ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಮತ್ತೆ ಆರಂಭವಾಗುತ್ತಿದೆ. ಸೀಸನ್ 9ಕ್ಕಾಗಿ ತೆರೆ ಮರೆಯಲ್ಲಿ ಕೆಲಸಗಳು ಆರಂಭವಾಗಿದ್ದು, ಈ ಬಾರಿಯೂ ಹತ್ತು ಹಲವು ವಿಶೇಷಗಳಿಂದ ಕೂಡಿರಲಿದೆ. ಪ್ರತಿ ಸಲವೂ ಒಂದೇ ಒಂದು ಬಿಗ್ ಬಾಸ್ ಕನ್ನಡದಲ್ಲಿ ನಡೆಯುತ್ತಿತ್ತು. ಈ ಬಾರಿ ರೆಗ್ಯುಲರ್ ಬಿಗ್ ಬಾಸ್ ಜೊತೆ ಮಿನಿ ಬಿಗ್ ಬಾಸ್ ಕೂಡ ಪ್ರಸಾರವಾಗಲಿದೆಯಂತೆ. ಹಾಗಾಗಿ ಎರಡೆರಡು ಬಿಗ್ ಬಾಸ್ ಗಳನ್ನು ಈ ಬಾರಿ ವೀಕ್ಷಿಸಬಹುದು.
ಓಟಿಟಿಗಾಗಿ ಒಂದು ಬಿಗ್ ಬಾಸ್ ನಡೆದರೆ ಮತ್ತೊಂದು ರೆಗ್ಯುಲರ್ ಕಾರ್ಯಕ್ರಮ ಇದ್ದೇ ಇರುತ್ತದೆಯಂತೆ. ಮಿನಿ ಬಿಗ್ ಬಾಸ್ ಓಟಿಟಿಗಾಗಿ ಆದರೆ, ಮತ್ತೊಂದು ಟಿವಿಯಲ್ಲಿ ಪ್ರಸಾರವಾಗಲಿದೆಯಂತೆ. ಮಿನಿ ಬಿಗ್ ಬಾಸ್ ನಲ್ಲಿ ಪಾಲ್ಗೊಂಡು ಇಬ್ಬರಿಗೆ ರೆಗ್ಯುಲರ್ ಬಿಗ್ ಬಾಸ್ ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಎರಡೂ ಶೋಗಳಿಗೂ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಲಿದ್ದಾರೆ.
ಈಗಾಗಲೇ ಬಿಗ್ ಬಾಸ್ ಮನೆ ಒಳಗೆ ಕಳುಹಿಸಲು ಸ್ಪರ್ಧಿಗಳ ಹುಡುಕಾಟ ಆರಂಭವಾಗಿದ್ದು, ರೆಗ್ಯುಲರ್ ಬಿಗ್ ಬಾಸ್ ಗಿಂತ ಮಿನಿಗೆ ಸ್ಪೆಷಲ್ ಸ್ಪರ್ಧಿಗಳು ಇರಲಿದ್ದಾರಂತೆ. ವಿವಿಧ ಕ್ಷೇತ್ರಗಳಲ್ಲಿ ಫೇಮಸ್ ಆಗಿರುವವರನ್ನು ಹುಡುಕಲಾಗುತ್ತಿದ್ದು, ಈಗಾಗಲೇ ಕೆಲವರು ಹೆಸರು ಕೂಡ ಕೇಳಿ ಬರುತ್ತಿವೆ. ಎರಡೆರಡು ಬಿಗ್ ಬಾಸ್ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ಅವಕಾಶ ಸಿಗಲಿದೆ ಎನ್ನುವುದಂತೂ ಪಕ್ಕಾ ಆಗಿದೆ.