ಬೆಳಗಾವಿ: ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಧ್ವಂಸ ಹಾಗೂ ಮಹಾ ಕಿಡಿಗೇಡಿಗಳಿಂದ ಕನ್ನಡ ಧ್ವಜಕ್ಕೆ ಹಿನ್ನೆಲೆ ಇಂದು ಟಿ.ಎ. ನಾರಾಯಣಗೌಡ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಳಗಾವಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸುವರ್ಣ ವಿಧಾನಸೌದಕ್ಕೆ ಮುತ್ತಿಗೆ ಹಾಕಲಿದ್ದಾರೆ.
ಇಂದು ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ವಿವಿಧ ಕನ್ನಡ ಪರ ಸಂಘಟನೆಗಳ ಪ್ರತಿಭಟನೆ ಬಿಸಿ ತಟ್ಟಲಿದ್ದು, ಬೆಳಗಾವಿ ಸುವರ್ಣ ವಿಧಾನ ಸೌಧಕ್ಕೆ ಕನ್ನಡ ಹೋರಾಟಗಾರರು ಮುತ್ತಿಗೆ ಕರೆ ನೀಡಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣದಿಂದ ಸಾವಿರಾರು ಕಾರ್ಯಕರ್ತರು ಮುತ್ತಿಗೆ ಕರೆಗೆ ಬೆಳಗಾವಿಯತ್ತ ಬರುತ್ತಿದ್ದು, ಮತ್ತೊಂದೆಡೆ ಕರವೇ ಪ್ರವೀಣ ಶೆಟ್ಟಿ ಬಣ ಹಾಗೂ ವಾಟಾಳ ನಾಗರಾಜ್ ಬಣದಿಂದಲೂ ಪ್ರತಿಭಟನೆ ನಡೆಯಲಿದೆ.
ರಾಜ್ಯದ ನಾನಾ ಭಾಗದಿಂದ ಕರವೇ ಕಾರ್ಯಕರ್ತರು ಬೆಳಗಾವಿಗೆ ಆಗಮಿಸುತ್ತಿದ್ದು, ನಾಡದ್ರೋಹಿ ಎಂಇಎಸ್ ನಿಷೇಧಿಸಬೇಕು. ಎಂಇಎಸ್ ಪುಂಡರನ್ನ ಗುಂಡಾಕಾಯ್ದೆ ಅಡಿ ಬಂಧಿಸಿ, ಗಡಿಪಾರು ಮಾಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಲಿದ್ದಾರೆ.
ಇನ್ನು ಹೋರಾಟವನ್ನ ತಡೆಯಲು ಕಲಂ 144ರ ಅಡಿಯಲ್ಲಿ ಬೆಳಗಾವಿಯಲ್ಲಿ ನಿಷೇದಾಜ್ಞೆ ಜಾರಿ ಮಾಡಲಾಗಿದ್ದು, ಬೆಳಗಾವಿ ನಗರದಾದ್ಯಂತ ಬೀಗಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ. ನಿಷೇದಾಜ್ಞೆ ಜಾರಿ ಇರುವುದರಿಂದ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಟೋಲ್ ಬಳಿ ಕರವೇ ಕಾರ್ಯಕರ್ತರನ್ನ ಪೊಲೀಸರು ತಡೆಯುವ ಸಾಧ್ಯತೆ ದಟ್ಟವಾಗಿದೆ.