ಬೆಳಗಾವಿ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬೆಳಗಾವಿ ಸುವರ್ಣಸೌಧದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಭೆ ನಡೆಸುವ ಮೊದಲೇ ರೈತ ಮುಖಂಡ ಒಬ್ಬ ಮುಖ್ಯಮಂತ್ರಿ ಕಾಲಿಗೆ ಬಿದ್ದು, ಬೇಡಿಕೆ ಈಡೇರಿಸುವಂತೆ ಮನವಿ ಮಾಡಿರುವ ಘಟನೆಯು ಬೆಳಗಾವಿಯಲ್ಲಿ ನಡೆಯಿತು.
ಬೆಳಗಾವಿಯ ಸುವರ್ಣಸೌಧದಲ್ಲಿ ಕೋರೊನಾ ಮತ್ತು ಪ್ರವಾಹ ಪೀಡಿತ ಪರಿಹಾರ ಕಾರ್ಯಗಳ ಕುರಿತು ಸಭೆ ನಡೆಸಲು ಸಿಎಂ ಬಸವರಾಜ್ ಬೊಮ್ಮಾಯಿ ಸುವರ್ಣಸೌಧಕ್ಕೆ ಆಗಮಿಸುತ್ತಿದ್ದಂತೆ ರೈತ ಮುಖಂಡರು ಸಿಎಂ ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಿದ್ದಾರೆ. ಸುವರ್ಣಸೌಧಕ್ಕೆ ಕಚೇರಿಗಳ ಸ್ಥಳಾಂತರ, ಶುಗರ್ ಕಮಿಷನರ್ ಕಚೇರಿ ಸ್ಥಳಾಂತರಕ್ಕೆ ಮನವಿ ಮಾಡಿದ ರೈತರು, ಬೆಳಗಾವಿಗೆ ಸಕ್ಕರೆ ಆಯುಕ್ತರ ಕಚೇರಿ ಸ್ಥಾಪಿಸುವಂತೆ ಒತ್ತಾಯಿಸಿ ರೈತ ಮುಖಂಡ ಪ್ರಕಾಶ್ ನಾಯಕ್ ಎಂಬವರು ಮುಖ್ಯಮಂತ್ರಿ ಕಾಲಿಗೆ ಬಿದ್ದು ಸಿಎಂ ಗಮನ ಸೆಳೆದ್ರು.
ಕೆಲ ನಿಮಿಷಗಳ ಕಾಲ ರೈತರ ಜೊತೆಗೆ ಮಾತುಕತೆಯನ್ನು ನಡೆಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ರೈತರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದೆಂದು ಭರವಸೆಯನ್ನು ನೀಡಿದ್ರು. ಮುಖ್ಯಮಂತ್ರಿ ಸುವರ್ಣಸೌಧಕ್ಕೆ ಆಗಮಿಸುತ್ತಿದ್ದಂತೆ ಗೌರವ ವಂದನೆ ಸಲ್ಲಿಸಲು ಪೊಲೀಸ್ ಸಿಬ್ಬಂದಿ ಮುಂದಾಗಿದ್ದಕ್ಕೆ ಸಿಎಂ ಅಸಮಾಧಾನ ವ್ಯಕ್ತಪಡಿಸಿದ್ರು. ಪದೇ ಪದೇ ಗೌರವ ವಂದನೆ ಸಲ್ಲಿಸುವುದು ಬೇಡ. ದಿನಕ್ಕೆ ಒಮ್ಮೆ ಮಾತ್ರ ಸಾಕು ಎಂದು ಮುಖ್ಯಮಂತ್ರಿ ಪೊಲೀಸ್ ಆಯುಕ್ತರ ವಿರುದ್ಧ ಅಸಮಾಧಾನ ಹೊರಹಾಕಿದ್ರು.