಡ ಧ್ವಜ ಸುಟ್ಟು, ಬಸವಣ್ಣನವರ ಪೋಟೊ ವಿರೂಪಗೊಳಿಸಿರುವ ಮೂವರ ಬಂಧನ, ಜೊತೆಗೆ ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿದ 7 ಜನರ ಬಂಧನ ಮಾಡಿದ್ದೇವೆ. ಇವರ ಮೇಲೆ ಗೂಂಡಾ ಕಾಯ್ದೆ ಹಾಕಲು ಕ್ರಮ ತೆಗೆದುಕೊಳ್ಳುತ್ತೇವೆ. ಇವರ ಹಿಂದೆ ಇರುವ ಸಂಘ,ಸಂಸ್ಥೆ ವ್ಯಕ್ತಿಗಳ ತನಿಖೆ ಮಾಡ್ತೀವಿ.
ಇದರಲ್ಲಿ ಕೆಲವರ ಮುಖವಾಡ ಕಳಚಬೇಕು. ಯಾರ ಯಾರ ಮೇಲೆ ಗೂಂಡಾ ಕಾಯ್ದೆಯಂತ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸದನದಲ್ಲಿ ಚರ್ಚೆಯಾಗಿದೆ. ಇದು ಹುಡುಗಾಟ ಅಲ್ಲ, ಇಡೀ ನಾಡಿನ ಜನತೆಗೆ ಬೆಂಕಿ ಹಚ್ಚುವ ಕೆಲಸ. ಸ್ವಲ್ಪ ಹೆಚ್ಚು ಕಮ್ಮಿ ಆದ್ರು ಜನರ ಪ್ರಾಣ, ಆಸ್ತಿ ಪಾಸ್ತಿ ಹಾನಿಯಾಗುತ್ತವೆ. ಹೀಗಾಗಿ ಇಂಥವರ ಮೇಲೆ ಏನೇ ಕ್ರಮ ಕೈಗೊಂಡ್ರು ಕಮ್ಮಿಯೇ ಎಂದ ಸಚಿವರು ಎಂ.ಇ.ಎಸ್ ಬ್ಯಾನ್ ಬಗ್ಗೆ ಚರ್ಚೆ ಮಾಡ್ತೀವಿ. ಈ ಪ್ರಕರಣಗಳಲ್ಲಿ ಭಾಗಿಯಾದವರ ಮೇಲೆ ಖಂಡಿತವಾಗಿ ದೇಶದ್ರೋಹ ಕೇಸ್ ಹಾಕ್ತೀವಿ ಎಂದಿದ್ದಾರೆ.