ಬೆಂಗಳೂರು: ಬೇಸಿಗೆ ಹಿನ್ನೆಲೆಯಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಿಗೆ ನೀರಿನ ಅಗತ್ಯವಿದೆ. ಹಾಗಾಗಿ 6 ಟಿಎಂಸಿ ನೀರು ಬಿಡುಗಡೆ ಕೋರಿ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆಗೆ ಸಿಎಂ ಸಿದ್ಧರಾಮಯ್ಯ ಪತ್ರ ಬರೆದಿದ್ದಾರೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಯ ಜನರಿಗೆ ಕುಡಿಯುವ ನೀರು ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಉಜ್ಜನಿ, ಕೋಯ್ನಾ ಡ್ಯಾಂನಿಂದ ಕೃಷ್ಣಾ ಹಾಗೂ ಭೀಮಾ ನದಿಗೆ ತಲಾ 3 ಟಿಎಂಸಿ ಅಂತೆ ಒಟ್ಟು 6 ಟಿಎಂಸಿ ನೀರು ಬಿಡುಗಡೆಗೆ ಕರ್ನಾಟಕ ಮನವಿ ಮಾಡಿದೆ.
ಮೇ ತಿಂಗಳಲ್ಲಿ 1 ಟಿಎಂಸಿ ನೀರು ಬಿಡುಗಡೆಗೆ ಪತ್ರ ಬರೆಯಲಾಗಿತ್ತು. ಆಗ ಜಲಾಶಯದಿಂದ ನೀರು ಬಿಡುಗಡೆ ಮಾಡಿದಕ್ಕೆ ಧನ್ಯವಾದಗಳು. ಈಗ ಜನರು ಮತ್ತು ಜಾನುವಾರುಗಳ ಕುಡಿಯುವ ನೀರಿಗಾಗಿ ಮತ್ತೆ ನೀರು ಬಿಡುಗಡೆ ಮಾಡುವಂತೆ ಪತ್ರದ ಮೂಲಕ ಕೋರಲಾಗಿದೆ.
ಕರ್ನಾಟಕದ ಉತ್ತರ ಜಿಲ್ಲೆಗಳಲ್ಲಿ ಬೇಸಿಗೆಯ ತೀವ್ರತೆ ಇನ್ನೂ ಮುಂದುವರೆದಿದೆ. ಜೊತೆಗೆ ಈ ಭಾಗದಲ್ಲಿ ಮುಂಗಾರು ಸಹ ಇನ್ನೂ ಆರಂಭವಾಗಿಲ್ಲ. ಹಾಗಾಗಿ ಮಾನವರು ಮತ್ತು ಜಾನುವಾರುಗಳ ಬಳಕೆಗಾಗಿ ನೀರಿನ ಅವಶ್ಯಕತೆಯಿದೆ. ಕುಡಿಯುವ ನೀರಿನ ಪೂರೈಕೆಗಾಗಿ ವಾರ್ನಾ, ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ 2 ಟಿಎಂಸಿ ಮತ್ತು ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ 3 ಟಿಎಂಸಿ ನೀರನ್ನು ತಕ್ಷಣ ಸಂಬಂಧಪಟ್ಟ ಅಧಿಕಾರಿಗೆ ನಿರ್ದೇಶನ ನೀಡಬೇಕೆಂದು ಸಿಎಂ ಸಿದ್ಧರಾಮಯ್ಯ ವಿನಂತಿಸಿದ್ದಾರೆ.