ಕೂಗು ನಿಮ್ಮದು ಧ್ವನಿ ನಮ್ಮದು

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಹಿಂದಿನ ಮಹತ್ವ ಬಿಚ್ಚಿಟ್ಟ ಸಿಎಂ

ಬೆಂಗಳೂರು: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ’ಗೆ ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಅಧಿಕೃತವಾಗಿ ಚಾಲನೆ ನೀಡಿದರು. ಶಕ್ತಿ ಯೋಜನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶಕ್ತಿ ಯೋಜನೆಯ ಲೋಗೋ ಹಾಗೂ ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್ ಅನ್ನು ಬಿಡುಗಡೆ ಮಾಡಿ ಬಳಿಕ ಐವರು ಮಹಿಳೆಯರಿಗೆ ಸಾಂಕೇತಿಕವಾಗಿ ಶಕ್ತಿಯೋಜನೆಯ ಸ್ಮಾರ್ಟ್ ಕಾರ್ಡ್ ವಿತರಿಸಿದರು. ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯ ಹಿಂದಿನ ಮರ್ಮವನ್ನು ತಿಳಿಸಿದರು. ಅಲ್ಲದೇ ಇದೇ ವೇಳೆ ಉಚಿತ ಪ್ರಯಾಣ ಮಾಡುವ ಮಹಿಳೆಯರಿಗೆ ಶುಭ ಹಾರೈಸಿದರು.

ಶಕ್ತಿ ಯೋಜನೆಯನ್ನು ಎಲ್ಲರೂ ಸಂತೋಷದಿಂದ ಉದ್ಘಾಟಿಸಿದ್ದೇವೆ. ಮಹಿಳೆಯರು ಶತಮಾನದಿಂದ ಅವಕಾಶದಿಂದ ವಂಚಿತರಾಗಿದ್ದಾರೆ. ಸಾಮಾಜಿಕ, ಆರ್ಥಿಕ ಅಸಮಾನತೆಗೆ ಮಹಿಳೆಯರು ಒಳಗಾಗಿದ್ದಾರೆ. ಹೀಗಾಗಿ ಮಹಿಳೆಯರು ಸಮಾಜದಲ್ಲಿ ಸದೃಢವಾಗಿ ನಿಲ್ಲಲು ಈ ಯೋಜನೆ ಜಾರಿ ಮಾಡಲಾಗಿದೆ. ಭಾರತದಲ್ಲಿ ಮಹಿಳೆಯರು ಕೇವಲ ಶೇ.24ರಷ್ಟು ಮಾತ್ರ ಸಾರ್ವಜನಿಕ ಜೀವನದಲ್ಲಿ ಭಾಗಿಯಾಗುತ್ತಾರೆ. 2014ರ ನಂತರ ಈ ಸಂಖ್ಯೆ ಇಳಿಕೆಯಾಗಿದೆ. ಮಹಿಳೆ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಾರಲ್ಲ ಅವರ ಕಾಲದಲ್ಲಿ 30% ನಿಂದ 24 ಪರ್ಸೆಂಟ್ಗೆ ಇಳಿಕೆಯಾಗಿದೆ ಎಂದು ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದರು.

ಮಹಿಳೆಯರು ಮನೆ ಬಾಗಿಲು ದಾಟಬಾರದು ಎಂದು ಬಯಸುತ್ತಾರೆ. ಮನುವಾದಿಗಳು ಬಯಸುವುದೇ ಇದು. ಯಾವ ಹೆಣ್ಣು ಮಕ್ಕಳು ಹೆಚ್ಚುಹೆಚ್ಚು ಮನೆಯಿಂದ ಹೊರಗೆ ಬರ್ತಾರೆ ಆಗ ಹೆಚ್ಚು ದೇಶ ಅಭಿವೃದ್ಧಿ ಆಗುತ್ತದೆ. ಹೆಣ್ಣು ಮಕ್ಕಳಿಗೆ ಶಕ್ತಿ ತುಂಬಿದಾಗ ಸಾಮಾಜಿಕ ಆರ್ಥಿಕ ಅಸಮಾನತೆ ಕ್ರಮೇಣ ಕಡಿಮೆ ಮಾಡಬಹುದು. ನಾಲ್ಕು ಗ್ಯಾರಂಟಿಗಳು ಬಹುತೇಕ ಮಹಿಳೆಯರಿಗೆ ಸಂಬಂಧ ಪಟ್ಟಿದ್ದು. ಅನ್ನಭಾಗ್ಯ ಗೃಹಲಕ್ಷ್ಮಿ ಶಕ್ತಿ ಯೋಜನೆ ಮಹಿಳೆಯರಿಗೆ ಸಂಬಂಧಿಸಿವೆ. ಕೆಲವರು ಇದನ್ನು ಗೇಲಿ ಮಾಡುತ್ತಾರೆ. ಆದರೆ ನಾವು ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ ಎಂದು ಎಂದರು.

ಗೇಲಿ ಮಾಡುವವರು ಅಲ್ಲಿಯೇ ಇರುತ್ತಾರೆ. ಗೇಲಿ ಮಾಡುವವರ ಮಾತಿಗೆ ಸೊಪ್ಪು ಹಾಕಲ್ಲ. ಸುಮ್ಮನೆ ಗೇಲಿ ಮಾಡುವವರು ಮನು ಸ್ಮೃತಿ ಮನಸ್ಥಿತಿ ಜನರು. ಸರ್ಕಾರದ ಬಗ್ಗೆ ಸ್ವಲ್ಪವಾದರೂ ಜ್ಞಾನ ಇದೆಯಾ? ಎಂದು ಪಶ್ನಿಸಿದ ಸಿದ್ದರಾಮಯ್ಯ ಅವರು, ಸರ್ಕಾರ ನಡೆಸಿದ್ದವರು ಆಡುವ ಮಾತಾ ಅದು. ಎಡಬಿಡಂಗಿ ಮಾತುಗಳೂ ಅವು ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಒಂದು ವರ್ಷ 70 ಯುನಿಟ್ ಬಳಸಿದರೆ ಅವರಿಗೂ 200 ಕೊಡಿ ಎನ್ನುವುದಾದರೆ ತರ್ಕ ಇದೆಯ? ತರ್ಕ ರಹಿತ ವಾದ ಅದು ವಿಪಕ್ಷಗಳ ಮಾತಿಗೆ ಜನ ತಲೆ ಕೆಡಸಿಕೊಳ್ಳಲ್ಲ. ಕೆಲವು ಮಾಧ್ಯಮಗಳೂ ಅವರ ಜೊತೆ ಸೇರಿಕೊಂಡಿದ್ದಾರೆ. ಯಾರು 200 ಯುನಿಟ್ ಒಳಗೆ ಬಳಸುತ್ತಾರೆ ಅವರಿಗೆ ವಿದ್ಯುತ್ ಉಚಿತ. ಕೆಳ ಸಮುದಾಯ ಬಡವರಿಗೆ ಅಶಕ್ತರಿಗೆ ಶಕ್ತಿ ಕೊಡಬೇಕು ಎನ್ನುವುದು ನಮ್ನ ಉದ್ದೇಶ. ಇವರ ಕಾಲದಲ್ಲಿ ಏನೂ ಮಾಡಲಿಲ್ಲ. 60 ಭರವಸೆ ಈಡೇರಿಸುವುದಕ್ಕೂ ಆಗಲಿಲ್ಲ ಇವರ ಕೈಲಿ. ಅವರು ನಮಗೆ ಪಾಠ ಮಾಡುತ್ತಾರೆ. ಬೆಳಗ್ಗೆಯಿಂದ ಸಂಜೆಯವರೆಗೂ ಅದೇ ಚರ್ಚೆ ಮಾಡುತ್ತಾರೆ ಎಂದು ಕಿಡಿಕಾರಿದರು.

ಅನ್ನಭಾಗ್ಯ ಯೋಜನೆಯಡಿ ಎಲ್ಲರಿಗೂ 10 ಕೆಜಿ ಅಕ್ಕಿ ಕೊಡುತ್ತೇವೆ. ಬಿಪಿಎಲ್​, ಅಂತ್ಯೋದಯ ಕಾರ್ಡ್​ನವರಿಗೆ 10 ಕೆಜಿ ಅಕ್ಕಿ ನೀಡುತ್ತೇವೆ, ಅನ್ನಭಾಗ್ಯ ಯೋಜನೆಗೆ 10 ಸಾವಿರದ ನೂರು ಕೋಟಿ ರೂ. ಖರ್ಚಾಗುತ್ತೆ. ವೇಗದೂತ​ ಬಸ್​​ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಬಹುದು. ಶಕ್ತಿ ಯೋಜನೆಯ ಸ್ಮಾರ್ಟ್​​ಕಾರ್ಡ್​ ಅನ್ನು ಉಚಿತವಾಗಿ ಕೊಡುತ್ತೇವೆ ಎಂದು ತಿಳಿಸಿದರು.

5 ಗ್ಯಾರಂಟಿ ಯೋಜನೆಗಳಲ್ಲಿ ಯಾರೂ ಮಧ್ಯವರ್ತಿಗಳಿಲ್ಲ. ಶ್ರೀಮಂತರ ಜೇಬಿನಲ್ಲಿ ದುಡ್ಡು ಇದ್ದರೆ ಉಪಯೋಗ ಆಗುವುದಿಲ್ಲ. ಬಡವರ ಜೇಬಿನಲ್ಲಿ ದುಡ್ಡು ಇದ್ದರೆ ಹೆಚ್ಚು ಅನುಕೂಲ ಆಗುತ್ತದೆ. ಬಡವರ ಜೇಬಿನಲ್ಲಿ ದುಡ್ಡು ಇಡುವುದೇ ನಮ್ಮ ಸರ್ಕಾರದ ಕೆಲಸ. ಅವಕಾಶ ವಂಚಿತರಿಗೆ ಅನುಕೂಲ ಆಗಲು ಈ ಯೋಜನೆ ಜಾರಿ ಮಾಡಿದ್ದೇವೆ ಎಂದು ಹೇಳಿ ಮಹಿಳೆಯರಿಗೆ ಶುಭ ಹಾರೈಸಿದರು.

error: Content is protected !!