ಕೂಗು ನಿಮ್ಮದು ಧ್ವನಿ ನಮ್ಮದು

ಬೆಳಗಾವಿ ಲೋಕಸಭಾ ಉಪ ಚುನಾವಣೆ: ಮಾದರಿ ನೀತಿ ಸಂಹಿತೆ ಪಾಲನೆಗೆ ಕ್ರಮ: ಜಿಲ್ಲಾಧಿಕಾರಿ

ಬೆಳಗಾವಿ: ಕೋವಿಡ್-19 ಹಿನ್ನೆಲೆಯಲ್ಲಿ ಲೋಕಸಭಾ ಉಪ ಚುನಾವಣೆ ಸಂದರ್ಭದಲ್ಲಿ ಪ್ರಚಾರ, ನಾಮಪತ್ರ ಸಲ್ಲಿಕೆ, ಅನುಮತಿ ನೀಡಿಕೆಗೆ ಸಂಬಂಧಿಸಿದಂತೆ ಬಹಳಷ್ಟು ಮಾರ್ಗಸೂಚಿಗಳು ಪರಿಷ್ಕರಣೆಗೊಂಡಿದ್ದು, ಹೊಸ ಮಾರ್ಗಸೂಚಿ ಅನ್ವಯವೇ ಅನುಮತಿಯನ್ನು ನೀಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು. ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಮಾತನಾಡುತ್ತಾ ಹೇಳಿದರು. ಮಾದರಿ ನೀತಿ ಸಂಹಿತೆ ಪಾಲನೆಗೆ ಕ್ರಮ ಕೈಗೊಳ್ಳಬೇಕು. ನೀತಿಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಸಾರ್ವನಿಕರಿಂದ ದೂರು ಸ್ವೀಕರಿಸಲು ಅನುಕೂಲ ಆಗುವಂತೆ ನಿಯಂತ್ರಣ ಕೊಠಡಿಯನ್ನು ಆರಂಭಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಎಲ್ಲ ಸಹಾಯಕ ಚುನಾವಣಾಧಿಕಾರಿಗಳು ಆಯಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ಕೆಲಸಗಳನ್ನು ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು. ಕೋವಿಡ್-19 ಹಿನ್ನೆಲೆಯಲ್ಲಿ 80 ವರ್ಷ ಮೇಲ್ಪಟ್ಟವರು, ಕೋವಿಡ್ ಸೋಂಕಿತರು ಹಾಗೂ ವಿಕಲಚೇತನರಿಗೆ ಪೋಸ್ಟಲ್ ಬ್ಯಾಲೆಟ್ ಒದಗಿಸಲು ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಕ್ರಮ ಕೈಗೊಂಡು ಮತದಾರರ ಪಟ್ಟಿಯಲ್ಲಿ ಗುರುತು ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಅಕ್ರಮ ಮದ್ಯ ಮಾರಾಟ ಹಾಗೂ ಸಾಗಾಣಿಕೆ ಮೇಲೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಸೂಚನೆ ನೀಡಿದರು. ಇದೇ ವೇಳೆ ಮಾತನಾಡುತ್ತ, ಚುನಾವಣಾ ಅಕ್ರಮಗಳು ಕಂಡು ಬಂದರೆ ಸಂಬಂಧಿಸಿದ ಎಫ್.ಎಸ್.ಟಿ. ಮತ್ತಿತರ ತಂಡಗಳು ತಕ್ಷಣವೇ ದೂರು ದಾಖಲಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು. ಮಸ್ಟರಿಂಗ್, ಡಿಮಸ್ಟರಿಂಗ್, ಮತ ಎಣಿಕೆ ಸೇರಿದಂತೆ ಎಲ್ಲ ಬಗೆಯ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ವಿವರಿಸಿದರು. ಇನ್ನು ಕೊಗನೊಳ್ಳಿ ಹಾಗೂ ಕಣಕುಂಬಿ ಎರಡೂ‌ ಕಡೆ ಅಬಕಾರಿ ಇಲಾಖೆಯ ವತಿಯಿಂದ ಶಾಶ್ವತ ಚೆಕ್ ಪೋಸ್ಟ್ ಕಾರ್ಯ ನಿರ್ವಹಿಸುತ್ತಿದ್ದು, ಉಳಿದಂತೆ ಅಕ್ರಮ ಮದ್ಯ ಮಾರಾಟ ಅಥವಾ ಸಾಗಾಣಿಕೆ ಮೇಲೂ ನಿಗಾ ವಹಿಸಲಾಗಿದೆ ಎಂದು ಅಬಕಾರಿ ಇಲಾಖೆಯ ಉಪ ಆಯುಕ್ತ ಅರುಣಕುಮಾರ್ ಹೇಳಿದರು. ಸಭೆಯಲ್ಲಿ ನಗರ ಪೊಲೀಸ್ ಆಯುಕ್ತರಾದ ಡಾ.ಕೆ. ತ್ಯಾಗರಾಜನ್, ಬೆಳಗಾವಿ ನಗರ ಪೊಲೀಸ್ ಉಪ ಆಯುಕ್ತ ಡಾ.ವಿಕ್ರಮ್ ಆಮಟೆ, ಮಹಾನಗರ ಪಾಲಿಕೆಯ ಆಯುಕ್ತರಾದ ಕೆ.ಎಚ್. ಜಗದೀಶ್, ಮಾದರಿ ನೀತಿ ಸಂಹಿತೆ, ದೂರು ನಿರ್ವಹಣೆ, ಸಿವಿಜಿಲ್, ಎಂಸಿಎಂಸಿ ಸೇರಿದಂತೆ ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

error: Content is protected !!