ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ತಮಗೆ ಟಿಕೆಟ್ ನೀಡಿದಕ್ಕೆ ಚಾಮರಾಜಪೇಟೆ ಬಿಜೆಪಿ ಅಭ್ಯರ್ಥಿ ಭಾಸ್ಕರ್ ರಾವ್ ಬಿಜೆಪಿ ಪಕ್ಷಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಬಿಜೆಪಿ ಟಿಕೆಟ್ ಘೋಷಿಸಿದ್ದಕ್ಕೆ ಪಕ್ಷದ ವರಿಷ್ಠರಿಗೆ ನಾನು ಚಿರಋಣಿ. ಬಿಜೆಪಿಯಲ್ಲಿ ಸಿದ್ಧಾಂತ, ರಾಷ್ಟ್ರೀಯತೆ ಇರುವುದರಿಂದ ಸೇರಿದ್ದೇನೆ. ಕಳೆದ 30 ವರ್ಷದಿಂದ ಚಾಮರಾಜಪೇಟೆಯಲ್ಲಿ ಬಿಜೆಪಿ ಗೆದ್ದಿಲ್ಲ. ಚಾಮರಾಜಪೇಟೆಗೆ ನಾನು ಹೊಸಬನಲ್ಲ, ನಾನು ಇಲ್ಲಿನ ನಿವಾಸಿ ಎಂದು ತಿಳಿಸಿದರು.
ಬಿಜೆಪಿ 189 ಟಿಕೆಟ್ ಘೋಷಣೆ ಮಾಡಿದೆ. ನನಗೂ ಸುವರ್ಣ ಅವಕಾಶ ಸಿಕ್ಕಿದೆ. ನರೇಂದ್ರ ಮೋದಿ, ಅಮಿತ್ ಶಾ, ನಡ್ಡಾ, ಅರುಣ್ ಸಿಂಗ್, ಬಿಎಸ್ ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಸೇರಿದಂತೆ ರಾಜ್ಯ ನಾಯಕರಿಗೆ ನಾನು ಚಿರಋಣಿ. ಬಿಜೆಪಿ ಪಕ್ಷದಲ್ಲಿ ಸಿದ್ದಾಂತ, ರಾಷ್ಟ್ರೀಯತೆ ಇರೋದ್ರಿಂದ ಪಕ್ಷಕ್ಕೆ ಸೇರಿದ್ದೇನೆ. 30 ವರ್ಷದಿಂದ ಚಾಮರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿಲ್ಲ ಮೇ 10 ನೇ ತಾರೀಖು ಉತ್ತರ ಸಿಗುತ್ತೆ. ನಾನು ಸಹ ಚಾಮರಾಜಪೇಟೆ ನಿವಾಸಿ. ಚಾಮರಾಜಪೇಟೆಗೆ ಹೊಸಬನಲ್ಲ, ನಾನು ಚಾಮರಾಜಪೇಟೆಯಲ್ಲೇ ನನ್ನ ಕಚೇರಿ ಮಾಡ್ತಿದ್ದೇನೆ ಎಂದರು.
ಇನ್ನು ಇದೇ ವೇಳೆ ಚಾಮರಾಜಪೇಟೆಯಲ್ಲಿ ಟಿಕೆಟ್ ಆಕಾಂಕ್ಷಿ ಸುನೀಲ್ ವೆಂಕಟೇಶ್ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಭಾಸ್ಕರ್ ರಾವ್, ಯಾವುದೇ ಅಸಮಾಧಾನವಿಲ್ಲ. ಹಾಗೇನಾದ್ರೂ ಇದ್ರೆ ಆ ನಾಯಕರನ್ನ ಭೇಟಿ ಮಾಡ್ತೀನಿ. ನಾಯಕರ ಮನವೊಲಿಸುವ ಪ್ರಯತ್ನ ಮಾಡ್ತೀನಿ. ಎಲ್ಲಾ ನಾಯಕರ ಬೆಂಬಲವಿದೆ. ಒಟ್ಟಾಗಿ ಗೆಲ್ಲುವ ವಿಶ್ವಾಸವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, 189 ಮಂದಿ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಲಾಗಿದೆ. ಹಲವು ಸುತ್ತುಗಳ ಸಭೆ, ಸುದೀರ್ಘ ಸಮಾಲೋಚನೆಗಳ ಬಳಿಕ ಮಂಗಳವಾರ ರಾತ್ರಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಹೈಕಮಾಂಡ್ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಪಟ್ಟಿ ಬಿಡುಗಡೆಗೂ ಮುನ್ನ ಮಾತನಾಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜ್ಯದ 31 ಜಿಲ್ಲೆಗಳಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಸುಮಾರು 25 ಸಾವಿರ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ್ದೇವೆ ಎಂದು ಹೇಳಿದರು. ಕರ್ನಾಟಕ ರಾಜ್ಯ ಬಿಜೆಪಿ ಘಟಕದ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಗಳಾದ ಧರ್ಮೇಂದ್ರ ಪ್ರಧಾನ್, ಮನ್ಸುಖ್ ಮಾಂಡವೀಯ, ರಾಜ್ಯ ಬಿಜೆಪಿ ಸಹ ಚುನಾವಣಾ ಉಸ್ತುವಾರಿ ಕೆ.ಅಣ್ಣಾ ಮಲೈ, ಕೇಂದ್ರ ಗಣಿ ಇಲಾಖೆ ಸಚಿವ ಪ್ರಹ್ಲಾದ್ ಜೋಶಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.