ಬೆಂಗಳೂರು: ನಗರದಾದ್ಯಂತ ವರುಣನ ಅಬ್ಬರ ಜೋರಾಗಿದ್ದು ಭಾರೀ ಅನಾಹುತಗಳು ಸಂಭವಿಸುತ್ತಿವೆ. ಹೀಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕ ನಗರದಾದ್ಯಂತ ತಾತ್ಕಾಲಿಕ ಮಾನ್ಸೂನ್ ಕಂಟ್ರೋಲ್ ರೂಮ್ ಸ್ಥಾಪಿಸಲಿದೆ. ಈ ಕಂಟ್ರೋಲ್ ರೂಮ್ಗಳು ಭಾರೀ ಮಳೆಯ ಸಮಯದಲ್ಲಿ ಜನರಿಗೆ ಸಹಾಯ ಮಾಡಲಿವೆ. ಕಳೆದ ಮೂರ್ನಾಲ್ಕು ದಿನಗಳಿಂದ ಬೆಂಗಳೂರಿನ ಹಲವೆಡೆ ಮಹಾ ಮಳೆಯಿಂದ ಅನೇಕ ಅವಘಡಗಳು ಸಂಭವಿಸಿವೆ. ಮರಗಳು, ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಮನೆಗಳಲ್ಲಿ ಮಳೆ ನೀರು ತುಂಬಿ ಜನಜೀವನ ಅಸ್ತವ್ಯಸ್ತವಾಗಿದೆ.
ರಸ್ತೆಗಳು ಕೆರೆಯಂತಾಗಿ ವಾಹನ ಸವಾರರು ಜೀವ ಕೈಯಲ್ಲಿಡಿದು ಸಂಚರಿಸುವಂತಾಗಿದೆ. ಹೀಗಾಗಿ ಮಳೆಯಿಂದಾದ ಸಮಸ್ಯೆಗಳನ್ನು ಕಡಿಮೆ ಮಾಡಲು ಮತ್ತು ಸಕಾಲಿಕ ಸಹಾಯವನ್ನು ನೀಡಲು ಬಿಬಿಎಂಪಿಯು ನಗರದಲ್ಲಿ ತಾತ್ಕಾಲಿಕ ಮಾನ್ಸೂನ್ ಕಂಟ್ರೋಲ್ ರೂಮ್ಗಳನ್ನು ಸ್ಥಾಪಿಸಲು ಮುಂದಾಗಿದೆ. ಪಾಲಿಕೆ ಉಪವಿಭಾಗ ಮಟ್ಟದಲ್ಲಿ 63 ತಾತ್ಕಾಲಿಕ ಮಾನ್ಸೂನ್ ಕಂಟ್ರೋಲ್ ರೂಮ್ಗಳನ್ನು ಸ್ಥಾಪಿಸಲು ಸಿದ್ಧತೆ ನಡೆಯುತ್ತಿದೆ. ಜೂನ್ 1ಕ್ಕೆ ಈ ಕೊಠಡಿಗಳು ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.
ಬಿಬಿಎಂಪಿ ತಾತ್ಕಾಲಿಕ ಮಾನ್ಸೂನ್ ಕಂಟ್ರೋಲ್ ರೂಂಗಳ ಸ್ಥಾಪನೆಗೆ ಟೆಂಡರ್ ನಡೆಸಿದ್ದು, ಪ್ರತಿ ನಿಯಂತ್ರಣ ಕೊಠಡಿಗೆ ಸುಮಾರು 1.25 ಲಕ್ಷ ರೂ. ವೆಚ್ಚವಾಗಲಿದೆ. ನಿಯಂತ್ರಣ ಕೊಠಡಿಗಳು ವರ್ಷವಿಡೀ ವಲಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಮಾನ್ಸೂನ್ ಸಮಯದಲ್ಲಿ, ನಾವು ಉಪ-ವಿಭಾಗ ಮಟ್ಟದಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸುತ್ತೇವೆ. ಭಾರೀ ಮಳೆಯಿಂದ ಉಂಟಾಗುವ ತುರ್ತು ಸಂದರ್ಭಗಳಲ್ಲಿ ನಿಯಂತ್ರಣ ಕೊಠಡಿಯ ಮೂಲಕ ಸಮಸ್ಯೆಯ ಮಾಹಿತಿ ಕಲೆ ಹಾಕಿ ಸಮಸ್ಯೆಯನ್ನು ಪರಿಹರಿಸಲಾಗುತ್ತೆ ಎಂದು ಅಧಿಕಾರಿ ತಿಳಿಸಿದರು.”
ಪ್ರತಿಯೊಂದು ನಿಯಂತ್ರಣ ಕೊಠಡಿಯು ಎಲ್ಲಾ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸುವ ರೀತಿ ಸಂಪೂರ್ಣವಾಗಿ ಸಜ್ಜುಗೊಳಿಸಲಾಗುತ್ತದೆ ಮತ್ತು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೂಲಕ ಇದು ನಿರ್ವಹಿಸಲ್ಪಡುತ್ತದೆ. ಇದು ಐದು ಸಿಬ್ಬಂದಿ ತಂಡವಾಗಿರುತ್ತದೆ. ನಿಯಂತ್ರಣ ಕೊಠಡಿಗಳಲ್ಲಿ ಮರಗಳು ಬಿದ್ದ ಸಂದರ್ಭದಲ್ಲಿ ಮರ ಕಡಿಯುವ ಉಪಕರಣಗಳು, ಮುಳುಗಡೆಯ ಸಂದರ್ಭದಲ್ಲಿ 10 ಎಚ್ಪಿ ನೀರಿನ ಪಂಪ್ಗಳು, ಮಣ್ಣು ತೆಗೆಯುವ ಯಂತ್ರಗಳು ಮತ್ತು ಸಿಬ್ಬಂದಿಗೆ ತುರ್ತು ಸಹಾಯಕ್ಕಾಗಿ ಗಂಬೂಟ್ ಮತ್ತು ಜಾಕೆಟ್ಗಳನ್ನು ಬಳಸಿಕೊಳ್ಳಲು ಎಲ್ಲಾ ರೀತಿಯ ಉಪಕರಣಗಳು ಲಭ್ಯವಿರಲಿದೆ. ಸಮಸ್ಯೆ ಏನೆಂದು ತಿಳಿದು ಸಿಬ್ಬಂದಿ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುತ್ತಾರೆ. ಹೀಗಾಗಿ ಅವಶ್ಯಕ ಉಪಕರಣಗಳ ಖರೀದಿಗೆ ಸಿದ್ಧತೆ ನಡೆದಿದೆ ಎಂದರು.