ಕೂಗು ನಿಮ್ಮದು ಧ್ವನಿ ನಮ್ಮದು

ಬಿಜೆಪಿ ಅವಲೋಕನ ಸಭೆ: ಸೋಲಿಗೆ ಕಾರಣಗಳನ್ನ ಎಳೆಎಳೆಯಾಗಿ ಬಿಚ್ಚಿಟ್ಟ ಪರಾಜಿತ ಅಭ್ಯರ್ಥಿಗಳು

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದು ಒಂದು ತಿಂಗಳಾಗುವ ಹೊತ್ತಿನಲ್ಲಿ ಬಿಜೆಪಿಯು ನೂತನ ಶಾಸಕರು ಮತ್ತು ಪರಾಜಿತ ಅಭ್ಯರ್ಥಿಗಳ ಅವಲೋಕನ ಸಭೆಯನ್ನು ಗುರುವಾರ ಮಾಡಲಾಗಿದೆ. ನಗರದ ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪರಾಜಿತ ಅಭ್ಯರ್ಥಿಗಳು ಬಿಜೆಪಿ ಸೋಲಿಗೆ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ. ಜೊತೆಗೆ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಬಿಜೆಪಿ ಸೋಲಿಗೆ ಪರಾಜಿತ ಅಭ್ಯರ್ಥಿಗಳ ಕಾರಣಗಳು?
*ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳು
*ಒಳ ಮೀಸಲಾತಿ ಹಂಚಿಕೆಯ ಒಳ ಏಟು
*40% ಕಮೀಷನ್ ಆರೋಪ ಸೇರಿ ಕೆಲವು ಭ್ರಷ್ಟಾಚಾರ ಆರೋಪ ಪ್ರಕರಣಗಳು
*ಅಲ್ಲಲ್ಲಿ ಬೀಸಿದ ವಿರೋಧಿ ಅಲೆ
*ಟಿಕೆಟ್ ಹಂಚಿಕೆಯಲ್ಲಿನ ವಿಳಂಬ
*ಹೈಕಮಾಂಡ್ ಮೇಲಿನ ಹೆಚ್ಚಿನ ಅವಲಂಬನೆ
*ಸಚಿವರು ಸರ್ಕಾರ ಇದ್ದಾಗ ಸರಿಯಾಗಿ ಸ್ಪಂದಿಸಲಿಲ್ಲ
*ಪಕ್ಷದ ಮುಖಂಡರು ಅಭ್ಯರ್ಥಿಗಳ ಮಾತಿಗೆ ಬೆಲೆ ಕೊಡಲಿಲ್ಲ
*ಲಕ್ಷ್ಮಣ ಸವದಿ ಪಕ್ಷ ಬಿಟ್ಟಿದ್ದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೊಡೆತ ಆಯಿತು
*ಚುನಾವಣೆ ಸಂದರ್ಭದಲ್ಲಿ ಅಕ್ಕಿ ಕೊಡುವುದನ್ನು ಕಡಿಮೆ ಮಾಡಿದ್ದೂ ಪ್ರಮುಖ ಕಾರಣ
*ನಾಯಕರು ಮಾಡಿರುವ ತಪ್ಪಿನಿಂದ ನಾವು ಬಲಿಯಾದೆವು ಎಂದು ಪರಾಜಿತ ಅಭ್ಯರ್ಥಿಗಳು ಅಸಮಾಧಾನ ಹೊರ ಹಾಕಿದ್ದಾರೆ.

ಸೋಲಿನಿಂದ ಯಾರೂ ಧೃತಿಗೆಡಬೇಡಿ: ಬಿಎಸ್ ಯಡಿಯೂರಪ್ಪ ಕಿವಿಮಾತು
ಸಭೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮಾತನಾಡಿ, ವಿಧಾನಸಭಾ ಚುನಾವಣೆ ಸೋಲಿನಿಂದ ಯಾರೂ ಧೃತಿಗೆಡಬೇಡಿ. ರಾಜ್ಯದಲ್ಲಿ 2 ಸ್ಥಾನದಿಂದ ಇಲ್ಲಿಯವರೆಗೆ ಪಕ್ಷ ಕಟ್ಟಿ ಬೆಳೆಸಿದ್ದೇನೆ. ವಿಧಾನಸಭೆಯಲ್ಲಿ ಬಿಜೆಪಿಯ ಇಬ್ಬರು ಶಾಸಕರ ಮಾತ್ರ ಇದ್ದೆವು. ಬಿಜೆಪಿ ಶಾಸಕರಾಗಿದ್ದ ವಸಂತ ಬಂಗೇರ ಪಕ್ಷ ಬಿಟ್ಟು ಹೋದರು. ಆಗ ನಾನು ಒಬ್ಬನೇ ಸದನದಲ್ಲಿ ನಿಂತು ಹೋರಾಟ ಮಾಡಿದ್ದೇನೆ.

ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಿ. ನರೇಂದ್ರ ಮೋದಿ ಕಾರ್ಯಕ್ರಮಗಳನ್ನು ಮನೆಮನೆಗೆ ತಲುಪಿಸಿ. ಕೇಂದ್ರದಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರೋಣ ಎಂದು ಪರಾಜಿತ ಬಿಜೆಪಿ ಅಭ್ಯರ್ಥಿಗಳ ಸಭೆಯಲ್ಲಿ ಕಿವಿಮಾತು ಹೇಳಿದರು.

ನನ್ನ ಮತ್ತು ಚಿಂತಾಮಣಿ ಅಭ್ಯರ್ಥಿ ಸೋಲಿಗೆ ಸುಧಾಕರ್ ಕಾರಣ: ಎಂಟಿಬಿ ನಾಗರಾಜ್ ಮಾಜಿ ಸಚಿವ ಎಂಟಿಬಿ ನಾಗರಾಜ್ ಮಾತನಾಡಿ, ಕಾಂಗ್ರೆಸ್ನಲ್ಲಿದ್ದಾಗ 3 ಬಾರಿ ಗೆದ್ದಿದ್ದೆ, ಬಿಜೆಪಿಗೆ ಬಂದು 2 ಬಾರಿ ಸೋತೆ. ಬಿ.ಎಸ್.ಯಡಿಯೂರಪ್ಪ ಮಾತಿಗೆ ಗೌರವ ನೀಡಿ ನಾನು ಬಿಜೆಪಿ ಸೇರಿದ್ದೆ. ಬಿಜೆಪಿ ಸೇರಿದ ನಂತರ 2 ಬಾರಿ ಸ್ಪರ್ಧಿಸಿ 2 ಬಾರಿಯೂ ಸೋತಿದ್ದೇನೆ ಎಂದರು.

ಡಾ. ಸುಧಾಕರ್ಗೆ ಉಸ್ತುವಾರಿ ನೀಡಿದರು. ಆತನೂ ಸೋತ, ನಮ್ಮನ್ನೂ ಸೋಲಿಸಿದ. ಉಸ್ತುವಾರಿಯನ್ನು ಸಮರ್ಥವಾಗಿ ಸುಧಾಕರ್‌ ನಿಭಾಯಿಸಲಿಲ್ಲ. ನಾನು ಹಣ, ಅಧಿಕಾರದ ಆಮಿಷಕ್ಕೆ ಬಿಜೆಪಿಗೆ ಬಂದವನಲ್ಲ. ನನ್ನ ಮತ್ತು ಚಿಂತಾಮಣಿ ಅಭ್ಯರ್ಥಿ ಸೋಲಿಗೆ ಸುಧಾಕರ್ ಕಾರಣ ಎಂದು ವಾಗ್ದಾಳಿ ಮಾಡಿದರು.

40% ಕಮಿಷನ್ ಆರೋಪಕ್ಕೆ ಕೌಂಟರ್ ಅಟ್ಯಾಕ್ ಮಾಡಿಲ್ಲ. ನಾವು ಕೇವಲ ಸಿದ್ದರಾಮಯ್ಯಗೆ ಅಷ್ಟೇ ಬೈದೆವು. ನಮ್ಮಲ್ಲಿ ಮಾಜಿ ಸಚಿವರು, ಮಾಜಿ ಶಾಸಕರು ಸರಿಯಾಗಿ ಆರೋಪಕ್ಕೆ ತಿರುಗೇಟು ಕೊಟ್ಟಿಲ್ಲ. ಚುನಾವಣೆ ಸಂದರ್ಭದಲ್ಲಿ ಅಕ್ಕಿ ಕೊಡುವುದನ್ನು ಕಡಿಮೆ ಮಾಡಿದ್ದೂ ಪ್ರಮುಖ ಕಾರಣಗಳಲ್ಲಿ ಒಂದು. ಪಕ್ಷದ ಕಾರ್ಯಕರ್ತರನ್ನು ಸಚಿವರು ಗಣನೆಗೆ ತೆಗೆದುಕೊಂಡಿಲ್ಲ. ಕಾರ್ಯಕರ್ತರ ಆಗು ಹೋಗುಗಳನ್ನು ಉಸ್ತುವಾರಿ ಸಚಿವರು ಕೇಳಲಿಲ್ಲ. ಇದರಿಂದ ಕಾರ್ಯಕರ್ತರು ಸಿಟ್ಟಾಗಿದ್ದರು. ಹತ್ತು ಕೆಜಿ ಅಕ್ಕಿ ಗ್ಯಾರಂಟಿಯೂ ನನ್ನ ಸೋಲಿಗೆ ಕಾರಣವಾಗಿ ಎಂದು ಹೇಳಿದರು.

error: Content is protected !!