ಬೆಂಗಳೂರು: ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಸೇರಿದಂತೆ ಎಲ್ಲರೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಮುಗಿಸುತ್ತಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಿರುಗೇಟು ನೀಡಿದ್ದಾರೆ. ಇಂತಹ ಹೇಳಿಕೆಗಳಿಗೆ ಉತ್ತರ ಕೊಡಲು ಆಗಲ್ಲ. ಕಾಂಗ್ರೆಸ್ನವರು ವಿಪಕ್ಷನಾಯಕ ಸಿದ್ದರಾಮಯ್ಯ ಅವರನ್ನು ಹೇಗೆ ಮುಗಿಸಿದ್ದಾರೆ ಅಂತ ಗೊತ್ತಿಲ್ಲವಾ? ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಗಿಸಿದರು. ಈಗ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಮುಗಿಸಲು ಏನು ಹುನ್ನಾರ ಮಾಡಿದ್ದಾರೆಂಬುದು ಜಗತ್ತಿಗೆ ಗೊತ್ತಿದೆ ಎಂದು ಟಾಂಗ್ ಕೊಟ್ಟರು.
ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಸಿಎಂ ಕಚೇರಿಯಿಂದ ಅಧಿಕಾರ ದುರ್ಬಳಕೆ ಆರೋಪ ವಿಚಾರವಾಗಿ ಮಾತನಾಡಿದ ಅವರು ಡಿ.ಕೆ. ಶಿವಕುಮಾರ್ ಅವರ ನಾಮಪತ್ರ ತಿರಸ್ಕೃತ ಏನಾದ್ರೂ ಆಯ್ತಾ? ಕಾಂಗ್ರೆಸ್ನವರಿಗೆ ಮಾಡಲು ಬೇರೆ ಕೆಲಸ ಇಲ್ಲದೇ ಆರೋಪ ಮಾಡುತ್ತಾರೆ. ನಾಮಪತ್ರಗಳ ಬಗ್ಗೆ ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ ಎಂದರು.
ಲಿಂಗಾಯತ ಡ್ಯಾಮ್ ನೀರು ಕಾಂಗ್ರೆಸ್ಗೆ ಬರುತ್ತಿದೆ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ ಕಾಂಗ್ರೆಸ್ ಗುಂಡಿಯಲ್ಲಿ ನೀರೇ ಇಲ್ಲ ಅದನ್ನು ನೋಡಿಕೊಳ್ಳಲಿ. 2013ರಲ್ಲಿ ಲಿಂಗಾಯತ ಸಮುದಾಯ ವಿಭಜನೆ ಆಗಿಲ್ಲ. ಲಿಂಗಾಯತ ಮತದಾರರು ಪ್ರಬುದ್ಧರಿದ್ದಾರೆ. ಡಿ. ಕೆ ಶಿವಕುಮಾರ್ ಹೇಳಿಕೆ ಬಳಿಕ ಲಿಂಗಾಯತರು ಮತ್ತಷ್ಟು ಜಾಗೃತರಾಗಿದ್ದಾರೆ. ಲಿಂಗಾಯತರನ್ನು ಗಟ್ಟಿ ಮಾಡುವ ಕೆಲಸ ಡಿ.ಕೆ. ಶಿವಕುಮಾರ್ ಅವರು ಮಾಡುತ್ತಿದ್ದಾರೆ ಎಂದು ಹೇಳಿದರು.
ನಾಳೆಯಿಂದ ಪ್ರಚಾರಕ್ಕೆ ತೆರಳುತ್ತೇನೆ. ಯಲಹಂಕದಿಂದ ರೋಡ್ ಶೋ ಆರಂಭ ಮಾಡುತ್ತೇನೆ. ದೊಡ್ಡಬಳ್ಳಾಪುರ, ನೆಲಮಂಗಲ, ತುಮಕೂರು ,ಅರಸಿಕೇರೆ ನಂತರ ಬೆಳಗಾವಿ ಭಾಗ, ಗುಲಬರ್ಗಾ ಭಾಗ ಹಾಗೂ ಮೈಸೂರು ಭಾಗಳಲ್ಲೂ ಚುನಾವಣಾ ಯಾತ್ರೆ ನಡೆಸಲಿದ್ದೇನೆ. ಎಲ್ಲಾ ಕಡೆ ರೋಡ್ ಶೋಗಳನ್ನು ನಡೆಸಲಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರವಾಸ ವಿಚಾರವಾಗಿ ಮಾತನಾಡಿ ಪಕ್ಷ ಎಲ್ಲವನ್ನು ನಿರ್ಧಾರ ಮಾಡಲಿದೆ. ಬಿಜೆಪಿ ಪರವಾಗಿ ನಟ ಕಿಚ್ಚ ಸುದೀಪ್ ಮತ್ತೆ ಪ್ರಚಾರ ಮಾಡುತ್ತಾರೆ. ನಟ ಸುದೀಪ್ ಪ್ರಚಾರ ಒಂದೆರಡು ದಿನಗಳಲ್ಲಿ ಫೈನಲ್ ಆಗಲಿದೆ ಎಂದು ಹೇಳಿದ್ದಾರೆ