ಬೆಂಗಳೂರು: ಮುಖ್ಯಮಂತ್ರಿ ಮಾಡುವವರು ಜನ. ಆದರೆ, ಜನರ ಮನಸ್ಸಿನಲ್ಲಿ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಇಬ್ಬರು ಇಲ್ಲ. ಫಲಿತಾಂಶ ಬಂದ ಮೇಲೆ ಜನರ ನಾಡಿಮಿಡಿತ ಗೊತ್ತಾಗಲಿದೆ ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಖಾಸಗಿ ಚಾನೆಲ್ ಸಂದರ್ಶನದಲ್ಲಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಮತ್ತೆ ಸಿಎಂ ಆಗಲು ಬಯಸಿದ್ದಾರೆ. ಆದರೆ, ಜನರ ನಾಡಿಮಿಡಿತ ಏನಿದೆಯೋ ಯಾರಿಗೆ ಗೊತ್ತು? ಫಲಿತಾಂಶ ಬಂದ ಮೇಲೆ ಜನರ ನಾಡಿಮಿಡಿತ ಗೊತ್ತಾಗಲಿದೆ. ಜನರ ಬೆಂಬಲ ಇದ್ರೆ ಶಾಸಕರಾಗೋದು. ಇಲ್ಲ ಅಂದ್ರೇ ಆಗಲ್ಲ. ಅವರು ಅಲ್ಲಿ ಹೊಸದೇನು ಹೇಳಿಲ್ಲ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬರುವುದೇ ಇಲ್ಲ. ಹೀಗಿದ್ದಾಗ ಇಲ್ಲದಿರುವ ಸಿಎಂ ಸೀಟಿಗಾಗಿ ಗುದ್ದಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕಾಗಿ, ಮುಖ್ಯಮಂತ್ರಿಗಾಗಿ ಹೋರಾಡುತ್ತಿದೆ. ಜನರಿಗೆ ಕರ್ನಾಟಕಕ್ಕೆ ಒಳ್ಳೆಯದು ಮಾಡಬೇಕು ಎಂದು ಅವರೇನು ಮಾಡಿಲ್ಲ. ಸಿದ್ದರಾಯಮಯ್ಯ ಹೇಳಿರುವುದು ಅಲ್ಲಿ ಅಂತರಿಕವಾಗಿ ನಡೆಯುವ ಪ್ರತಿಬಿಂಬ ಎಂದು ಹೇಳಿದರು.
ಡಿಕೆ ಶಿವಕುಮಾರ್ ಹೋದ ಕಡೆಯಲ್ಲಾ ನಾನೇ ಸಿಎಂ ನನಗೆ ಆಶಿರ್ವಾದ ಮಾಡಿ ಅಂತ ಹೇಳಿಕೊಂಡು ತಿರುಗಾಡ್ತಾರೆ. ಸಿದ್ದರಾಮಯ್ಯ ನಾನೇ ಸಿಎಂ ಅಂತಾ ಹೇಳ್ತಾರೆ. ಮುಖ್ಯಮಂತ್ರಿ ಮಾಡೋರು ಜನ. ಆದ್ರೆ, ಜನರ ಮನಸ್ಸಿನಲ್ಲಿ ಇವರಿಬ್ಬರು ಇಲ್ಲ. ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರು ಕನಸಿನಲ್ಲಿ ಮುಖ್ಯಮಂತ್ರಿ ಸೀಟಿನ ಕನಸು ಕಾಣ್ತಿದ್ದಾರೆ. ಆ ಕನಸು ನನಸಾಗೋದಿಲ್ಲ ಎಂದರು.
ಏಪ್ರಿಲ್ 8ಕ್ಕೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ!
ಇನ್ನು, ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಎರಡು ದಿನ ರಾಜ್ಯ ಸಮಿತಿಯ ಸಭೆ ಇದೆ. ಮೊನ್ನೆ ಎರಡು ದಿನ ಮಾಡಿರುವ ಚರ್ಚೆ ಬಗ್ಗೆ ಈ ಸಭೆಯಲ್ಲಿ ಮಾತುಕತೆ ನಡೆಸುತ್ತೇವೆ. ಈ ಸಭೆ ಬಳಿಕ ಕೇಂದ್ರ ಚುನಾವಣಾ ಸಮಿತಿಗೆ ಪಟ್ಟಿಯನ್ನು ಕಳಿಸಲಿದ್ದೇವೆ. ಏಪ್ರಿಲ್ 8ನೇ ತಾರೀಖು ಕೇಂದ್ರ ಚುನಾವಣಾ ಸಮಿತಿಯಲ್ಲಿ ಚರ್ಚೆಯಾಗಿ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಿದರು.
ಬಿಜೆಪಿಗೆ ಬಹುಮತ ಸಿಗಲಿದೆ!
ಕಳೆದ ಮೂರು ನಾಲ್ಕು ದಿನಗಳ ಬೆಳವಣಿಗೆ ಗಮನಿಸಿದರೆ ಸಂಪೂರ್ಣ ಮೆಜಾರಿಟಿ ಬಿಜೆಪಿಗೆ ಸಿಗಲಿದೆ. ಕೆಲವು ಕ್ಷೇತ್ರದಲ್ಲಿ ಆಶ್ಚರ್ಯಕರ ಫಲಿತಾಂಶವನ್ನ ನೀವು ನೋಡ್ತೀರಾ. ಕಾರ್ಯಕರ್ತರು, ನಾಯಕರು ಎಲ್ಲರೂ ಆತ್ಮವಿಶ್ವಾಸದಲ್ಲಿದ್ದಾರೆ. ಗ್ರೌಂಡ್ ರಿಯಾಲಿಟಿ ಮೇಲೆ ಅಭ್ಯರ್ಥಿ ಆಯ್ಕೆಯಾಗಲಿದೆ ಎಂದು ತಿಳಿಸಿದರು. ಆಯನೂರು ಮಂಜುನಾಥ್ ಬಂಡಾಯ, ಶಾಸಕರು ಬಿಟ್ಟು ಹೋಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, 125 ಶಾಸಕರು ಈಗ ಇದ್ದಾರೆ, ಅದರಲ್ಲಿ ಕೆಲವು ಕಡೆ ಇಬ್ಬರು ಆಕಾಂಕ್ಷಿಗಳು ಇದ್ದಾರೆ. ಅಲ್ಲಿ ಸೀಟು ಸಿಗಲ್ಲ ಅಂತಾ ಕೆಲವರು ಬಿಟ್ಟು ಹೋಗಿದ್ದಾರೆ ಅಷ್ಟೇ. ಇದರಿಂದ ಬಿಜೆಪಿಯ ಚುನಾವಣೆ ಮೇಲೆ ಯಾವುದೇ ಎಫೆಕ್ಟ್ ಆಗುವುದಿಲ್ಲ. ಬಿಜೆಪಿಯಿಂದ ಮತ್ತೆ ಯಾರು ಹೋಗಲ್ಲ. ಸುಮ್ಮನೆ ಡಿಕೆ ಶಿವಕುಮಾರ್ ಹೆಸರುಗಳನ್ನು ಬಿಡ್ತಿದ್ದಾರೆ ಅಷ್ಟೇ ಎಂದರು.