-ದೀಪಕ್ ಶಿಂಧೇ
ಈ ಕೋಪ ತಾಪಗಳಿಗೆಲ್ಲ
ಬೆಂಕಿ ಇಟ್ಟು ಕಾಯಿಸಿಕೊಳ್ಳೋಣ ಒಮ್ಮೆ ಹಳೆಯದನ್ನೆಲ್ಲ ಮರೆತುಬಿಡು ಒಲವನ್ನಂತೂ ಹಂಚಲಾಗಿಲ್ಲ ನಮಗೆ
ನಿಲ್ಲಿಸಿಬಿಡೋಣ ಇನ್ನಾದರು ದ್ವೇಷದ ಕಿಡಿ ಹೊತ್ವತಿಸುವದನ್ನು..
ಸಾಧ್ಯವಾದರೆ ಎದುರಾಗಿ ಬಂದು ಬಿಡು.
ಕ್ಷಣ ಕ್ಷಣವೂ ಬದಲಾಗುವ ಈ ಲೋಕದಲ್ಲಿ
ರಾಜಯೋಗ ಯಾರಿಗಿದೆಯೋ ಗೊತ್ತಿಲ್ಲ.
ಕೊಡು-ಕೊಳ್ಳುವದು ಏನೂ ಇಲ್ಲ ನಮ್ಮಿಬ್ಬರ ನಡುವೆ ರಾಜಿಯಾಗಬೇಕಿದೆ ಅಷ್ಟೇ ನನಗೆ.
ಸಾಧ್ಯವಾದರೆ ಎದುರಾಗಿ ಬಂದುಬಿಡು.
ಈ ಬದುಕ ಸಂತೆಯಲ್ಲಿ
ಸುಖ ದುಃಖಗಳು ಯಾರಿಗೆ ಬಂದಿಲ್ಲ ಹೇಳು??
ಬೆಂಕಿ ಬಿದ್ದ ಹೃದಯಗಳೂ ಬೆಳಗುತ್ತವೆ ಒಮ್ಮೊಮ್ಮೆ! ಶಿಕ್ಷೆ ಆಗಲು ತಪ್ಪು ನಮ್ಮದೇ ಇರಬೇಕು ಎಂದೇನೂ ಇಲ್ಲ ಸಾಧ್ಯವಾದರೆ ಒಮ್ಮೆ ಎದುರಾಗಿ ಬಂದು ಬಿಡು.
ತುಂಬಿದ ಜಾತ್ರೆಗಳಲ್ಲೂ ಕಾಡುತ್ತದೆ ಒಂಟಿತನ.
ಮನಸು ದಂಗೆ ಏಳದ ದಿನಗಳೇ ಇಲ್ಲ ಬಿಡು. ಹೃದಯ ಗಾಯಕ್ಕೆ ಮುಲಾಮಿಲ್ಲದೆ
ಎದುರಾದವರನ್ನೆಲ್ಲ ನನ್ನವರೆನ್ನುತ್ತೇನೆ ನಾನು
ಸಾಧ್ಯವಾದರೆ ನೀನೂ ಒಮ್ಮೆ ಎದುರಾಗಿ ಬಂದು ಬಿಡು.
ಸಾಕಿನ್ನು, ಕೇಡು ಮರೆತು ಒಳಿತನ್ನಷ್ಟೇ ಸ್ವೀಕರಿಸೋಣ. ನಾನು ಸೋತಿದ್ದೇನೆ ಎಷ್ಟೋ ಸಲ ನೀನು ಒಮ್ಮೆಯಾದರೂ ಸೋತುಬಿಡು.
ಸೋಲಲೇ ಬೇಕು ಅಂತೆನೂ ಇಲ್ಲ ಸಾಧ್ಯವಾದರೆ ಒಮ್ಮೆ ಎದುರಾಗಿ ಬಂದುಬಿಡು.
ಇದ್ದಾಗ ಕಳೆದುಕೊಂಡು
ಇಲ್ಲದಾಗ ಪರಿತಪಿಸುತ್ತದೆ ಲೋಕ.
ಒಬ್ಬರ ಮುಖ ಇನ್ನೊಬ್ಬರಿಗೆ ಕಾಣುವದಕ್ಕೆಂದೇ ಕನ್ನಡಿ ಹಿಡಿದಿದ್ದೇವೆ ನಾವು. ಕಾಮ ಕ್ರೋಧ ಮದ ಮತ್ಸರಗಳ ಚಮಕಾಯಿಸಿದ್ದು ಸಾಕಿನ್ನು ಸಾಧ್ಯವಾದರೆ ಒಮ್ಮೆ ಎದುರಾಗಿ ಬಂದುಬಿಡು.
ಈ ಅಹಂಕಾರದ ಕನ್ನಡಿಯ ನೀನಾದರೂ ಒಡೆದುಬಿಡು. ಗಾಜಿನ ಮನೆಯಲ್ಲಿ ಕುಳಿತು
ಎದುರಾಳಿಯಂತೆ ಕಲ್ಲೆಸೆಯುತ್ತಿದ್ದೇವೆ ಇಬ್ಬರೂ ನಾವು ಒಂದಾಗಬೇಕೆಂದೇನೂ ಇಲ್ಲ. ಸಾಧ್ಯವಾದರೆ ಎದುರಾಗಿ ಬಂದುಬಿಡು.
ಶ್ರೀಗಂಧವಾಗಲಿ ಬದುಕು
ಒಳಿತಿಗಾಗಿ ತೇಯ್ದು ಬಿಡೋಣ ಇಬ್ಬರು.
ಶಾಶ್ವತ ಯಾವುದೂ ಅಲ್ಲದಿರುವಾಗ ದ್ವೇಷದ ಕಿಡಿ ಹೊತ್ತಿಸಿಕೊಂಡು ಉರಿದ ದೀಪಗಳಾಗಿದ್ದೆವೆ ನಾವು.
ಕೋಪ ತಾಪಗಳನ್ನೆಲ್ಲ ಸುಟ್ಟು, ಸಿಟ್ಟು ಸೆಡವುಗಳ ಮಣ್ಣು ಕೊಟ್ಟು ಉರಿದರೂ ಪರವಾಗಿಲ್ಲ ನಾವು. ಎದುರುಗೊಂಡಾಗೆಲ್ಲ ಪರಸ್ಪರ ಬೆಳಕಾಗೋಣ ಸಾಧ್ಯವಾದರೆ ಒಮ್ಮೆ ಎದುರಾಗಿ ಬಂದುಬಿಡು.