ಕಲಬುರಗಿ: ಬೇರೆಯವರ ತರಹ ನಾನು ಕೈಕಾಲು ಹಿಡಿದಿದ್ದರೆ ಇಷ್ಟೊತ್ತಿಗೆ ಕರ್ನಾಟಕದ ಮುಖ್ಯಮಂತ್ರಿ ಆಗುತ್ತಿದ್ದೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಹೇಳಿದ್ದಾರೆ. ಕೇಂದ್ರ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ ಆಗಾಗ ಮುಖ್ಯಮಂತ್ರಿಯಾಗುತ್ತಿದ್ದೆ ಎಂಬ ಹೇಳಿಕೆಗಳನ್ನು ನಿಡುತ್ತಲೇ ಇರುತ್ತಾರೆ. ಈ ಹಿಂದೆ ಕೂಡ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವ ಹೋರಾಟದಲ್ಲೂ ಕೂಡ ಎಲ್ಲರ ಜೊತೆ ಅಡ್ಜಸ್ಟ್ ಆಗಿದ್ದರೆ ನಾನೆ ಮುಖ್ಯಮಂತ್ರಿಯಾಗುತ್ತಿದ್ದೆ ಎಂದಿದ್ದರು. ಇದಕ್ಕೂ ಮುಂಚೆ ಮುಖ್ಯಮಂತ್ರಿ ಆಗುವ ಅವಕಾಶವಿತ್ತು, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನನಗೆ ಅವಕಾಶ ತಪ್ಪಿಸಿದರು ಎಂದು ಹೇಳಿದ್ದರು. ವಿಧಾನಸಭೆ ಚುನಾವಣೆ ಹತ್ತಿರದಲ್ಲಿ ಇರುವಾಗಲೆ ಈ ಮಾತುಗಳನ್ನು ಆಡಿದ್ದಾರೆ.
ಕಳೆದ ರಾತ್ರಿ ಕಲಬುರಗಿ ನಗರದಲ್ಲಿ ನಡೆದ ಶಿವ ಪಾರ್ವತಿ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು ನಾನು ಯಾವುದೇ ಹುದ್ದೆಯ ಆಸೆ ಪಟ್ಟವನಲ್ಲ. ಆ ಹುದ್ದೆ ನನಗೆ ಬರುವುದಿದ್ದರೇ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಏನು ಆಗದಿದ್ದರೂ ಪರವಾಗಿಲ್ಲ, ಮತ್ತೊಬ್ಬರನ್ನು ನೋಡಿ ಖುಷಿ ಪಡುತ್ತೇನೆ. ಮತ್ತೊಬ್ಬರನ್ನು ನೋಡಿ ಸಂತೋಷಪಡುವ ವ್ಯಕ್ತಿ ನಾನು ಎಂದು ಹೇಳಿದ್ದಾರೆ.
ವೈಷಮ್ಯ ಮರೆತು ಯಡಿಯೂರಪ್ಪರನ್ನು ಹಾಡಿ ಹೊಗಳಿದ ಯತ್ನಾಳ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಮ್ಮನ್ನೆಲ್ಲ ಮುನ್ನಡೆಸುತ್ತಿದ್ದರು. ಬಿಎಸ್ ಯಡಿಯೂರಪ್ಪ ಅವರ ಜತೆ ಏನೇ ವೈಷಮ್ಯ ಇರಬಹುದು, ಅವರು ನಮ್ಮ ನಾಯಕರು. ಅನಂತಕುಮಾರ್ ಮತ್ತು ಯಡಿಯೂರಪ್ಪ ಕೃಷ್ಣ ಅರ್ಜುನ ರೀತಿ ಪಕ್ಷ ಕಟ್ಟಿದರು. ಯಡಿಯೂರಪ್ಪ, ಅನಂತಕುಮಾರ್ ನನ್ನನ್ನು ಕೇಂದ್ರ ಸಚಿವರನ್ನಾಗಿ ಮಾಡಿದರು ಎಂದು 15ನೇ ಅಧಿವೇಶನದ ಕೊನೆಯ ದಿನ ವಿಧಾನಸಭೆಯಲ್ಲಿ ಹೇಳಿದ್ದರು. ಪಕ್ಷ ಇಂದು ಈ ಸ್ಥಾನದಲ್ಲಿ ಇರಲು ಅವರೇ ಕಾರಣ ಎಂದು ಯತ್ನಾಳ್ ಬಿಎಸ್ವೈ ಅವರನ್ನು ಶ್ಲಾಘಿಸಿದರು.