ಬೆಂಗಳೂರು:ರಾಜಸ್ಥಾನದಿಂದ ವಿಮಾನದಲ್ಲಿ ಸಿಲಿಕಾನ್ ಸಿಟಿಗೆ ಬಂದು ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಈಗ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ. ವಿಕಾಸ್ ಧವಳದಾಸ್, ದಶರತ್ ಮತ್ತು ವಿಕಾಸ್ ಕುಮಾರ್ ಬಂಧಿತ ಆರೋಪಿಗಳು. ಬಂಧಿತರಿಂದ 33 ಲಕ್ಷ ರೂ. ಮೌಲ್ಯದ ಒಟ್ಟು 26 ಬೈಕ್‍ಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ರಾಜಸ್ಥಾನದಿಂದ ವಿಮಾನದಲ್ಲಿ ಬೆಂಗಳೂರಿಗೆ ಬರುತ್ತಿದ್ದ ಈ ಆರೋಪಿಗಳು ಮನೆ ಮುಂದೆ ನಿಲ್ಲಿಸಿರುವ ವಾಹನಗಳನ್ನ ಟಾರ್ಗೆಟ್ ಮಾಡುತ್ತಿದ್ದರು. ಬೈಕುಗಳನ್ನ ಕದ್ದು ಬೇರೆ ಏರಿಯಾದಲ್ಲಿ ನಿಲ್ಲಿಸಿಬಿಡುತ್ತಿದ್ದರು. ಬಳಿಕ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಬೇರೆಯವರಿಗೆ ಮಾರಾಟ ಮಾಡುತ್ತಿದ್ದರು. ಒಎಲ್‍ಎಕ್ಸ್ ನಲ್ಲಿ ಮಾರಾಟಕ್ಕಿಟ್ಟಿದ್ದ ವಾಹನಗಳ ದಾಖಲೆಯ ಜೆರಾಕ್ಸ್ ಪ್ರತಿಯನ್ನು ನಕಲಿಸಿ ಮಾರಾಟ ಮಾಡುತ್ತಿದ್ದರು. ಆ ನಂತರ ಕೆಲ ವಾಹನಗಳನ್ನು ಬೆಂಗಳೂರಿನಲ್ಲಿಯೇ ಮಾರಿದರೆ ಇನ್ನು ಕೆಲವನ್ನು ರಾಜಸ್ಥಾನಕ್ಕೆ ಓಡಿಸಿಕೊಂಡೇ ಹೋಗುತ್ತಿದ್ದರು. ಕರ್ನಾಟಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಎಂದು ಬರೆಸಿ ಅದಕ್ಕೆ ಸೈರನ್ ಹಾಕುತ್ತಿದ್ದರು. ಇದರಿಂದ ಗಡಿ ಭಾಗದಲ್ಲಿ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ.
ಬೈಕ್ ಕಳ್ಳತನ ಅಲ್ಲದೆ ಮತ್ತೊಂದು ಕೃತ್ಯ ಎಸಗಲು ಈ ಮೂವರು ಪ್ಲಾನ್ ಮಾಡಿಕೊಂಡಿದ್ದರು. ಆರೋಪಿಗಳನ್ನು ಬಂಧಿಸಿದ ಬಳಿಕ ರಾಜಾಸ್ಥಾನದಿಂದ ಏರ್ ಗನ್ ತಂದು ನಗರದಲ್ಲಿ ರಾಬರಿ ಮಾಡಲು ಸ್ಕೆಚ್ ಹಾಕಿದ್ದರು. ಆರೋಪಿಗಳನ್ನು ಬಂಧಿಸದೆ ಹೋಗದೇ ಇದ್ದಿದ್ದರೆ ಮತ್ತಷ್ಟು ಅಪರಾಧಗಳು ನಗರದಲ್ಲಿ ನಡೆಯುವ ಸಾಧ್ಯತೆ ಇತ್ತು.ಸಂಪೂರ್ಣ ಕಳ್ಳರೆ ತುಂಬಿಕೊಂಡಿರುವ ರಾಜಸ್ಥಾನದ ಕುಗ್ರಾಮದಲ್ಲಿ ಪೊಲೀಸರು ಕೂಡ ಒಳ ಹೋಗಲು ಸಾಧ್ಯವಾಗಿರಲಿಲ್ಲ. ಸತತವಾಗಿ ಕಾದು ಆರೋಪಿಗಳ ಮಾಹಿತಿ ಪಡೆದು ಊರಿನ ಗಡಿ ಭಾಗದಲ್ಲಿ ಬಂಧಿಸಲಾಗಿದೆ. ಸದ್ಯ ಆರೋಪಿಗಳ ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿರುವ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇವರ ಕೃತ್ಯಗಳ ಬಗ್ಗೆ ಮತ್ತಷ್ಟು ಮಾಹಿತಿ ಪಡೆಯುತ್ತಿದ್ದಾರೆ.