ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣಾ ಕಣ ರಂಗೇರಿದೆ. ಇಂದು ಘಟಾನುಘಟಿ ನಾಯಕರು ನಾಮಪತ್ರ ಸಲ್ಲಿಸಿದ್ದಾರೆ. ಬೆಳಗಾವಿಯ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯ 16 ಸ್ಥಾನಗಳಿಗೆ ನವೆಂಬರ್ 6 ರಂದು ಚುನಾವಣೆ ನಡೆಯಲಿದೆ.
ಪ್ರತಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 10 ಸ್ಥಾನಗಳು, ತಾಲೂಕು ಕೃಷಿ ಹುಟ್ಟುವಳಿ ಮಾರಾಟ ಸಹಾಕರ ಸಂಘದಿಂದ 1 ಸ್ಥಾನ, ಗ್ರಾಹಕರ ಮತ್ತು ಸಂಸ್ಕರಣಾ ಸಹಕಾರ ಸಂಘದಿಂದ 1 ಸ್ಥಾನ, ಪಟ್ಟಣ ಸಹಾಕರ ಬ್ಯಾಂಕಗಳು ಮತ್ತು ಕೃಷಿಯೇತರ ಪತ್ತಿನ ಸಹಕಾರ ಸಂಘದಿಂದ 1 ಸ್ಥಾನ, ಹಾಲು ಉತ್ಪಾದಕರ, ಕಾರ್ಮಿಕರ ಸಹಾಕರ ಸಂಘ ಸೇರಿ ಇತರೆ ಸಂಘಗಳಿಂದ 1 ಸ್ಥಾನ, ಕೈಗಾರಿಕಾ ಸಂಘದಿಂದ 1 ಸ್ಥಾನ, ನೇಕಾರ ಸಹಕಾರ ಸಂಘದಿಂದ 1 ಸ್ಥಾನಕ್ಕೆ ನಡೆಯಲಿರುವ ಚುನಾವಣೆ ಇದಾಗಿದೆ.
ಇನ್ನು ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಬಿಜೆಪಿ ನಾಯಕರಿಗೆ ಪ್ರತಿಷ್ಠಿತ ಚುನಾವಣೆಯಾಗಿದೆ. ಕತ್ತಿ, ಜಾರಕಿಹೊಳಿ, ಸವದಿ ಸಾಹುಕಾರಗಳ ಮಧ್ಯೆ ಈ ಜಟಾಪಟಿ ಏರ್ಪಟ್ಟಿದ್ದು, ಕತ್ತಿ, ಜಾರಕಿಹೊಳಿ ಬಣ ಮೈಲುಗೈ ಸಾಧಿಸುವ ಸಾಧ್ಯತೆ ಹೆಚ್ಚಿದೆ. ಇನ್ನು ಮೊದಲಿನಿಂದಲೂ ಕತ್ತಿ-ಜಾರಕಿಹೊಳಿ ಮತ್ತು ಸವದಿ ಬಣಗಳ ಮಧ್ಯ ತೀವ್ರ ಪೈಪೋಟಿ ಇತ್ತು. ಆದರೆ ಬಿಜೆಪಿ ವರಿಷ್ಠರು, ಆರ್.ಎಸ್.ಎಸ್ ಮಧ್ಯ ಪ್ರವೇಶದಿಂದ ಪರಸ್ಪರ ಒಳ ಒಪ್ಪಂದ ಮಾಡಿಕೊಂಡ ನಾಯಕರು ಇದೀಗ ಬಹುಪಾಲು ಅವಿರೋಧ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ.
16 ಸ್ಥಾನಗಳ ಪೈಕಿ ಕತ್ತಿ, ಜಾರಕಿಹೊಳಿ ಬಣಕ್ಕೆ 11 ರಿಂದ 12 ಸ್ಥಾನ ಸಿಗುವ ಸಾಧ್ಯತೆ ಇದ್ದರೆ, ಅತ್ತ ಸವದಿ ಬಣಕ್ಕೆ 4 ರಿಂದ 5 ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ. ಇನ್ನು ಖಾನಾಪುರದಿಂದ ಡಿಸಿಎಂ ಲಕ್ಷ್ಮಣ ಸವದಿ ಬೆಂಬಲಿತ ಎಂಇಎಸ್ ಮಾಜಿ ಶಾಸಕ ಅರವಿಂದ ಪಾಟೀಲ ಕಣಕ್ಕೆ ಇಳಿದರೇ ಅತ್ತ ಉಮೇಶ ಕತ್ತಿ, ಬಾಲಚಂದ್ರ ಜಾರಕಿಹೊಳಿ ಬೆಂಬಲಿತ ಶಾಸಕಿ ಅಂಜಲಿ ನಿಂಬಾಳಕರ ಅಖಾಡಕ್ಕೆ ಇಳಿದಿದ್ದಾರೆ. ಇಂದು ಉಮೇದುವಾರಿಕೆ ಸಲ್ಲಿಕೆ ಪ್ರಕ್ರಿಯೆ ಮುಗಿದ ಬಳಿಕ ಡಿಸಿಸಿ ಬ್ಯಾಂಕ್ ಚುನಾವಣೆಯ ಸ್ಪಷ್ಟ ಚಿತ್ರಣ ಹೊರಬೀಳಲಿದೆ. ನಾಮಪತ್ರ ಸಲ್ಲಿಸಲು ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ರಮೇಶ್ ಕತ್ತಿ ಆಗಮಿಸಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಲು ಉಮೇಶ ಕತ್ತಿ ಮತ್ತು ರಮೇಶ್ ಕತ್ತಿ ಒಟ್ಟಿಗೆ ಆಗಮಿಸಿದ್ದರು.
ಇನ್ನು ಚುನಾವಣೆ ಹಿನ್ನೆಲೆ ಡಿಸಿಸಿ ಬ್ಯಾಂಕಿನ ಸಭಾ ಹಾಲಿನಲ್ಲಿ ತ್ರೀಮೂರ್ತಿಗಳು ಒಂದೆ ಕಡೆ ಕಾಣಿಸಿಕೊಂಡರು. ಡಿಸಿಎಂ ಲಕ್ಷ್ಮಣ ಸವದಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಮಾಜಿ ಸಚಿವ ಉಮೇಶ ಕತ್ತಿ ಚುನಾವಣೆ ಬಗ್ಗೆ ಪರಸ್ಪರ ಚರ್ಚೆಯಲ್ಲಿ ತೊಡಗಿದ್ದರು. ಇನ್ನು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಬಳಿಕ ಬಾಲಚಂದ್ರ ಜಾರಕಿಹೊಳಿ ಮತ್ತು ಉಮೇಶ ಕತ್ತಿ ಜಂಟಿಯಾಗಿ ಖಾಸಗಿ ಹೋಟೆಲನಲ್ಲಿ ಪತ್ರಿಕಾಗೋಷ್ಟಿ ನಡೆಸಲಿದ್ದಾರೆ.