ಬೆಳಗಾವಿ: ಬಿಜೆಪಿ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಕುಂದಾನಗರಿ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಜನ ಸೇವಕ ಸಮಾವೇಶದ ಸಮಾರೋಪದಲ್ಲಿ ಶಾ ಒಂದೂವರೆ ಲಕ್ಷ ಜನರನ್ನ ಉದ್ದೇಶಿಸಿ ಮಾತನಾಡಲಿದ್ದಾರೆ. ಅದರಲ್ಲೂ ಗ್ರಾಮ ಪಂಚಾಯತಿಯಲ್ಲಿ ಗೆದ್ದ 5 ಸಾವಿರ ಜನ ನೂತನ ಸದಸ್ಯರಿಗೆ ಅಮಿತ್ ಶಾ ಅಭಿನಂದಿಸಲಿದ್ದಾರೆ. ಅಲ್ಲದೇ ಮುಂಬರುವ ಉಪ ಚುನಾವಣೆಗೆ ಬೆಳಗಾವಿಯಿಂದಲೇ ಕಹಳೆಯನ್ನ ಕೇಸರಿ ನಾಯಕರು ಮೊಳಗಿಸಲಿದ್ದಾರೆ. ಕುಂದಾನಗರಿ ಬೆಳಗಾವಿಗೆ ಬಿಜೆಪಿ ಚಾಣಕ್ಯ ಅಮಿತ್ ಶಾ, ಗೃಹ ಸಚಿವರಾದ ಬಳಿಕ ಮೊದಲ ಬಾರಿಗೆ ಆಗಮಿಸುತ್ತಿದ್ದಾರೆ. ಅಮಿತ್ ಶಾ ಆಗಮನ ಹಿನ್ನೆಲೆ ಕುಂದಾನಗರಿ ಬೆಳಗಾವಿ ಕೇಸರಿಮಯವಾಗಿ ರೂಪಗೊಂಡಿದೆ. ಸಂಜೆ 4 ಗಂಟೆ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಜನಸೇವಕ ಸಮಾವೇಶದ ಸಮಾರೋಪ ನಡೆಯಲಿದೆ. ಈ ಸಮಾವೇಶಕ್ಕೆ ಸಿಎಂ ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಅರುಣ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ, ಕೇಂದ್ರ ಸಚಿವರು, ಡಿಸಿಎಂ, ಸಚಿವರು, ಶಾಸಕರು ಆದಿಯಾಗಿ ಎರಡೂವರೆ ಲಕ್ಷ ಜನರು ಸಾಕ್ಷಿಯಾಗಲಿದ್ದಾರೆ.
ಇನ್ನು ಅಮಿತ್ ಶಾ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ ಬೆಂಗಳೂರಿನಿಂದ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅಮಿತ್ ಶಾ ನೇರವಾಗಿ ಬಾಗಲಕೋಟೆ ಜಿಲ್ಲೆಯಲ್ಲಿ ನಿರಾಣಿ ಗ್ರುಪಿನ ಸಕ್ಕರೆ ಕಾರ್ಖಾನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಆ ಬಳಿಕ ಬೆಳಗಾವಿಗೆ ಆಗಮಿಸಲಿರುವ ಅಮಿತ್ ಶಾ ದಿವಂಗತ ಸುರೇಶ್ ಅಂಗಡಿ ಅವರ ಮನೆಗೆ ಭೇಟಿ ನೀಡಿ ಕುಟುಂಬಂಸ್ಥರಿಗೆ ಸಾಂತ್ವನ ಹೇಳುವರು. ಅನಂತರ ಸಮಾರೋಪ ಸಮಾವೇಶದಲ್ಲಿ ಪಾಲ್ಗೊಂಡು ಅಲ್ಲಿಂದ ಕೆಎಲ್ಇ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಈ ಎಲ್ಲ ಕಾರ್ಯಕ್ರಮಗಳ ನಂತರ ಜಿಲ್ಲಾ ಹಾಗೂ ರಾಜ್ಯ ಬಿಜೆಪಿ ಮುಖಂಡರೊಂದಿಗ ಶಾ ಸಭೆ ನಡೆಸಲಿದ್ದಾರೆ. ಬಿಜೆಪಿ ಚಾಣಕ್ಯ ಅಮಿತ್ ಶಾ ಉತ್ತರ ಕರ್ನಾಟಕ ಪ್ರವಾಸ ಕೈಗೊಳ್ಳುವ ಮೂಲಕ ಬಿಜೆಪಿ ಪಾಳ್ಯದಲ್ಲಿ ಉತ್ಸಾಹ ಇನ್ನೂ ಹೆಚ್ಚಾಗಲಿದೆ. ಒಟ್ಟಿನಲ್ಲಿ ಬಿಜೆಪಿ ಚಾಣಕ್ಯ ಅಮಿತ್ ಶಾ ಕುಂದಾನಗರಿ ಬೆಳಗಾವಿಯಿಂದಲೇ ಮುಂಬರುವ ಉಪ ಚುನಾವಣೆಗೆ ಪ್ರಚಾರದ ಬುನಾದಿ ಹಾಕುತ್ತಿದ್ದಾರೆ. ಶಾ ಸ್ವಾಗತಕ್ಕೆ ಕುಂದಾನಗರಿ ಬೆಳಗಾವಿ ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ.