ಕೋಲಾರ: ವೇಶ್ಯೆಯರು ಎಂಬ ಪದ ನಮ್ಮ 17 ಜನರಿಗೆ ಅನ್ವಯಿಸುವುದಿಲ್ಲ. ನಾವು ರಾಜೀನಾಮೆ ನೀಡಿ ಮತ್ತೆ ಚುನಾವಣೆಯಲ್ಲಿ ಗೆದ್ದಿದ್ದೇವೆ. ಜನ ನಮ್ಮನ್ನು ಆಯ್ಕೆ ಮಾಡಿದ್ದು, ಇಂತಹ ಪದ ಬಳಸುವುದು ಅಸಮರ್ಥನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 17 ಜನರನ್ನು ವೇಶ್ಯೆಯರು ಎಂದು ಕರೆದಿರುವ ಬಿ.ಕೆ.ಹರಿಪ್ರಸಾದ್‌ರಿಗೆ ರಾಜಕೀಯದ ಚಿತ್ರಣ ಸರಿಯಾಗಿ ಗೊತ್ತಿಲ್ಲ. ಮಾಹಿತಿ ಇದ್ದಿದ್ದರೆ ಈ ಪದ ಬಳಕೆ ಮಾಡುತ್ತಿರಲಿಲ್ಲ ಕಾಂಗ್ರೆಸ್ಸಿಗರಿಗೂ ಸ್ಯಾಂಟ್ರೊ ರವಿಗೂ ಯಾವುದೇ ವ್ಯತ್ಯಾಸವೇ ಇಲ್ಲ ಎಂದು ಟೀಕಿಸಿದರು.
ಎಚ್ಡಿಕೆ ಮುಂದೆ ನಿಲ್ಲಿಸಿದ್ದರು: ಅಂದು ದೆಹಲಿಯಿಂದ ಬಂದ ಗುಲಾಂ ನಬಿ ಆಜಾದ್ ನೇತೃತ್ವದಲ್ಲಿ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ ಹಾಗೂ ಡಿ.ಕೆ.ಶಿವಕುಮಾರ್, ಕಾಂಗ್ರೆಸ್‌ನಿಂದ ಗೆದ್ದಿದ್ದ ನಮ್ಮನ್ನು ಕರೆದುಕೊಂಡು ಹೋಗಿ ಕುಮಾರಸ್ವಾಮಿ ಎದುರು ನಿಲ್ಲಿಸಿದಾಗ ನಾವು ಏನಾಗಿದ್ದೆವು. ಸಮ್ಮಿಶ್ರ ಸರ್ಕಾರ ರಚಿಸಿ ಎಂದು ಶಾಸಕರು ಕೇಳಿದ್ದೆವಾ ನಾವೆಲ್ಲಾ ವಿರೋಧ ಪಕ್ಷದಲ್ಲಿ ಕೂರಲು ಸಿದ್ಧವಾಗಿದ್ದೆವು.
ನಮ್ಮ ಅಭಿಪ್ರಾಯ ಆಲಿಸಿದೆ ಅವರ ಮುಂದೆ ನಮ್ಮನ್ನು ಬಿಟ್ಟಇವರನ್ನು ಏನೆಂದು ಕರೆಯಬೇಕು ಎಂದು ಪ್ರಶ್ನಿಸಿದರು.
ಹರಿಪ್ರಸಾದ್‌ರಿಗೆ ಕರ್ನಾಟಕದ ರಾಜಕಾರಣ ಸಂಪೂರ್ಣವಾಗಿ ಗೊತ್ತಿಲ್ಲ. ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಜೊತೆ ಕೆಲಸ ಮಾಡುತ್ತಾ ದೆಹಲಿಯಲ್ಲೇ ಹೆಚ್ಚು ಸಮಯ ಕಳೆದವರು. ಸುಮಾರು 40 ವರ್ಷ ರಾಷ್ಟ್ರ ರಾಜಕಾರಣದಲ್ಲಿ ಇದ್ದವರು. ಈಗ ತವರೂರು ಕರ್ನಾಟಕಕ್ಕೆ ಬಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕರಾಗಿದ್ದಾರೆ ಎಂದರು.
ವರ್ತೂರು ಒಳ್ಳೆಯ ವ್ಯಕ್ತಿ: ವರ್ತೂರು ಪ್ರಕಾಶ್‌ರನ್ನು ಸೆಳೆಯಲು ಸಿದ್ದರಾಮಯ್ಯ ಬೆಂಬಲಿಗರು ಮುಂದಾಗಿದ್ದಾರೆ ಎಂಬ ಪ್ರಶ್ನೆಗೆ ವರ್ತೂರು ಪ್ರಕಾಶ್‌ರನ್ನು ನಮ್ಮ ಪಕ್ಷ ಗೌರವಯುತವಾಗಿ ಬರಮಾಡಿಕೊಂಡಿದೆ. ನಮ್ಮ ಪಕ್ಷದ ಹಿರಿಯ ಮುಖಂಡರೂ ಆಗಿರುವ ಅವರನ್ನು ಸೆಳೆಯಲು ಸಾಧ್ಯವೇ ಇಲ್ಲ. ವರ್ತೂರು ಪ್ರಕಾಶ್ ಒಳ್ಳೆಯವರು ಎಂದಿರುವ ಜೆಡಿಎಸ್ ರಾಜ್ಯ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ರವರಿಗೆ ಅಭಿನಂದನೆ. ವರ್ತೂರು ಪ್ರಕಾಶ್ ಒಳ್ಳೆಯವರು ಎಂಬುದು ನಮಗೂ ಗೊತ್ತಿದೆ.
ಈ ಬಗ್ಗೆ ನಮಗೆ ಅವರ ಪ್ರಮಾಣಪತ್ರ ಬೇಡ. ಅವರ ಮಾತನ್ನು ಗಂಭೀರವಾಗಿ ಪರಿಗಣಿಸುವುದೂ ಬೇಡ ಎಂದರು. ಕೋಲಾರದಲ್ಲಿ ಸಿದ್ದರಾಮಯ್ಯರನ್ನು ಎದುರಿಸಲು ಯೋಜನೆ ರೂಪಿಸಿದ್ದೀರಾ ಎಂಬ ಪ್ರಶ್ನೆಗೆ ಸಿದ್ದರಾಮಯ್ಯ ಎದುರಿಸಲು ನಮಗೆ ಯಾವುದೇ ಯೋಜನೆ ಬೇಡ. ಚಾಮುಂಡೇಶ್ವರಿಯಲ್ಲಿ ಅವರನ್ನು ಸೋಲಿಸಲು ಏನಾದರೂ ವಿಶೇಷ ಯೋಜನೆ ರೂಪಿಸಿದ್ದೆವಾ.
500 ಮತ ವ್ಯತ್ಯಾಸವಾಗಿದ್ದರೆ ಬಾದಾಮಿಯಲ್ಲೂ ಅವರು ಸೋಲುತ್ತಿದ್ದರು. ಕೋಲಾರದಲ್ಲಿ ಬಿಜೆಪಿ ಬಲಿಷ್ಠವಾಗಿದೆ. ಲೋಕಸಭೆ ಸದಸ್ಯರು ಹೆಚ್ಚು ಮತಗಳಿಂದ ಗೆಲ್ಲಲಿಲ್ಲವೇ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು. ಎಚ್ಡಿಕೆ ಚನ್ನಾಗಿ ಭವಿಷ್ಯ ಹೇಳ್ತಾರೆ: ಕುಮಾರಸ್ವಾಮಿ ಕೆಲವೊಮ್ಮೆ ಭವಿಷ್ಯ ಚೆನ್ನಾಗಿ ನುಡಿಯುತ್ತಾರೆ. ಅವು ನಿಜವೂ ಆಗಿದೆ. ಮುಖ್ಯಮಂತ್ರಿಯಾಗಿ ಹೆಚ್ಚು ದಿನ ಇರಲ್ಲ ಎಂಬ ಮಾತನಾಡಿದ್ದರು.
ಅದು ನಿಜವೂ ಆಯಿತು. ಹೀಗಾಗಿ, ಸಿದ್ದರಾಮಯ್ಯ ಕುರಿತು ಹರಕೆ ಕುರಿ ಎಂಬುದಾಗಿ ಅವರು ಹೇಳಿರುವುದು ಸರಿಯಾಗಿಯೇ ಇದೆ ಎಂದು ವ್ಯಂಗ್ಯವಾಡಿದರು. ಗುತ್ತಿಗೆದಾರರ ಸಂಘದವರು ಕಾಂಗ್ರೆಸ್ ಬೆಂಬಲಿಗರಂತೆ ನಡೆದುಕೊಳ್ಳುತ್ತಿದ್ದಾರೆ. ಅವರ ಕಚೇರಿಯ ಮೇಲಿರುವ ನಾಮಫಲಕವನ್ನು ಕಾಂಗ್ರೆಸ್ ಕಚೇರಿ ಎಂದು ಬದಲಾಯಿಸಿಕೊಳ್ಳಲಿ. ಅವರು ಯಾವತ್ತಾದರೂ ಗುತ್ತಿಗೆದಾರರ ಸಮಸ್ಯೆ ಆಲಿಸಿದ್ದಾರೆಯೇ ಗುತ್ತಿಗೆದಾರರಿಗೆ ಒಳ್ಳೆಯದು ಮಾಡಿದ್ದಾರೆಯೇ ಎಂದರು.