ಹುಬ್ಬಳ್ಳಿ: ಮತದಾನ ಮುಗಿಯುತ್ತಿದ್ದಂತೆ ಸಿಎಂ ಬಸವರಾಜ ಬೊಮ್ಮಾಯಿ ಸವದತ್ತಿ ಯಲ್ಲಮ್ಮನ ದೇವಿಯ ದರ್ಶನ ಪಡೆದಿದ್ದಾರೆ. ಮನೆ ದೇವತೆ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ದರ್ಶನ ಪಡೆದ ಸಿಎಂ ಬಿಜೆಪಿ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯಲ್ಲಮ್ಮನಗುಡ್ಡದಲ್ಲಿರುವ ಕ್ಷೇತ್ರಕ್ಕೆ ಕುಟುಂಬ ಸಮೇತ ಆಗಮಿಸಿದ ಸಿಎಂಗೆ, ಸಚಿವ ಸಿಸಿ ಪಾಟೀಲ್, ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ಸಾಥ್ ನೀಡಿದ್ದಾರೆ. ಇದಕ್ಕೂ ಮುನ್ನ ಮಾತನಾಡಿದ ಸಿಎಂ, “ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಚಾರದಿಂದ ನಮಗೆ ಪ್ಲಸ್ ಆಗಿದೆ. ನಾವು ಸ್ಪಷ್ಟ ಬಹುಮತ ಪಡೆಯುತ್ತೇವೆ” ಎಂದು ಹೇಳಿದರು.
ಶಿಗ್ಗಾಂವಿ ಜನತೆ ತೋರಿದ ಪ್ರೀತಿಗೆ ನಾನು ಚಿರರುಣಿ. ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡಿದರು. ನನ್ನ ವಿರುದ್ಧ ಷಡ್ಯಂತ್ರ, ಅಪಪ್ರಚಾರ ಮಾಡಿದರು. ಆದರೆ ಅದು ನಿನ್ನೆಗೆ ಮುಗಿದಿದೆ. ನಾನು ಶಿಗ್ಗಾಂವಿಯಲ್ಲಿ ದೊಡ್ಡ ಬಹುಮತದಿಂದ ಗೆಲ್ಲುತ್ತೇನೆ ಎಂದರು.
ಮತದಾನೋತ್ತರ ಸಮೀಕ್ಷೆಗಳು ಕಳೆದ ಬಾರಿ ಕಾಂಗ್ರೆಸ್ 107ಕ್ಕೂ ಅಧಿಕ ಸ್ಥಾನ ಅಂತ ಹೇಳಿದ್ದವು. ಆದರೆ ಫಲಿತಾಂಶದ ದಿನ ಅದು ಉಲ್ಟಾ ಆಯಿತು. ಈಗಲೂ ಅದೇ ನಂಬಿಕೆಯಿದೆ. ಪ್ರಧಾನಿ ಮೋದಿಯವರ ಪ್ರಚಾರ ನಮಗೆ ಪ್ಲಸ್ ಆಗಿದೆ. ಯುವಕರು ಮತ್ತು ಮಹಿಳೆಯರು ನಮ್ಮ ಪರವಾಗಿ ಮತದಾನ ಮಾಡಿದ್ದಾರೆ. ನನಗೆ ವಿಶ್ವಾಸವಿದೆ ನಾವು ಸಂಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದರು. ಅತಂತ್ರ ಎಂಬ ಪ್ರಶ್ನೆ ಉತ್ತರ ನೀಡಲ್ಲ. ನಾನು 150 ಅಂತ ಎಲ್ಲೂ ಹೇಳಿಲ್ಲ. ಆದರೆ ಬಹುಮತ ಅಂತ ಹೇಳಿದ್ದೆ ಈಗಲೂ ಅದೇ ಹೇಳಿಕೆ ಬದ್ಧನಾಗಿದ್ದೇನೆ ಎಂದರು.