ಕೂಗು ನಿಮ್ಮದು ಧ್ವನಿ ನಮ್ಮದು

ಕಲಬುರಗಿ ನಗರದಲ್ಲಿ ಹೆಚ್ಚಾದ ಬೈಕ್ ಕಳ್ಳತನ ಪ್ರಕರಣಗಳು; ಲಕ್ಷಾಂತರ ಮೌಲ್ಯದ ಬೈಕ್ ಕಳೆದುಕೊಂಡು ಕಂಗಾಲಾಗುತ್ತಿರೋ ಜನ

ಕಲಬುರಗಿ: ಜಿಲ್ಲೆಯ ದೇವಿ ನಗರದಲ್ಲಿ ಕಳೆದ ಕೆಲ ದಿನಗಳ ಹಿಂದೆ ರಾತ್ರಿ 12 ಗಂಟೆ ಸಮಯದಲ್ಲಿ ಕಳ್ಳನೋರ್ವ ಮನೆ ಮುಂದೆ ನಿಲ್ಲಿಸಿದ ಬೈಕ್ನ್ನು ಕದ್ದುಕೊಂಡು ಹೋಗಿದ್ದಾನೆ. ಇದೀಗ ಸುತ್ತಮುತ್ತಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಹೌದು ಯಾಕಂದ್ರೆ ಏರಿಯಾದಲ್ಲಿ ಯಾವಾಗಲೋ ಒಂದು ಬೈಕ್ ಕಳ್ಳತನ(Bike theft)ವಾಗಿದ್ದರೆ, ಜನರು ಸುಮ್ಮನಿರುತ್ತಿದ್ದರು. ಆದ್ರೆ, ಮೇಲಿಂದ ಮೇಲೆ ಈ ಏರಿಯಾಗಳಲ್ಲಿ ಬೈಕ್ ಕಳ್ಳತನವಾಗುತ್ತಲೇ ಇದ್ದಾವೆ. ಅದರಲ್ಲೂ ಕಳೆದ ಕೆಲ ದಿನಗಳಿಂದ ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಸಾರ್ವಜನಿಕರ ಆತಂಕ ಹೆಚ್ಚಾಗುವಂತೆ ಮಾಡಿದೆ.

ಕಳೆದ ತಿಂಗಳಲ್ಲಿ ಹತ್ತಕ್ಕೂ ಹೆಚ್ಚು ಬೈಕ್ಗಳು ಈ ಏರಿಯಾದಲ್ಲಿ ಕಳ್ಳತನವಾಗಿವೆ. ಬೈಕ್ ಮಾತ್ರವಲ್ಲಾ, ಆಟೋ, ಮನೆಯಲ್ಲಿರುವ ಗ್ಯಾಸ್ ಸಿಲಿಂಡರ್, ಕಬ್ಬಿಣದ ಗೇಟ್ಗಳನ್ನು ಕೂಡ ಕಳ್ಳರು ಯಾರ ಅಂಜಿಕೆ, ಅಳುಕಿಲ್ಲದೇ ಕದ್ದುಕೊಂಡು ಹೋಗುತ್ತಿದ್ದಾರಂತೆ. ಇದೀಗ ಒಂದು ಬೈಕ್ ಖರೀದಿಸಬೇಕಾದ್ರೆ, ಕನಿಷ್ಟ ಒಂದು ಲಕ್ಷ ರೂಪಾಯಿ ಹಣ ಬೇಕು. ಮಧ್ಯಮ ವರ್ಗದವರೇ ಹೆಚ್ಚಾಗಿರುವ ಅನೇಕರು, ತಮ್ಮ ದೈನಂದಿನ ಕೆಲಸಕ್ಕೆ ಅನಕೂಲವಾಗಲಿ ಅಂತ ಬೈಕ್ಗಳನ್ನು ಖರೀದಿಸಿ ತಂದ್ರೆ, ಕಳ್ಳರು, ಅವುಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದಾರೆ.

ನಕಲಿ ಕೀ ಬಳಸಿ ಬೈಕ್ ಕಳ್ಳತನ

ಇನ್ನು ರಾತ್ರಿ ಮಾತ್ರವಲ್ಲ, ಹಗಲೊತ್ತಿನಲ್ಲಿ ಕೂಡ ಕಲಬುರಗಿ ಕಳ್ಳತನ ನಡೆಯುತ್ತಿದೆಯಂತೆ. ಬೈಕ್​ಗಳನ್ನು ಮನೆ ಮುಂದೆ ನಿಲ್ಲಿಸಿ, ಒಳಗಡೆ ಹೋದ್ರೆ, ಕೆಲವೇ ನಿಮಿಷಗಳಲ್ಲಿ ಕಳ್ಳರು ನಕಲಿ ಕೀ ಗಳನ್ನು ಬಳಸಿ, ಬೈಕ್​ಗಳನ್ನು ಕದ್ದುಕೊಂಡು ಪರಾರಿಯಾಗುತ್ತಿದ್ದಾರಂತೆ. ಅದರಲ್ಲೂ ನಗರದ ಜಿಮ್ಸ್ ಆಸ್ಪತ್ರೆ ಸೇರಿದಂತೆ ಕೆಲ ಮಾಲ್​ಗಳ ಮುಂದೆ ನಿಲ್ಲಿಸಿದ್ದ ಬೈಕ್​ಗಳು ಹೆಚ್ಚು ಕಳ್ಳತನವಾಗುತ್ತಿವೆ. ಇನ್ನು ಮೇಲಿಂದ ಮೇಲೆ ಕಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದರೂ ಕೂಡ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವಂತೆ. ಬೈಕ್ ಕಳ್ಳತನವಾದಾಗ, ಪೊಲೀಸ್ ಠಾಣೆಗೆ ದೂರು ನೀಡಿದ್ರು, ಸರಿಯಾಗಿ ದೂರು ಸ್ವೀಕರಿಸೋದಿಲ್ಲ. ದೂರು ದಾಖಲಾದ್ರು ಕೂಡ ಕಳ್ಳರನ್ನು, ಬೈಕ್​ಗಳನ್ನು ಪತ್ತೆ ಮಾಡುವ ಕೆಲಸವನ್ನು ಪೊಲೀಸರು ಮಾಡ್ತಿಲ್ಲ. ಈ ಭಾಗದಲ್ಲಿ ಸರಿಯಾಗಿ ಬೀಟ್ ವ್ಯವಸ್ಥೆ ಕೂಡ ಇಲ್ಲ. ಇದರಿಂದ ಕಳ್ಳರು, ಯಾರ ಅಂಜಿಕೆ, ಅಳುಕಿಲ್ಲದೇ ತಮ್ಮ ಕಳ್ಳತನ ಕೆಲಸವನ್ನು ಮಾಡ್ತಿದ್ದಾರೆ ಅಂತ ಸಾರ್ವಜನಿಕರು ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ಕೆಲ ದಿನಗಳಿಂದ ಕಳ್ಳರು ಕಲಬುರಗಿ ನಗರದ ನಿವಾಸಿಗಳ ನಿದ್ದೆ ಹಾರುವಂತೆ ಮಾಡಿದ್ದಾರೆ. ಲಕ್ಷಾಂತರ ಮೌಲ್ಯದ ಬೈಕ್​ಗಳನ್ನು ಕದ್ದು ಪರಾರಿಯಾಗುತ್ತಿದ್ದಾರೆ. ಹೀಗಾಗಿ ಪೊಲೀಸರು ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಕಳ್ಳರನ್ನು ಪತ್ತೆ ಮಾಡುವ ಕೆಲಸ ಮಾಡಬೇಕಿದೆ. ಆ ಮೂಲಕ ಸಾರ್ವಜನಿಕರ ನೆಮ್ಮದಿ ಹಾಳಾಗದಂತೆ ನೋಡಿಕೊಳ್ಳುವ ಕೆಲಸ ಮಾಡಬೇಕಿದೆ.

error: Content is protected !!