ಬೆಂಗಳೂರು: ಕೋವಿಡ್-19 ನಿಂದ ಕುಟುಂಬದ ವಯಸ್ಕ ಮೃತಪಟ್ಟು ಬಿಪಿಎಲ್ ಕಾರ್ಡು ಹೊಂದಿರುವ ಕುಟುಂಬಕ್ಕೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರವನ್ನು ನೀಡುವ ಮಹತ್ವದ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದೆ.
ಈ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಕೊರೋನಾದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರವಾಗಿ ಸರ್ಕಾರ 250ರಿಂದ 300 ಕೋಟಿ ರೂಪಾಯಿ ಪ್ಯಾಕೇಜ್ ನೀಡಲಿದೆ. ದೇಶದಲ್ಲಿಯೇ ಮೊದಲ ಬಾರಿಗೆ ನಮ್ಮ ಸರ್ಕಾರ ಈ ಪರಿಹಾರ ಘೋಷಣೆ ಮಾಡುತ್ತಿದೆ ಎಂದರು.
ಕೋವಿಡ್-19 ಸೋಂಕಿನಿಂದ ಮೃತಪಟ್ಟು ಹಲವಾರು ಕುಟುಂಬಗಳು ಇಂದು ಬೀದಿಪಾಲಾಗಿವೆ. ಹಲವು ಕುಟುಂಬಗಳ ಸ್ಥಿತಿ ಚಿಂತಾಜನಕವಾಗಿದೆ. ಇದನ್ನು ಮನಗಂಡಿರುವ ಸರ್ಕಾರ, ಒಂದು ಕುಟುಂಬದಲ್ಲಿನ ವಯಸ್ಕ ವ್ಯಕ್ತಿ, ದುಡಿಯುವ ಕೈ ಕೋವಿಡ್ ಸೋಂಕಿಗೆ ಮೃತಪಟ್ಟರೆ ಅಂತಹ ಕುಟುಂಬಕ್ಕೆ ಸರ್ಕಾರ ಒಂದು ಲಕ್ಷ ರೂಪಾಯಿ ಆರ್ಥಿಕ ಸಹಾಯ ನೀಡಲಿದೆ. ಇದು ಬಿಪಿಎಲ್ ಕಾರ್ಡು ಹೊಂದಿರುವವರಿಗೆ ಮಾತ್ರ ಅನ್ವಯವಾಗಲಿದೆ, ರಾಜ್ಯದಲ್ಲಿ 25ರಿಂದ 30 ಸಾವಿರ ಇಂತಹ ಕುಟುಂಬಗಳಿವೆ ಎಂದರು.
ದೇಶದಲ್ಲಿಯೇ ಕರ್ನಾಟಕ ಸರ್ಕಾರ ಈ ರೀತಿಯ ಕೋವಿಡ್-19 ಆರ್ಥಿಕ ಪ್ಯಾಕೇಜ್ ನೀಡುತ್ತಿದೆ ಎಂದರೆ ಸರ್ಕಾರದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎಂದರ್ಥ ಎಂದು ಮುಖ್ಯಮಂತ್ರಿ ಹೇಳಿದರು.