ಮಂಗಳೂರು: ಬೆಂಗಳೂರಿನ ಮಾಡೆಲ್ ಗಳು ಬಿಕಿನಿ ಧರಿಸಿ, ದಕ್ಷಿಣ ಕನ್ನಡ ಜಿಲ್ಲೆಯ ದೇವಸ್ಥಾನಕ್ಕೆ ಸಂಬಂಧಪಟ್ಟ ಪವಿತ್ರ ದೇವರಗುಂಡಿ ಫಾಲ್ಸ್ ಬಳಿ ಫೋಟೊ ಶೂಟ್ ಮಾಡಿಸಿಕೊಂಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.
ತಿಂಗಳ ಹಿಂದೆ ಗುಪ್ತವಾಗಿ ಬಂದು ಫೋಟೊ ಶೂಟ್ ಮಾಡಿಕೊಂಡಿರುವ ಫೋಟೊ, ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಸುಳ್ಯ ತಾಲೂಕಿನ ತೋಡಿಕಾನ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಸೇರಿದ ದೇವರಗುಂಡಿ ಜಲಪಾತದಲ್ಲಿ ಸ್ಥಳೀಯರು ಸ್ನಾನ ಮಾಡುವುದಿಲ್ಲ. ಸಾಕ್ಷಾತ್ ಶಿವನೇ ಈ ಜಲಪಾತದಲ್ಲಿ ಸ್ನಾನಕ್ಕೆ ಬರುತ್ತಾನೆಂಬ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ಪಾವಿತ್ರ್ಯ ಕಾರಣದಿಂದ ದೇವರಗುಂಡಿ ಫಾಲ್ಸ್ ನಲ್ಲಿ ಸ್ಥಳೀಯರು ಸ್ನಾನ ಮಾಡುವುದಿಲ್ಲ.
ಆದರೆ ಇದೀಗ ಬೆಂಗಳೂರಿನ ಬಿಕಿನಿ ಸುಂದರಿಯರು ಅರೆಬೆತ್ತಲಾಗಿ ಪೋಟೋ ಶೂಟ್ ಮಾಡಿಸಿಕೊಂಡಿದ್ದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಮಾಡೆಲ್ ಬೃಂದಾ ಅರಸ್ ಸೇರಿ ಇಬ್ಬರು ಮಾಡೆಲ್ ಗಳು ಈ ಪೋಟೋ ಶೂಟ್ ಮಾಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಈಗ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇಂಥ ಪವಿತ್ರ ಸ್ಥಳದಲ್ಲಿ ಫೋಟೊ ಶೂಟ್ ಮಾಡಿಸಿ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಸ್ಥಳೀಯರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.