ಕೂಗು ನಿಮ್ಮದು ಧ್ವನಿ ನಮ್ಮದು

ಹೆಬ್ಬಾಳದಲ್ಲಿ ನಲವತ್ತು ಸಾವಿರ T.V ಹಂಚಿದ ಬೈರತಿ ಸುರೇಶ್‌

ಬೆಂಗಳೂರು: ಕೊರೋನಾ ಅವಧಿಯಲ್ಲಿ ಬೆಡ್‌, ಆಕ್ಸಿಜನ್‌ ಸಿಗದೆ ಪರದಾಡುತ್ತಿದ್ದ ಹೆಬ್ಬಾಳ ಕ್ಷೇತ್ರದ ನಾಗರಿಕರಿಗಾಗಿ ₹1 ಕೋಟಿ ವೆಚ್ಚದಲ್ಲಿ ಉಚಿತ ಆಸ್ಪತ್ರೆಯನ್ನೇ ನಿರ್ಮಾಣ ಮಾಡಿದ್ದ, ಸಾವಿರಾರು ವಿದ್ಯಾರ್ಥಿಗಳ ಶಾಲಾ ಶುಲ್ಕ ಭರಿಸಿದ್ದ ವ್ಯಕ್ತಿ ಹೆಬ್ಬಾಳ ಶಾಸಕ ಬೈರತಿ ಸುರೇಶ್‌. ಸರ್ಕಾರಿ ಅನುದಾನ ಮಾತ್ರವೇ ನೆಚ್ಚಿಕೊಳ್ಳದೆ ಸ್ವಂತ ಹಣದಲ್ಲಿ ಸಾಲು-ಸಾಲು ಜನಪರ ಕೆಲಸಗಳ ಮೂಲಕ ಗುರುತಿಸಿಕೊಂಡವರು. ಇದೀಗ ಮತ್ತೊಮ್ಮೆ ಇಂತಹದ್ದೇ ಕಾರಣಕ್ಕೆ ಸುದ್ದಿಯಾಗಿದ್ದಾರೆ. ಕ್ಷೇತ್ರದಲ್ಲಿ ಸ್ಮಾರ್ಚ್‌ ಟಿ.ವಿ ಇಲ್ಲದ 40 ಸಾವಿರದಷ್ಟುಮನೆಗಳಿಗೆ ಸ್ವಂತ ಹಣದಲ್ಲಿ ಟಿ.ವಿಗಳನ್ನು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.ಈ ಸ್ಮಾರ್ಟ್ ಟೆಲಿವಿಜನ್‌ ವಿತರಣೆಯ ಉದ್ದೇಶ, ಪ್ರೇರಣೆ, ಟಿ.ವಿ ಪಡೆಯಲು ಮಾನದಂಡ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಬೈರತಿ ಸುರೇಶ್‌ ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಕೊರೋನಾದಿಂದಾಗಿ ಆನ್‌ಲೈನ್‌ ತರಗತಿ ಇತ್ತು. ಈ ವೇಳೆ ಶಾಲಾ-ಕಾಲೇಜಿನ ಮಕ್ಕಳು ಮೊಬೈಲ್‌, ಕಂಪ್ಯೂಟರ್‌, ಸ್ಮಾರ್ಚ್‌ ಟಿವಿ ಇಲ್ಲದೆ ಸಮಸ್ಯೆ ಅನುಭವಿಸುತ್ತಿದ್ದರು. ಹಾಗಾಗಿ ನಿಮಗೆಲ್ಲಾ ಟ್ಯಾಬ್‌ ಅಥವಾ ಸ್ಮಾರ್ಟ್ ಟಿವಿ ಕೊಡುತ್ತೇನೆ ಎಂದು ಭರವಸೆ ನೀಡಿದ್ದೆ. ಇದೀಗ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತಿದೆ. ಆದ್ದರಿಂದ ಸ್ಮಾರ್ಟ್ ಟಿವಿ ಇಲ್ಲದವರಿಗೆ ಸ್ವಂತ ಹಣದಲ್ಲಿ ಸ್ಮಾರ್ಟ್ ಟಿವಿ ನೀಡಲು ಮುಂದಾಗಿದ್ದೇನೆ.

ಈಗ ಕೊರೋನಾ ಆನ್‌ಲೈನ್‌ ತರಗತಿಗಳು ಬಹುತೇಕ ಮುಗಿದಿವೆಯಲ್ಲಾ?

ಕೊರೋನಾ ಆನ್‌ಲೈನ್‌ ತರಗತಿಗಳು ಮುಗಿದರೂ ವಿದ್ಯಾಭ್ಯಾಸ ಮುಂದುವರೆಸುವ ಬಡ ವಿದ್ಯಾರ್ಥಿಗಳಿಗೆ ಒಂದಲ್ಲಾ ಒಂದು ಹಂತದಲ್ಲಿ ಆನ್‌ಲೈನ್‌ ತರಗತಿ ಅಗತ್ಯ ಬರಬಹುದು. ಎಲ್‌ಕೆಜಿಯಿಂದ ಎಂಬಿಬಿಎಸ್‌ ಓದುವ ವಿದ್ಯಾರ್ಥಿಗಳವರೆಗೆ ಸ್ಮಾರ್ಟ್ ಟಿ.ವಿ ಇಲ್ಲದ ಪ್ರತಿಯೊಬ್ಬರೂ ಅರ್ಜಿ ಸಲ್ಲಿಸಲು ತಿಳಿಸಿದ್ದೇವೆ. ಬಡ ಮಕ್ಕಳು ಉನ್ನತ ವ್ಯಾಸಂಗ ಮಾಡುವಾಗ ಅವರಿಗೆ ಯಾವುದೇ ಕೊರತೆಯೂ ಅಡ್ಡಿಯಾಗಬಾರದು.

ಎಷ್ಟುಮಂದಿಗೆ ವಿತರಣೆ ಮಾಡುತ್ತೀರಿ? ಮಾನದಂಡವೇನು?

ಸ್ಮಾರ್ಟ್ ಟಿ.ವಿ ಇಲ್ಲದವರು ಯಾರಾರ‍ಯರು ಟಿ.ವಿಗಾಗಿ ಅರ್ಜಿ ಸಲ್ಲಿಸುತ್ತಾರೋ ಅವರಿಗೆಲ್ಲರಿಗೂ ಟಿ.ವಿ. ನೀಡುತ್ತೇನೆ. ಅದಕ್ಕಾಗಿ ವಿಶೇಷ ಮಾನದಂಡದ ಅಂತ ಏನೂ ಇಲ್ಲ. ಈವರೆಗೆ 2,500 ಮಂದಿ ಅರ್ಜಿ ಸಲ್ಲಿಸಿದ್ದು, ವಿತರಣೆ ಮಾಡುತ್ತಿದ್ದೇವೆ. ಇನ್ನೂ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಬರುವ ನಿರೀಕ್ಷೆಯಿದೆ.

ಶಾಲಾ ಮಕ್ಕಳಿರುವ ಮನೆಗಷ್ಟೇ ಸ್ಮಾರ್ಚ್‌ ಟಿ.ವಿ ಸೀಮಿತವೇ?

ಇದು ಮಕ್ಕಳಿಗೆ ಮಾತ್ರವೇ ಅನುಕೂಲವಾಗುವುದಿಲ್ಲ. ಹಿರಿಯ ನಾಗರಿಕರು ಕುಳಿತು ಮನರಂಜನೆ ಪಡೆಯಲು, ದುಡಿದು ಬಳಲಿ ಬಂದ ಶ್ರಮಿಕರು ಒಂದು ತಾಸು ವಿಶ್ರಾಂತಿ ಪಡೆಯಲೂ ಸಹ ಇದು ನೆರವಾಗುತ್ತದೆ. ಹೀಗಾಗಿ ಸ್ಮಾರ್ಟ್ ಟಿವಿ ಇಲ್ಲದ ಎಲ್ಲರೂ ಅರ್ಜಿ ಸಲ್ಲಿಸಬಹುದು. ಜತೆಗೆ ಅಂಗನವಾಡಿ ಕೇಂದ್ರ, ಸಾರ್ವಜನಿಕ ಆಸ್ಪತ್ರೆ ಹಾಗೂ ಸರ್ಕಾರಿ ಶಾಲೆಗಳಿಗೂ ಉಚಿತವಾಗಿ ನೀಡುತ್ತಿದ್ದೇನೆ.

ಈ ಸೌಲಭ್ಯವನ್ನು ಪಡೆಯುವುದು ಹೇಗೆ?

ಈಗಾಗಲೇ ಅರ್ಜಿ ಪಡೆದು ಅರ್ಹರಿಗೆ ವಿತರಣೆ ಆರಂಭಿಸಲಾಗಿದೆ. ಇನ್ನೂ ಆಸಕ್ತ ಅರ್ಹರು ಇದ್ದರೆ, ಕಾಂಗ್ರೆಸ್‌ ಕಚೇರಿ, ನಂ.334, ಆರ್‌.ಟಿ. ನಗರ ಮುಖ್ಯರಸ್ತೆ, ಆರ್‌.ಟಿ.ನಗರ, ಬೆಂಗಳೂರು-560032 ಈ ವಿಳಾಸವನ್ನು ಅಥವಾ ಮಾರುತಿ – 6361535855 ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.

ಬಿಜೆಪಿಯವರು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಹೇಳಿರುವುದಕ್ಕೂ ಬೈರತಿ ಸುರೇಶ್‌ ಮಾಡುತ್ತಿರುವುದಕ್ಕೂ ವ್ಯತ್ಯಾಸವೇನಿದೆ ಎನ್ನುತ್ತಿದ್ದಾರೆ?

ನಾನು ತೆರಿಗೆ ಪಾವತಿಸಿದ ಸ್ವಂತ ಹಾಗೂ ಸ್ವಚ್ಛ ಹಣದಲ್ಲಿ ಮಾಡುತ್ತಿದ್ದೇನೆ. ರಮೇಶ್‌ ಜಾರಕಿಹೊಳಿ ಅವರು .30 ಸಾವಿರ ಕೋಟಿ ತೆರಿಗೆ ಪಾವತಿಸಿದ ಹಣ, ನಿಯತ್ತಾಗಿ ದುಡಿದ ಹಣ ಇದ್ದರೆ ಜನರಿಗೆ ಹಂಚಲಿ. ನನಗಿನ್ನೂ ಪಕ್ಷದ ಟಿಕೆಟ್‌ ಕೂಡ ಘೋಷಣೆಯಾಗಿಲ್ಲ. ನಾನು ಎಲ್ಲವನ್ನೂ ಚೆಕ್‌ನಲ್ಲೇ ಪಾವತಿಸುತ್ತಿದ್ದೇನೆ. ಸಾಧ್ಯವಾದರೆ ಅನುಕರಿಸಲಿ, ಹೊಟ್ಟೆಕಿಚ್ಚು ಬೇಡ. ನಿಮ್ಮ ಈ ಕೆಲಸಕ್ಕೆ ಕ್ಷೇತ್ರದಲ್ಲಿ ಆಕ್ಷೇಪ ವ್ಯಕ್ತವಾಗಿಲ್ಲವೇ?

ನಾನು ಮಾಡುವ ಪ್ರತಿಯೊಂದು ಕೆಲಸಕ್ಕೂ ಮಾಜಿ ಸಚಿವರೊಬ್ಬರು ಅಡ್ಡಗಾಲು ಹಾಕುತ್ತಾರೆ. ಹಕ್ಕುಪತ್ರಗಳಿಗೆ .60 ಲಕ್ಷ ಹಣ ಪಾವತಿಸಿದ ಬಗ್ಗೆಯೂ ಸುದ್ದಿಗೋಷ್ಠಿ ನಡೆಸಿ ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದರು. ಕೊರೋನಾ ಅವಧಿಯಲ್ಲಿ ಅಗತ್ಯವಿರುವವರಿಗೆ ಎಲ್ಲರಿಗೂ ಪಡಿತರ ನೀಡಿದ್ದೇನೆ. ಈ ಪಿಡುಗಿನಿಂದ ಮೃತಪಟ್ಟಪ್ರತಿ ಕುಟುಂಬಕ್ಕೆ .25 ಸಾವಿರ ಪರಿಹಾರ, ಸ್ವಂತ ವೆಚ್ಚದಲ್ಲಿ 14 ಕುಟುಂಬಗಳಿಗೆ ಮನೆ ನಿರ್ಮಾಣ, 400 ಮಂದಿಗೆ ತಲಾ .20 ಸಾವಿರಗಳಂತೆ ಮನೆ ನಿರ್ಮಾಣಕ್ಕೆ .80 ಲಕ್ಷ ಸಹಾಯ, ಹೆಬ್ಬಾಳ ಸರ್ಕಾರಿ ಕಾಲೇಜಿಗೆ .40 ಲಕ್ಷ ಸೇರಿದಂತೆ ಕೋಟ್ಯಂತರ ರುಪಾಯಿ ಸ್ವಂತ ಹಣ ವೆಚ್ಚ ಮಾಡಿದ್ದೇನೆ. ಇದನ್ನೆಲ್ಲ ತಪ್ಪಾಗಿ ಬಿಂಬಿಸುವ ಪ್ರಯತ್ನ ಮಾಡುತ್ತಾರೆ.

error: Content is protected !!