ಕೊಪ್ಪಳ: ನಗರದ ಗಂಗಾವತಿ ತಾಲೂಕಿನ ವಿವಿಧ ಕಡೆ ಜೂಜಾಟ ನಡೆಯುತ್ತಿದ್ದು, ಈ ಬಗ್ಗೆ ಎರಡು ದಿನದ ಹಿಂದೆಯೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸದನದಲ್ಲಿ ಚರ್ಚೆ ಮಾಡಿದ್ದರು.
ಆದರೂ ಗಂಗಾವತಿ ತಾಲೂಕಿನ ಮಲ್ಲಾಪುರ ಗ್ರಾಮದ ಹೊರವಲಯದಲ್ಲಿ ಇಸ್ಪೀಟ್ ಆಡುವ ದೃಶ್ಯ ವೈರಲ್ ಆಗಿದೆ. ಇನ್ನು ವಾನಭದ್ರಪ್ಪ ದೇವಸ್ಥಾನ, ಮಲಕನಮರಡಿ ಗುಡ್ಡ, ಹೇರೂರು ಕೆಸರಹಟ್ಟಿ ಕಾಲುವೆ, ಕೊರಂಕ್ಯಾಂಪ್ ಕಡೇಬಾಗಿಲು, ವಿದ್ಯಾನಗರ ಚಿಕ್ಕಜಂತಕಲ್, ವೆಂಕಟಗಿರಿ ಗುಡ್ಡದ ಸೇರಿ ಹತ್ತಾರು ಕಡೆ ದಿನವೂ ರಾತ್ರಿ ಅಂದರ್ ಬಾಹರ್ ಜೂಜಾಟ ನಡೆಯುತ್ತದೆ.
ಪ್ರತಿಯೊಬ್ಬ ಜೂಜುಕೋರರಿಗೆ ಎರಡು ಸಾವಿರ ರೂಪಾಯಿ ಪ್ರವೇಶ ಶುಲ್ಕ ನಿಗದಿ ಮಾಡಿದ್ದು, ನೆರೆಯ ಹೊಸಪೇಟೆ, ಸಿಂಧನೂರು, ಬಳ್ಳಾರಿ ಹಾಗೂ ಆಂಧ್ರ ಪ್ರದೇಶದಿಂದ ಜೂಜುಕೋರರು ಬರುತ್ತಾರೆ. ಇದಕ್ಕೆ ಅಲ್ಲಿನ ಪೊಲೀಸ್ ಅಧಿಕಾರಿಗಳೆ ಕಿಂಗ್‍ಪಿನ್ ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ. ಅಂದರ್ ಬಾಹರ್ ದಂಧೆಕೋರರ ಜೊತೆಗೆ ಪೊಲೀಸ್ ಅಧಿಕಾರಿ ನಂಟು ಇದೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಸಹ ಈ ಹಿಂದೆ ಆರೋಪಿಸಿದ್ದರು. ಈ ಬಗ್ಗೆ ತನಿಖೆಗೆ ಎಸ್ಪಿ ಸಾಹೇಬ್ರು ಮುಂದಾಗುತ್ತಾರೆಯೇ ಎಂದು ಕಾದು ನೋಡಬೇಕಿದೆ.