ನಿರೀಕ್ಷೆಯಂತೆ ಸಂಸತ್ತಿನಲ್ಲಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು 2023-24ನೇ ಸಾಲಿನ ಆಯವ್ಯಯ ಮಂಡಿಸಿದ್ದಾರೆ. ಅದರಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಭಾರತ ಸರ್ಕಾರದ ರಕ್ಷಣಾ ಸಚಿವಾಲಯ ಸಿಂಹಪಾಲು ಪಡೆದಿದೆ. ಈ ಹಣಕಾಸು ವರ್ಷದಲ್ಲಿ ರಕ್ಷಣಾ ಇಲಾಖೆ 5.94 ಲಕ್ಷ ಕೋಟಿ ರೂಪಾಯಿ ಮೊತ್ತವನ್ನು ಪಡೆದಿದ್ದು, ಇದು ಯಾವುದೇ ಸಚಿವಾಲಯ ಪಡೆದಿರುವ ಅತ್ಯಧಿಕ ಮೊತ್ತವಾಗಿದೆ.
ಬಂಡವಾಳ ಹೂಡಿಕೆ:
ಈ ಬಾರಿಯ ಬಜೆಟ್‌ನಲ್ಲಿ ರಕ್ಷಣಾ ವೆಚ್ಚಕ್ಕೆ 1.62 ಲಕ್ಷ ಕೋಟಿ ರೂಪಾಯಿ ಒದಗಿಸಲಾಗಿದ್ದು, ಕಳೆದ ವರ್ಷದ 1.50 ಲಕ್ಷ ಕೋಟಿ ರೂಪಾಯಿಗಿಂತಲೂ 10,000 ಕೋಟಿ ಹೆಚ್ಚಾಗಿದೆ.
ನಿವೃತ್ತಿ ವೇತನ:
ಬಜೆಟ್‌ನಲ್ಲಿ 1.38 ಲಕ್ಷ ಕೋಟಿ ರೂಪಾಯಿಗಳನ್ನು ನಿವೃತ್ತ ಸೈನಿಕರ ಪಿಂಚಣಿಗಾಗಿ ಮೀಸಲಿಡಲಾಗಿದೆ. ಕಳೆದ ಬಾರಿ ಈ ಮೊತ್ತ 1.19 ಲಕ್ಷ ಕೋಟಿ ಇತ್ತು.
ಬಂಡವಾಳ ಹೂಡಿಕೆಯ ಮೊತ್ತ ಈ ವರ್ಷ 10%ಕ್ಕಿಂತಲೂ ಹೆಚ್ಚಾಗಿದೆ. ರಕ್ಷಣಾ ಉಪಕರಣಗಳ ಖರೀದಿಯ ಮೊತ್ತದಲ್ಲಿ 68% ಮೊತ್ತ ದೇಶೀಯ ಉದ್ಯಮಗಳಿಂದ ಖರೀದಿಸಲು ಮೀಸಲಿಡಲಾಗಿದೆ. ಕಳೆದ ವರ್ಷ ಈ ಮೊತ್ತ 58% ಆಗಿತ್ತು. ಈ ಹೆಚ್ಚಳ ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ ಯೋಜನೆಗೆ ಉತ್ತೇಜನ ನೀಡಲಿದೆ.
ಬಂಡವಾಳದ ಹಂಚಿಕೆ:
ಭಾರತೀಯ ವಾಯುಪಡೆಗೆ ಬಂಡವಾಳ ಹಂಚಿಕೆಯ ಸಿಂಹಪಾಲು ಲಭ್ಯವಾಗಲಿದ್ದು, 1.62 ಲಕ್ಷ ಕೋಟಿ ರೂಪಾಯಿಗಳ ರಕ್ಷಣಾ ಬಜೆಟ್‌ನ 57,137 ಕೋಟಿ ರೂಪಾಯಿ ವಾಯುಪಡೆಗೆ ಲಭ್ಯವಾಗಲಿದೆ. ಕಳೆದ ಬಜೆಟ್‌ನಲ್ಲಿ ವಾಯುಪಡೆಗೆ 53,749 ಕೋಟಿ ಲಭಿಸಿತ್ತು.
ಎರಡನೇ ಸ್ಥಾನದಲ್ಲಿರುವ ಭಾರತೀಯ ನೌಕಾಪಡೆಗೆ 52,804 ಕೋಟಿ ಲಭ್ಯವಾಗಲಿದ್ದು, ಕಳೆದ ಬಜೆಟ್‌ನಲ್ಲಿ ನೌಕಾಪಡೆ 47,727 ಕೋಟಿ ಪಡೆದುಕೊಂಡಿತ್ತು.
ಮೂರನೇ ಸ್ಥಾನದಲ್ಲಿರುವ ಭಾರತೀಯ ಭೂಸೇನೆಗೆ ಈ ಬಜೆಟ್‌ನಲ್ಲಿ 37,597 ಕೋಟಿ ಲಭಿಸಲಿದೆ. ಕಳೆದ ಬಜೆಟ್‌ನಲ್ಲಿ ಭೂಸೇನೆ 32,597 ಕೋಟಿ ಪಡೆದುಕೊಂಡಿತ್ತು.
ಅಗ್ನಿವೀರ್ ನಿಧಿಗಿಲ್ಲ ತೆರಿಗೆ:
ಭಾರತ ಸರ್ಕಾರ ಸೇನಾ ಭರ್ತಿಗೆ ಅಗ್ನಿಪಥ್ ಯೋಜನೆಯನ್ನು ಜಾರಿಗೆ ತಂದಿದೆ. ಅಗ್ನಿಪಥ್ ಯೋಜನೆಯಡಿ ಸೇನೆಗೆ ದಾಖಲಾಗುವ ಯುವಕರನ್ನು ಅಗ್ನಿವೀರರೆಂದು ಕರೆಯಲಾಗುತ್ತದೆ. ಅವರಿಗೆ ಅಗ್ನಿವೀರ್ ಕಾರ್ಪಸ್ ಫಂಡ್ ಎಂಬ ನಿಧಿಯ ಮೂಲಕ ದೊರೆಯುವ ಮೊತ್ತಕ್ಕೆ ತೆರಿಗೆಯಿಂದ ವಿನಾಯಿತಿ ನೀಡುವುದಾಗಿ ಕೇಂದ್ರ ಬಜೆಟ್ ತಿಳಿಸಿದೆ. ಅಗ್ನಿವೀರರ ಕೊಡುಗೆಯನ್ನು ಗಮನಿಸಿ, ಅವರಿಗೆ ಪೂರ್ಣ ಮೊತ್ತವನ್ನು ಪಡೆದುಕೊಳ್ಳುವ ಅನುಮತಿ ನೀಡಲಾಗುತ್ತಿದೆ.
ಇನ್ನು ಕೇಂದ್ರ ಆಯವ್ಯಯದಲ್ಲಿ ಗಡಿ ರಸ್ತೆಗಳ ಸಂಸ್ಥೆಗೆ (ಬಾರ್ಡರ್ ರೋಡ್ಸ್ ಆರ್ಗನೈಸೇಶನ್ – ಬಿಆರ್‌ಓ) 5,000 ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ. ಭಾರತೀಯ ಸೇನೆಯ ಅಂಗವಾಗಿರುವ ಈ ಸಂಸ್ಥೆ ಗಡಿಯಲ್ಲಿ ಸೇನಾ ಸಾಗಾಟಕ್ಕೆ ಅನುಕೂಲಕರವಾದ ರಸ್ತೆಗಳನ್ನು ನಿರ್ಮಿಸುತ್ತದೆ. 2022-23ರಲ್ಲಿ ನೀಡಿದ 3,500 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ, ಈ ವರ್ಷ ಬಿಆರ್‌ಓಗೆ 43% ಹೆಚ್ಚಳ ನೀಡಲಾಗಿದೆ.
2023-24ನೇ ಸಾಲಿನ ಕೇಂದ್ರ ಬಜೆಟ್ 45,03,097 ಕೋಟಿ ಮೌಲ್ಯ ಹೊಂದಿದೆ. ಅದರಲ್ಲಿ ರಕ್ಷಣಾ ಸಚಿವಾಲಯಕ್ಕೆ ಒಟ್ಟು 5,93,537.64 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ. ಇದು ಒಟ್ಟಾರೆ ಕೇಂದ್ರ ಬಜೆಟ್‌ನ 13.18% ಆಗಿದೆ.