ಮೈಸೂರು: ಮೈಸೂರಿನಲ್ಲಿ ಭಾರೀ ಸದ್ದು ಮಾಡಿದ್ದ ಶಾಸಕ ಸಾರಾ.ಮಹೇಶ್ ಒಡೆತನದ ಸಾರಾ ಚೌಲ್ಟ್ರಿ ವಿವಾದ ಕೊನೆಗೂ ಅಂತ್ಯವಾಗಿದ್ದು, ಪ್ರಾದೇಶಿಕ ಆಯುಕ್ತರು ನೇಮಿಸಿದ್ದ ಸರ್ವೆ ಸಮಿತಿ ಶಾಸಕ ಸಾರಾ.ಮಹೇಶ್ ಗೆ ಕ್ಲೀನ್ ಚೀಟ್ ನೀಡಿದೆ. ರಾಜಕಾಲುವೆ ಮೇಲೆ ಚೌಲ್ಟ್ರಿ ನಿರ್ಮಾಣ ಆಗಿಲ್ಲ ಹಾಗೂ ಯಾವುದೇ ಒತ್ತುವರಿ ಆಗಿಲ್ಲ ಎಂದು ವರದಿ ನೀಡಿದ್ದು, ವರದಿ ಬರುತ್ತಿದ್ದಂತೆ ರೋಹಿಣಿ ಸಿಂಧೂರಿ ವಿರುದ್ಧ ಸಾರಾ ಗರಂ ಆಗಿದ್ದಾರೆ.
- ಮೈಸೂರಿನ ಸಾರಾ ಚೌಲ್ಟ್ರಿ ವಿವಾದಕ್ಕೆ ಮುಕ್ತಿ
- ರಾಜಕಾಲುವೆ ಮೇಲೆ ಚೌಲ್ಟ್ರಿ ನಿರ್ಮಾಣ ಆಗಿಲ್ಲ
- ಪ್ರಾದೇಶಿಕ ಆಯುಕ್ತರು ನೇಮಿಸಿದ್ದ ಸರ್ವೆ ಸಮಿತಿ ನೀಡಿದ ವರದಿ
ಮೈಸೂರಿನಲ್ಲಿ ಸಂಚಲನ ಸೃಷ್ಠಿಸಿದ್ದ ಶಾಸಕ ಸಾರಾ ಮಹೇಶ್ ಒಡೆತನದ ಸಾರಾ ಚೌಲ್ಟ್ರಿ ವಿವಾದದಲ್ಲಿ ಶಾಸಕ ಸಾರಾ ಮಹೇಶ್ ಅವರಿಗೆ ಕೊನೆಗೂ ಕ್ಲೀನ್ ಚೀಟ್ ನೀಡಲಾಗಿದೆ. ರಾಜಕಾಲುವೆ ಮೇಲೆ ಚೌಲ್ಟ್ರಿ ನಿರ್ಮಾಣ ಆಗಿದೆ ಎಂದು ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ನೀಡಿದ ಹೇಳಿಕೆ ಇದಿಗ ರೋಹಿಣಿ ಸಿಂಧೂರಿಗೆ ಉಲ್ಟಾ ಹೊಡೆದಿದೆ. ಒತ್ತುವರಿ ಬಗ್ಗೆ ಪ್ರಾದೇಶಿಕ ಆಯುಕ್ತರು ರಚಿಸಿದ ಸರ್ವೆ ಸಮಿತಿ ವರದಿ ನೀಡಿದ್ದು, ರಾಜಕಾಲುವೆ ಮೇಲೆ ಚೌಲ್ಟ್ರಿ ನಿರ್ಮಾಣ ಆಗಿಲ್ಲ ಹಾಗೂ ಯಾವುದೇ ಒತ್ತುವರಿ ಆಗಿಲ್ಲ ಎಂದು ವರದಿ ನೀಡಿದೆ. ವರದಿ ಪ್ರಕಾರ ಹಳ್ಳದಿಂದ ಒಟ್ಟು 74 ಮೀಟರ್ ಬಿಟ್ಟು ಚೌಲ್ಟ್ರಿ ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ. ವರದಿಯ ಪ್ರತಿ ದೊರೆಯುತ್ತಿದ್ದಂತೆ ತುರ್ತು ಸುದ್ದಿಗೋಷ್ಠಿ ನಡೆಸಿದ ಶಾಸಕ ಸಾರಾ.ಮಹೇಶ್, ಎಲ್ಲಾ ದಾಖಲೆಗಳನ್ನು ಬಹಿರಂಗ ಪಡಿಸಿದ್ದಾರೆ.
- ಲಿಂಗಾಂಬುದಿ ಕೆರೆ ಪಕ್ಕದ ಜಮೀನಿನ ದಾಖಲೆಗಳು ಬಹಿರಂಗ
- ಬಫರ್ ಝೋನ್ ವಿಚಾರದಲ್ಲೂ ಎಲ್ಲೂ ನಿಯಮ ಉಲ್ಲಂಘಿಸಿಲ್ಲ
- ಕ್ಲೀನ್ ಚೀಟ್ ದೊರೆಯುತ್ತಿದ್ದಂತೆ ಸಿಂಧೂರಿ ವಿರುದ್ಧ ಹರಿಹಾಯ್ದ ಸಾರಾ.ಮಹೇಶ್
ಸಾರಾ ಚೌಲ್ಟ್ರಿ ವಿಚಾರದಲ್ಲಿ ಕ್ಲೀನ್ ಚೀಟ್ ದೊರೆಯುತ್ತಿದ್ದಂತೆ ಸಾರಾ ಚೌಲ್ಟ್ರಿಯ ಮೂಲ ದಾಖಲೆಗಳು, ಭೂ ಪರಿವರ್ತನೆ, ಪ್ಲಾನ್ ಅಪ್ರುವಲ್ ಪ್ರತಿಗಳನ್ನು ಬಹಿರಂಗ ಪಡಿಸಿದ ಸಾರಾ.ಮಹೇಶ್, ಲಿಂಗಾಂಬುದಿ ಕೆರೆ ಪಕ್ಕದಲ್ಲಿ ರೆಸಾರ್ಟ್ ನಿರ್ಮಾಣಕ್ಕಾಗಿ ಪಡೆದಿರುವ ಕಮರ್ಷಿಯಲ್ ಕನ್ವರ್ಷನ್ ಬಗ್ಗೆಯೂ ದಾಖಲೆ ಬಿಡುಗಡೆ ಮಾಡಿದ್ರು. ಈ ಎಲ್ಲಾ ದಾಖಲೆಗಳನ್ನು ಬಹಿರಂಗ ಪಡಿಸಿದ ನಂತರ ನಾನು ಎಲ್ಲೂ ಯಾವುದೇ ಅಕ್ರಮ ಎಸಗಿಲ್ಲ. ರೋಹಿಣಿ ಸಿಂಧೂರಿ ಸೇಡಿಗಾಗಿ ನನ್ನ ತೇಜೋವಧೆ ಮಾಡಿದ್ರು. ಈಗ ರೋಹಿಣಿ ಆತ್ಮಸಾಕ್ಷಿ ಪ್ರಶ್ನಿಸಿಕೊಳ್ಳಲಿ ಎಂದು ತಿರುಗೇಟು ನೀಡಿದ್ರು.
ಒಟ್ಟಾರೆ, ಕಳೆದ ಐದಿನೈದು ದಿನದಿಂದ ಮೈಸೂರಿನಲ್ಲಿ ಭಾರೀ ಸದ್ದು ಮಾಡಿದ್ದ ಭೂ ಅಕ್ರಮ, ಸಾರಾ ಚೌಲ್ಟ್ರಿ ವಿವಾದ ತಾರ್ಕಿಕ ಅಂತ್ಯ ಕಂಡಿದ್ದು, ಚೌಲ್ಟ್ರಿ ವಿಚಾರದಲ್ಲಿ ಶಾಸಕ ಸಾರಾ.ಮಹೇಶ್ ಕ್ಲೀನ್ ಚೀಟ್ ಪಡೆದು ನಿಟ್ಟುಸಿರು ಬಿಟ್ಟಿದ್ದಾರೆ.