ಬೆಳಗಾವಿ: ಬೆಳಗಾವಿ ಜಿಲ್ಲಾ ಪೋಲಿಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಕಳುವಾಗಿದ್ದ ಬರೋಬ್ಬರಿ 2 ಕೇಜಿ 800 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಸುಮಾರು 45 ಲಕ್ಷ ಮೌಲ್ಯದ ಚಿನ್ನ ಕದ್ದ ನಾಲ್ವರು ಖದೀಮರನ್ನು ಹೆಡೆಮುರಿಕಟ್ಡಿದ್ದಾರೆ.
ಕಳೆದ ತಿಂಗಳು ಮೇ 28 ರಂದು ಕಳ್ಳತನ ಆಗಿದ್ದ 3,500 ಗ್ರಾಂ ಚಿನ್ನದ ಪೈಕಿ 2800 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದ ಶ್ರೀ ಮಹಾಲಕ್ಷ್ಮಿ ಕೋ ಆಪ್ ಕ್ರೇಡಿಟ್ ಸೋಸಾಯಿಟಿಯಲ್ಲಿ ರೈತಾಪಿ ವರ್ಗ ಅಡವಿಟ್ಟ ಚಿನ್ನವನ್ನು ಈ ಖತರ್ನಾಕ್ ಕಳ್ಳರು ಕದ್ದು ಪರಾರಿಯಾಗಿದ್ದರು. ಈ ಸೋಸಾಯಿಟಿಯಲ್ಲಿ ಒಟ್ಟು 110 ರೈತಾಪಿ ವರ್ಗದವರು ಚಿನ್ನ ಅಡವಿಟ್ಟು ಸಾಲ ಮಾಡಿದ್ದರು. ತಾವು ಅಡವಿಟ್ಟ ಚಿನ್ನಾಭರಣ ಕಳುವಾಗಿದ್ದ ಸುದ್ದಿ ತಿಳಿದು ಗ್ರಾಹಕರು ಸೇರಿದಂತೆ ಗ್ರಾಮಸ್ಥರು ದಂಗಾಗಿ ಹೋಗಿದ್ದರು.. ತಮ್ಮ ಚಿನ್ನಾಭರಣದ ಕಥೆ ಮುಂದೇನು ಎಂಬ ಚಿಂತೆಯಲ್ಲಿ ಸೋರಗುತ್ತಿದ್ದ ಗ್ರಾಹಕರಿಗೆ, ಬೆಳಗಾವಿ ಪೊಲೀಸರು ಟಾನಿಕ್ ನೀಡಿದ್ದಾರೆ.
ಇನ್ನು ಬಂಧಿತ ಆರೋಪಿಗಳನ್ನು ಹುಸೇನ್ ಮಲಿಕಸಾಬ್ (40), ಸದ್ದಾಂ ಜಮಖಂಡಿ (22), ರಿಯಾಜ್ ಪೈಲವಾನ್ (23) ಹಾಗೂ ಹಾಜಿಸಾಬ್ ಶೇಖ (36) ಎಂದು ಗುರುತಿಸಲಾಗಿದ್ದು ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದ ಶ್ರೀ ಮಹಾಲಕ್ಷ್ಮಿ ಕೋ ಆಪ್ ಕ್ರೆಡಿಟ್ ಸೋಸಾಯಿಟಿಯಲ್ಲಿ ಕಳೆದ 25 ದಿನಗಳ ಹಿಂದೆ ಈ ಕಳ್ಳತನ ಪ್ರಕರಣ ನಡೆದಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ ಅವರು ಬೆಳಗಾವಿಯ ಹೆಚ್ಚವರಿ ಎಸ್ಪಿ ಮಹಾನಿಂಗ್ ನಂದಗಾವಿ, ಅಥಣಿ ಡಿಎಸ್ಪಿ ಗಿರೀಶ್, ಸಿಪಿಐ ಹಾರೂಗೇರಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ವಿಶೇಷ ಮಾರ್ಗದರ್ಶನ ನೀಡಿದ್ದರು.
ಸಾರ್ವಜನಿಕರು ಬೇಷ್ ಎನ್ನುವಂತೆ ಬೆಳಗಾವಿ ಜಿಲ್ಲಾ ಪೊಲೀಸರು ಕೇವಲ 25 ದಿನಗಳಲ್ಲಿ ಚಿನ್ನ ಕದ್ದ ಖದಿಮರನ್ನು ವಶಕ್ಕೆ ಪಡೆದು, ಪ್ರಕರಣಕ್ಕೆ, ತಿಲಾಂಜಲಿ ಇಟ್ಟಿದ್ದಾರೆ. ಇನ್ನು ಬಂಧಿತ ಆರೋಪಗಳನ್ನು ವಿಚಾರಣೆ ನಡೆಸಿ ಮತ್ತೆ ಬೇರೆ ಎಲ್ಲೇಲ್ಲಿ ಇಂತ ಕೃತ್ಯಗಳನ್ನು ಎಸಗಿದ್ದಾರೆ ಎಂಬ ಮಾಹಿತಿ ಕಕ್ಕಿಸಿದ್ದಾರೆ. ಇನ್ನು ಬೆಳಗಾವಿ ಜಿಲ್ಲಾ ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತ ವಾಗಿದ್ದು, ಇಲಾಖೆಯ ಹಿರಿಯ ಅಧಿಕಾರಿಗಳು ಬೇಷ್ ಎಂದಿದ್ದಾರೆ. ಈ ಹಿಂದೆ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದಲ್ಲಿ ನಡೆದಿದ್ದ ಭಾರಿ ಮೊತ್ತದ ಬ್ಯಾಂಕ್ ಕಳ್ಳತನವನ್ನು ಎಸ್ಪಿ ಲಕ್ಷ್ಮಣ ನಿಂಬರಗಿ ಅವರ ಮಾರ್ಗದರ್ಶನದಲ್ಲಿ ಎಎಸ್ಪಿ ಮಹಾನಿಂಗ್ ನಂದಗಾವಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿತ್ತು.
ಸಿಕ್ಕಿಲ್ಲಾ ಹೆಬ್ಬಾಳ ಡಿಸಿಸಿ ಬ್ಯಾಂಕ್ ದರೋಡೆಕೋರರು
ಇನ್ನು ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದ ಡಿಸಿಸಿ ಬ್ಯಾಂಕ್ ದರೋಡೆಯಾಗಿ ವರ್ಷಗಳೇ ಕಳೆದವು. ಕೋಟ್ಯಾಂತರ ರೂ. ಮೌಲ್ಯದ ನಗದು, ಚಿನ್ನಾಭರಣ ನುಂಗಿ ನೀರು ಕುಡಿದ ಕಳ್ಳ ಖದಿಮರು ಮಾತ್ರ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಹಾಯಾಗಿದ್ದಾರೆ ಅನ್ನಿಸುತ್ತೆ. ಆದರೆ ಹಂದಿಗುಂದ ಮತ್ತು ಮುರಗೋಡ ಬ್ಯಾಂಕ್ ಕಳ್ಳತನ ಪ್ರಕರಣಗಳು ಪತ್ತೆಯಾಗಿ, ಆರೋಪಿಗಳು ಅಂದರ್ ಆಗಿದ್ದು, ಹೆಬ್ಬಾಳ ಬ್ಯಾಂಕ್ ದರೋಡೆ ಖದಿಮರಿಗೂ ಡವ ಡವ ಶುರುವಾಗಿರುತ್ತೆ. ಹೀಗಿರುವಾಗ ಬಹುಷಃ ಧೂಳು ಹೀಡಿದ ಹೆಬ್ಬಾಳ ಬ್ಯಾಂಕ್ ದರೋಡೆ ಫೈಲನ್ನ ಈ ಸಂದರ್ಭದಲ್ಲಿ ಮತ್ತೆ ಕೈಗೆತ್ತಿಕೊಂಡ್ರೆ ಎಸ್ಪಿ ಲಕ್ಷ್ಮಣ ನಿಂಬರಗಿ ಅವರು ಈ ಪ್ರಕರಣವನ್ನು ಬೇಧಿಸಬಹುದೇನೊ.