ವನ್ಯಪ್ರಾಣಿಗೆ ಅರವಳಿಕೆ ಮದ್ದು ಪ್ರಯೋಗಿಸುವುದು ಎಂದರೆ ಗೋಲಿಯಾಟವಲ್ಲ.
ಬೆಳಗಾವಿ: ಬೆಳಗಾವಿ ಜನರ ನಿದ್ದೆಗೆಡಿಸಿರುವ ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ನಡೆಸಿದ ಈವರೆಗಿನ ಕಾರ್ಯಾಚರಣೆ ಹೊಳೆಯಲ್ಲಿ ಹುಳಿ ಹಿಂಡಿದಂತಾಗಿದೆ. ಹೇಳಿಕೇಳಿ ಉತ್ತರ ಕರ್ನಾಟಕ ಭಾಗದಲ್ಲಿ ವನ್ಯ ಪ್ರಾಣಿಗಳು ಕಾಣಿಸಿಕೊಳ್ಳುವುದು ಅಪರೂಪ. ಆದ್ರೆ ಕಾಣಿಸಿಕೊಂಡಾಗ ತಕ್ಷಣ ತೆಗೆದುಕೊಳ್ಳಬೇಕಾದ ವೈಜ್ಞಾನಿಕ ಕ್ರಮಗಳ ವಿಷಯದಲ್ಲಿ ಅಲ್ಲಿನ ಅರಣ್ಯ ಅಧಿಕಾರಿ ಸಿಬ್ಬಂದಿಗಳಿಗೆ ಕೊಂಚ ಸೆಟ್ ಬ್ಯಾಕ್ ಆಗೋದು ಸಹಜ.
ಡಾರ್ಟ್ ಮಾಡೋದಕ್ಕೆ ಬೇಕು ನಿರ್ದಿಷ್ಟ ಗುರಿ
ಅಪರೂಪದ ಕಾರ್ಯಾಚರಣೆಯಲ್ಲಿ ಅರವಳಿಕೆ ಮದ್ದನ್ನು ವನ್ಯಪ್ರಾಣಿ ಮೇಲೆ ಪ್ರಯೋಗಿಸಲು ಚಾಣಾಕ್ಷತೆ ನಿಖರ ಗುರಿ ಹೊಂದಿರಬೇಕು. ವನ್ಯ ಪ್ರಾಣಿಯನ್ನು ಡಾರ್ಟಿಂಗ್ (ಅರವಳಿಕೆ ಮದ್ದು ಪ್ರಯೋಗಿಸಿ ಪ್ರಜ್ಞೆ ತಪ್ಪಿಸುವುದು (Darting and Capturing) ಮಾಡುವಾಗ ನೈಪುಣ್ಯತೆ ಹೊಂದಿರುವ ವನ್ಯಜೀವಿ ವೈದ್ಯರ ಅವಶ್ಯಕತೆ ತುರ್ತು ಅಗತ್ಯವಿದೆ. ಸಣ್ಣ ವನ್ಯ ಪ್ರಾಣಿಗಳಿಂದ ಹಿಡಿದು ಆನೆಯಂತ ದೈತ್ಯ ಪ್ರಾಣಿಗಳನ್ನು ಪ್ರಜ್ಞೆ ತಪ್ಪಿಸಿ ಮತ್ತೆ ಆ್ಯಂಟಿ ಡೋಸ್ ಕೊಟ್ಟು ಪ್ರಜ್ಞೆ ಮರುಕಳಿಸುವಂತೆ ಮಾಡುವ ನುರಿತ ವೈದ್ಯರು ಬೇಕಾಗುತ್ತದೆ. ಸದ್ಯದಲ್ಲಿ ಇಂತಹ ನೈಪುಣ್ಯತೆ ಹೊಂದಿರುವ ವೈದ್ಯರಿದ್ದರೆ ಅದು ಶಿವಮೊಗ್ಗದ ವನ್ಯಜೀವಿ ವೈದ್ಯ ಡಾಕ್ಟರ್ ವಿನಯ್.
ರಾಜ್ಯದ ನಂಬರ್ ಒನ್ ಡಾರ್ಟಿಂಗ್ ಎಕ್ಸ್ ಪರ್ಟ್ ಡಾಕ್ಟರ್ ವಿನಯ್
ರಾಜ್ಯದ ಪ್ರಮುಖ ಆನೆ ಕಾರ್ಯಾಚರಣೆಗಳಲ್ಲಿ ವಿನಯ್ ಪಾಲ್ಗೊಂಡಿದ್ದಾರೆ. ಕಾಡಾನೆಯನ್ನು ಕಾಡಿನಿಂದ ಬಯಲಿಗೆ ತಂದು ಸಾಗಾಣಿಕೆಗೆ ಅನುಕೂಲವಾಗುವಂತೆ ಡಾರ್ಟ್ ಮಾಡೋದ್ರಲ್ಲಿ ವಿನಯ್ ಚಾಣಾಕ್ಷರು. ನುರಿತ ಮಾವುತ ಕಾವಾಡಿಗಳು ಹಾಗೂ ಅರಣ್ಯ ಸಿಬ್ಬಂದಿಗಳ ಸಹಕಾರದಲ್ಲಿ ಧೈರ್ಯಗುಂದದೆ ಸನಿಹದಿಂದಲೇ ನಿರ್ಧಿಷ್ಟ ಗುರಿಯಿಟ್ಟು ಡಾರ್ಟ್ ಮಾಡುತ್ತಾರೆ. ನಂತರ ಆ್ಯಂಟಿ ಡೋಸ್ ಕೊಟ್ಟು ಪ್ರಜ್ಞೆ ಮರುಕಳಿಸುವಂತೆ ಮಾಡಿ. ಕಾಡಾನೆ ಸಾಗಾಣಿಕೆಗೆ ಅನುಕೂಲ ಮಾಡಿಕೊಡುತ್ತಾರೆ.
ಕಾರ್ಯಾಚರಣೆಯಲ್ಲಿ ಹಿನ್ನಡೆ ಅನುಭವಿಸಿದ್ದೇ ಇಲ್ಲ
ವಿನಯ್ ಆನೆ ಹುಲಿ ಸೇರಿದಂತೆ ಯಾವುದೇ ವನ್ಯಜೀವಿ ಕಾರ್ಯಾಚರಣೆಯಲ್ಲಿ ಹಿನ್ನಡೆ ಅನುಭವಿಸಿದ್ದೆ ಇಲ್ಲ. 15 ಕ್ಕೂ ಹೆಚ್ಚು ಕಾಡಾನೆಗಳನ್ನು ಡಾರ್ಟ್ ಮಾಡಿ ಸೆರೆಹಿಡಿದ ಹಿರಿಮೆ ವಿನಯ್ ಗಿದೆ. ಇನ್ನು ಕಾಡಿನಿಂದ ನಾಡಿಗೆ ಬಂದ ಚಿರತೆಯನ್ನು ವಿನಯ್ ಅನಾಯಾಸವಾಗಿ ಡಾರ್ಟ್ ಮಾಡಿ ಸೆರೆಹಿಡಿಯುತ್ತಾರೆ. ಬೆಳಗಾವಿ ಮಾದರಿಯಲ್ಲಿಯೇ ಇತ್ತಿಚೆಗೆ ಭದ್ರಾವತಿ ವಿ.ಐ.ಎಸ್.ಎಲ್ ಕಾರ್ಖಾನೆ ಆವರಣದಲ್ಲಿ ಕಾಣಿಸಿಕೊಂಡ ಚಿರತೆಯನ್ನು ವಿನಯ್ ಸಮಯ ಪ್ರಜ್ಞೆಯಿಂದ ಡಾರ್ಟ್ ಮಾಡಿ, ಸೆರೆ ಹಿಡಿದಿದ್ದರು. ಆ ಮೂಲಕ ಭದ್ರಾವತಿ ಜನತೆ ನಿಟ್ಟುಸಿರು ಬಿಡುವಂತೆ ಮಾಡಿದ್ರು.
ಸಿಂಗಳೀಕವನ್ನು ಡಾರ್ಟ್ ಮಾಡೋದು ಸವಾಲಿನ ಕೆಲಸ
ಆನೆ ಮತ್ತು ಹುಲಿ ಚಿರತೆಯಂತ ಪ್ರಾಣಿಗಳನ್ನು ನಿರ್ಧಿಷ್ಟ ಜಾಗದಲ್ಲಿ ಅಡಗಿ ಕೂತು ಡಾರ್ಟ್ ಮಾಡಬಹುದು. ಆದರೆ ಸಿಂಗಳೀಕ (Lion tailed macaque) (ಮುಸಿಯಾ) ವನ್ನು ಡಾರ್ಟ್ ಮಾಡುವುದು ಅತ್ಯಂತ ಸವಾಲಿನ ಕೆಲಸ. ಸೆಕೆಂಡ್ಗಳಲ್ಲಿಯೆ ನೆಗೆಯುವ ಸಿಂಗಳೀಕನದ್ದು ಮಂಗನಿಗಿಂತಲೂ ದೊಡ್ಡ ಛೇಷ್ಟೆ ಎಂದರೆ ತಪ್ಪಾಗಲಾರದು. ಇಂತಹ ಸಿಂಗಳೀಕ ಪ್ರಾಣಿಗಳು ನಗರದ ಜನತೆ ನಿದ್ದೆಗೆಡಿಸಿದ್ದ ಸಂದರ್ಭದಲ್ಲಿ ವಿನಯ್ ನಿರ್ದಿಷ್ಟ ಗುರಿಯಿಟ್ಟು ಅವುಗಳನ್ನು ಡಾರ್ಟ್ ಮಾಡಿದ್ರು ಡಾ.ವಿನಯ್. ಸಿಂಗಳೀಕ ಕೂತು ಇನ್ನೇನು ನೆಗೆಯಬೇಕೆಂಬ ಸಂದರ್ಭದಲ್ಲಿ ಅವುಗಳನ್ನು ಗುರಿಯಿಟ್ಟು ವಿನಯ್ ಡಾರ್ಟ್ ಮಾಡಿದ್ದಾರೆ.
ನಿಖರ ಗುರಿ, ನೈಪುಣ್ಯತೆ ವಿನಯ್ ಗೆ ಒಲಿದು ಬಂದ ವಿದ್ಯೆಯಾಗಿದೆ
ಬಾಲ್ಯದಿಂದಲೂ ವನ್ಯಜೀವಿ ಗಳ ಬಗ್ಗೆ ಆಸಕ್ತಿ ಹೊಂದಿರುವ ವಿನಯ್ ಎಷ್ಟೇ ದೂರದ ಕಾರ್ಯಾಚರಣೆಯಾದ್ರು ಹುಮ್ಮಸ್ಸಿನಿಂದಲೇ ಮುನ್ನುಗ್ಗುತ್ತಾರೆ. ಯಾವ ಪ್ರಾಣಿಗೆ ಎಷ್ಟು ಪ್ರಮಾಣದಲ್ಲಿ ಅರವಳಿಕೆ ಮದ್ದು ಪ್ರಯೋಗಿಸಬೇಕು. ಆ್ಯಂಟಿ ಡೋಸ್ ಎಷ್ಟು ಪ್ರಮಾಣದಲ್ಲಿರಬೇಕು ಎಂಬುದು ವಿನಯ್ ಗೆ ಗೊತ್ತಿದೆ. ಹಲವು ಕಾರ್ಯಾಚರಣೆಗಳ ಅನುಭವ ಹೊಂದಿರುವ ವಿನಯ್ ರಾಜ್ಯದಲ್ಲಿ ಈಗ ನಂಬರ್ ಒನ್ ಡಾರ್ಟ್ ಎಕ್ಸ್ ಪರ್ಟ್ ಎನಿಸಿದ್ದಾರೆ.
ಹಲವು ದಿನಗಳಿಂದ ಬೆಳಗಾವಿ ನಗರದಲ್ಲಿ ಬೀಡುಬಿಟ್ಟಿರುವ ಚಿರತೆಯನ್ನು ಅರಣ್ಯಾಧಿಕಾರಿಗಳು ಹರಸಾಹಸ ಪಟ್ರು ಹಿಡಿಯಲು ಸಾದ್ಯವಾಗಿಲ್ಲ. ಚಿರತೆ ಕಣ್ಣಾ ಮುಚ್ಚಾಲೆ ಆಡುತ್ತಿದೆ. ಈಗ ವಿನಯ್ ಬೆಳಗಾವಿ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆ ಕಾರ್ಯಾಚರಣೆಯಲ್ಲಿ ಅವರು ಯಶಸ್ವಿಯಾಗುತ್ತಾರೆ. ಚಿರತೆ ಕಂಡ ದಿನವೇ ಶಿವಮೊಗ್ಗದಿಂದ ಡಾಕ್ಟರ್ ವಿನಯ್ ಕರೆಸಿಕೊಂಡಿದ್ದರೆ, ಬೆಳಗಾವಿ ಜನತೆ ಎಂದೋ ನೆಮ್ಮದಿಯಿಂದಿರುತ್ತಿದ್ದರು. ಜಿಲ್ಲಾಡಳಿತಕ್ಕೆ ಶಾಲಾ ಕಾಲೇಜುಗಳಿಗೆ ರಜೆ ಕೊಡುವ ಪ್ರಮೆಯವೇ ಉದ್ಭವವಾಗುತ್ತಿರಲಿಲ್ಲ. ಈಗಲೂ ಕಾಲ ಮಿಂಚಿಲ್ಲ. ಡಾ.ವಿನಯ್ ಜನರ ಭೀತಿಯನ್ನು ಹೋಗಲಾಡಿಸಲಿದ್ದಾರೆ ಎಂಬ ವಿಶ್ವಾಸವನ್ನು ವೈಲ್ಡ್ ಟಸ್ಟರ್ ಸಂಸ್ಥೆ ಗೌರವಾಧ್ಯಕ್ಷ ಎಂ. ಶ್ರೀಕಾಂತ್ ವ್ಯಕ್ತಪಡಿಸಿದ್ದಾರೆ.